ADVERTISEMENT

Diwali 2024: ‘ಅಂಧತ್ವ’ ತರದಿರಲಿ ಬೆಳಕಿನ ಹಬ್ಬ

ಸಂತೋಷ ಜಿಗಳಿಕೊಪ್ಪ
Published 31 ಅಕ್ಟೋಬರ್ 2024, 5:59 IST
Last Updated 31 ಅಕ್ಟೋಬರ್ 2024, 5:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾವೇರಿ: ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಎಲ್ಲರೂ ಸಿದ್ಧರಾಗಿದ್ದಾರೆ. ಹಬ್ಬದ ವಿಶೇಷತೆಗಳಲ್ಲಿ ಪಟಾಕಿಯೂ ಒಂದು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪಟಾಕಿಗಳ ಸದ್ದು ಜೋರಾಗಿರುತ್ತದೆ. ಈ ವರ್ಷದ ಹಬ್ಬದ ಆಚರಣೆಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ.

ಹಬ್ಬದ ಆಚರಣೆಗಾಗಿ ವಿವಿಧ ಪಟಾಕಿಗಳು ಮಾರುಕಟ್ಟೆಗೆ ಬಂದಿವೆ. ಮಕ್ಕಳು, ಪಟಾಕಿ ಹಚ್ಚಲು ಉತ್ಸುಹಕರಾಗಿದ್ದಾರೆ. ಆದರೆ, ಪಟಾಕಿ ಹಚ್ಚುವ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು.

ADVERTISEMENT

ಪಟಾಕಿ ಹಾರಿಸುವ ಸಂದರ್ಭದಲ್ಲಿ ಮಕ್ಕಳು, ವೃದ್ಧರು ಹಾಗೂ ಇತರರ ಬಗ್ಗೆ ಎಚ್ಚರಿಕೆ ವಹಿಸಬೇಕು. ಪಟಾಕಿ ಹಚ್ಚುವವರು, ಅಕ್ಕಪಕ್ಕದಲ್ಲಿರುವ ಜನರನ್ನು ನೋಡಿಕೊಂಡು ಪಟಾಕಿ ಹಾರಿಸಬೇಕು. ತಮ್ಮ ಸಂಭ್ರಮದಿಂದ ಮತ್ತೊಬ್ಬರ ಜೀವನದಲ್ಲಿ ಕತ್ತಲು ಆವರಿಸುವಂತಾಗಬಾರದು.

ಕತ್ತಲು ಕಳೆದು ಬೆಳಕು ಮೂಡಿಸುವ ಹಬ್ಬ ದೀಪಾವಳಿ. ಪಟಾಕಿ ಹೆಸರಿನಲ್ಲಿ ಕಣ್ಣುಗಳಿಗೆ ಹಾನಿಯಾಗಿ, ಕತ್ತಲಿನ ಜೀವನಕ್ಕೆ ಆಸ್ಪದ ನೀಡಬಾರದು. ಆದಷ್ಟು, ಜಾಗೃತಿ ವಹಿಸಿ ಪಟಾಕಿಗಳನ್ನು ಸಿಡಿಸಬೇಕು.

ಪಟಾಕಿಗಳಿಂದಾದ ಹೊಗೆ ಮತ್ತು ಸುಟ್ಟು ಉಳಿದ ಅವಶೇಷಗಳು ಕಣ್ಣುಗಳ ಉರಿ-ಊತಕ್ಕೆ ಕಾರಣವಾಗಬಹುದು. ಪಟಾಕಿಯಲ್ಲಿನ ರಾಸಾಯನಿಕ ಹಾನಿಯನ್ನುಂಟು ಮಾಡಬಹುದು. ನೋವು ಮತ್ತು ಕಣ್ಣು ಕೆಂಪಾಗುವಿಕೆಯಿಂದ ದೃಷ್ಟಿ ಮಂದಾಗಬಹುದು. ‘ಕಾರ್ನಿಯಾ’ ಮೇಲೆ ದುಷ್ಪರಿಣಾಮ ಬೀರಬಹುದು.

ಅರ್ಥಪೂರ್ಣವಾಗಿ ಹಬ್ಬ ಆಚರಿಸಿ, ಪರಿಸರ ರಕ್ಷಿಸಿ: ‘ದೀಪಾವಳಿ, ನಮ್ಮ–ನಿಮ್ಮೆಲರ ಹಬ್ಬ. ಈ ಹಬ್ಬವನ್ನು ಅರ್ಥಪೂರ್ಣವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಪಟಾಕಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

‘ಸುಪ್ರೀಂಕೋರ್ಟ್ ಆದೇಶದಂತೆ, ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಹಾರಿಸಲು ಅವಕಾಶವಿದೆ. ಹಸಿರು ಪಟಾಕಿ ಹೊರತುಪಡಿಸಿ ಇತರೆ ಎಲ್ಲ ಪಟಾಕಿಗಳನ್ನು ನಿಷೇಧಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು, ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯ ಉಂಟುಮಾಡುತ್ತವೆ. ಇದರಿಂದ ಪರಿಸರ ಹಾಗೂ ಜನರ ಆರೋಗ್ಯ ಹಾಳಾಗುತ್ತಿದೆ. ಪ್ರಾಣಿ-ಪಕ್ಷಿಗಳಿಗೂ ಅಪಾಯ ತರುತ್ತಿದೆ’ ಎಂದರು.

‘ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ನ್ಯಾಷನಲ್ ಎನ್ವಿರಾನ್‌ಮೆಂಟಲ್  ಎಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅವರ ಲಾಂಛನ ಇರುವ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಬೇಕು’ ಎಂದು ಹೇಳಿದರು.

‘ಮಕ್ಕಳು, ವೃದ್ಧರ ಬಗ್ಗೆ ಎಚ್ಚರಿಕೆ ವಹಿಸಬೇಕು. ಶಿಕ್ಷಣ ಸಂಸ್ಥೆ, ಆಸ್ಪತ್ರೆ, ವೃದ್ಧಾಶ್ರಮ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. 125 ಡೆಸಿಬಲ್‌ಗೂ ಮೇಲ್ಪಟ್ಟ ಪಟಾಕಿಗಳ ಹಾರಿಸುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.

‘ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಿದ ನಂತರ, ತ್ಯಾಜ್ಯವನ್ನು ಸ್ಥಳದಲ್ಲೇ ಬಿಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಧಕ್ಕೆ ಆಗುತ್ತದೆ. ಪಟಾಕಿ ಸಿಡಿತದ ನಂತರದ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಕಸ ವಿಲೇವಾರಿ ವಾಹನಗಳಿಗೆ ನೀಡಿ, ಕಸ ವಿಲೇವಾರಿಗೆ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

‘ಸಾಂಪ್ರದಾಯಿಕ ಪಟಾಕಿಗಳಲ್ಲಿ ಲಿಥಿಯಂ, ಬೇರಿಯಂನಂತಹ ರಾಸಾಯನಿಕ ಅಂಶ ಹೆಚ್ಚಾಗಿರುತ್ತದೆ. ಹಸಿರು ಪಟಾಕಿಗಳಲ್ಲಿ ಇವುಗಳ ಬಳಕೆ ತೀರಾ ಕಡಿಮೆ. ಸಾಂಪ್ರದಾಯಿಕ ಪಟಾಕಿಗಳ ಶಬ್ದ 160 ರಿಂದ 200 ಡೆಸಿಬಲ್‌ ಇದ್ದರೆ, ಹಸಿರು ಪಟಾಕಿಗಳ ಶಬ್ದ 100ರಿಂದ 130 ಡೆಸಿಬಲ್‌ ಇರುತ್ತದೆ’ ಎಂದರು.

ಪಟಾಕಿ: ವೈದ್ಯರ ಸಲಹೆ ಪಾಲಿಸಿ

l ಉತ್ತಮ ಗುಣಮಟ್ಟದ ಹಸಿರು ಪಟಾಕಿ ಖರೀದಿಸಿ, ಕಳಪೆ ಗುಣಮಟ್ಟದ ಹಸಿರು ಪಟಾಕಿ ಖರೀದಿಸಿದರೆ ಅಪಾಯ ಸಾಧ್ಯತೆ ಹೆಚ್ಚು

l  ಪಟಾಕಿ ಬಾಕ್ಸ್‌ಗಳ ಮೇಲೆ ಎಚ್ಚರಿಕೆ ಸಂದೇಶಗಳನ್ನು ಬರೆಯಲಾಗಿರುತ್ತದೆ. ಅದನ್ನು ಓದಿಕೊಂಡು ಪಾಲಿಸಬೇಕು

l ಕನಿಷ್ಠ 2ರಿಂದ 3 ಅಡಿ ದೂರದಲ್ಲಿ ನಿಂತು ಪಟಾಕಿ ಹಚ್ಚಬೇಕು.

l ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿದರೆ ಉತ್ತಮ

l ಮೈದಾನ ಹಾಗೂ ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿದರೆ ಅನುಕೂಲ

l ಬೆಂಕಿ ಹಾಗೂ ತಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಟ್ಟರೆ ಅಪಾಯ

l ಗಾಜು ಹಾಗೂ ಇತರೆ ವಸ್ತುಗಳ ಒಳಗೆ ಪಟಾಕಿ ಇಟ್ಟು ಸುಡುವುದು ಅಪಾಯಕಾರಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು

l ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬಾರದು. ಪೋಷಕರು ಜೊತೆಯಲ್ಲಿರಬೇಕು.

l ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬಾರದು

l ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬಾರದು

l ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡವೇ ಬೇಡ

l ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ

l ಪಟಾಕಿಗಳನ್ನು ಅಂಗಿ–ಪ್ಯಾಂಟ್‌ಗಳ ಜೇಬುಗಳಲ್ಲಿ ಇಟ್ಟುಕೊಳ್ಳಬಾರದು

ಕಣ್ಣಿಗೆ ತೊಂದರೆಯಾದರೆ ಏನು ಮಾಡಬೇಕು ?

l ಪಟಾಕಿ ಸಿಡಿಸುವಾಗ ಕಣ್ಣು ಹಾಗೂ ದೇಹದ ಇತರೆ ಭಾಗಕ್ಕೆ ಸಮಸ್ಯೆಯಾದರೆ ಕೂಡಲೇ ನೇತ್ರ ತಜ್ಞರು ಹಾಗೂ ವೈದ್ಯರನ್ನು ಸಂಪರ್ಕಿಸಬೇಕು

l ಕಣ್ಣು ತಿಕ್ಕುವುದಾಗಲಿ ಹಾಗೂ ನೀರು ಹಾಕುವುದಾಗಲಿ ಮಾಡಬಾರದು.

l ಕಣ್ಣಿಗೆ ತೊಂದರೆ ಆದಾಗ ಸ್ವಯಂ ವೈದ್ಯರಾಗಿ ‘ಐಡ್ರಾಪ್‌’ನಂಥ ಯಾವುದೇ ಔಷಧಗಳನ್ನು ಕಣ್ಣಿಗೆ ಹಾಕಬಾರದು. ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಶಾಶ್ವತ ಅಂಧತ್ವಕ್ಕೂ ಕಾರಣವಾಗಬಹುದು.

l ಕಣ್ಣಿಗೆ ನೋವಾಯಿತು ಎಂದುಕೊಂಡು ವೈದ್ಯರ ಶಿಫಾರಸ್ಸಿಲ್ಲದೇ ಪೇನ್‌ಕಿಲ್ಲರ್‌ ಮಾತ್ರೆ ತೆಗೆದುಕೊಳ್ಳಬಾರದು. ಅಂಥ ಸಂದರ್ಭದಲ್ಲಿ ಬ್ಲೀಡಿಂಗ್ (ರಕ್ತ ಹರಿಯುವುದು) ಶುರುವಾಗುವ ಅಪಾಯವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.