ಹಾನಗಲ್: ಕೃಷಿಕರ ಸಡಗರ ಹೆಚ್ಚಿಸುವ ಹಬ್ಬ ದೀಪಾವಳಿ. ಅಲ್ಲಲ್ಲಿ ಕೊಬ್ಬರಿ ಹೋರಿಗಳ ಸ್ಪರ್ಧೆ ಹುರುಪು ತುಂಬಿಸುತ್ತದೆ. ವಿಶೇಷವಾಗಿ ಹಾನಗಲ್‌ನ ಗೌಳಿಗಲ್ಲಿಯಲ್ಲಿ ಪ್ರತಿ ದೀಪಾವಳಿಯಂದು ನಡೆಯುವ ಎಮ್ಮೆ ಕಾಳಗ ಆಕರ್ಷಣೆಯಾಗುತ್ತಿದೆ.
ದೀಪಾವಳಿ ಹಬ್ಬದಂದು ಇಲ್ಲಿನ ಗೌಳಿ ಜನರು ಈ ವಿಶೇಷ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಮೈದುಂಬಿದ ಬಲಿಷ್ಠ ಎಮ್ಮೆಗಳು ತಮ್ಮ ಕರಾಮತ್ತು ಪ್ರದರ್ಶಿಸುತ್ತವೆ. ಈ ಎಮ್ಮೆ ಕಾಳಗಕ್ಕೆ ತನ್ನದೇ ಆದ ಇತಿಹಾಸವಿದೆ. ಇದು ಗೌಳಿಗರ ಸಂಪ್ರದಾಯವಾಗಿ ರೂಪುಗೊಂಡಿದೆ.
ಹಿಂದಿನ ಕಾಲದಲ್ಲಿ ಹಾನಗಲ್ ಭಾಗದಲ್ಲಿ ಕಾಡು ಅಧಿಕವಾಗಿದ್ದ ವೇಳೆ ಆಹಾರಕ್ಕಾಗಿ ಮೇಯಲು ಹೋಗುತ್ತಿದ್ದ ಎಮ್ಮೆಗಳಿಗೆ ಕ್ರೂರ ಮೃಗಗಳಿಂದ ರಕ್ಷಿಸಿಕೊಳ್ಳುವ ವಿಧಾನವನ್ನು ಅಂದಿನ ಗೌಳಿಗರು ಕಲಿಸಿಕೊಡುತ್ತಿದ್ದರಂತೆ. ಈ ಸಮರ ಕಲೆ ಇಂದು ಸಾಂಪ್ರದಾಯಿಕ ಎಮ್ಮೆ ಕಾಳಗವಾಗಿ ಪರಿವರ್ತಿತಗೊಂಡಿದೆ.
ದೀಪಾವಳಿ ಹಬ್ಬದಲ್ಲಿ ಇಲ್ಲಿ ನಡೆಯುವ ಎಮ್ಮೆ ಕಾಳಗ ವೀಕ್ಷಣೆಗೆ ಪಟ್ಟಣ ಮತ್ತು ಗ್ರಾಮೀಣ ಭಾಗದ ಸಾವಿರಾರು ಜನರು ಬರುತ್ತಾರೆ. ಎಮ್ಮೆ ಕಾಳಗದ ಕಣಕ್ಕೆ ಪೂಜೆ ಸಲ್ಲಿಸುವ ಹೊತ್ತಿನಲ್ಲಿ ಎಮ್ಮೆಗಳು ಸಮರಾಭ್ಯಾಸದ ಮೂಲಕ ಹೂಂಕರಿಸುವ ದೃಶ್ಯ ಮೈನವಿರೇಳಿಸುತ್ತದೆ.
ಹಾಲು ಮಾರುವ ವೃತ್ತಿಯ ಗೌಳಿಗರು, ತಮ್ಮ ಎಮ್ಮೆಗಳನ್ನು ತೊಳೆದು ಸ್ವಚ್ಚಗೊಳಿಸಿ, ಕೊಂಬುಗಳಿಗೆ ಬಣ್ಣ ಹಚ್ಚುತ್ತಾರೆ. ಮೈ ಮೇಲೆ ಶಾಲು, ಬಲೂನ್ ಕಟ್ಟಿ ಸಿಂಗಾರ ಮಾಡಿಕೊಂಡು ಬಂದಿರುತ್ತಾರೆ.
ಮಿರಿಮಿರಿ ಮಿಂಚುವ ಎಮ್ಮೆಗಳು ರೋಶಾವೇಷದಿಂದ ನುಗ್ಗಿ ಬಂದು ಹುಲಿ ಆಕೃತಿಯ ಚರ್ಮಕ್ಕೆ ಗುದ್ದುವ ದೃಶ್ಯ ರೋಮಾಂಚನ ಮೂಡಿಸುತ್ತದೆ. ಮಾಲೀಕನ ಜೊತೆಯಲ್ಲಿ ಅಖಾಡಕ್ಕೆ ನುಗ್ಗಿಬರುವ ಎಮ್ಮೆಗಳು, ಒಮ್ಮೆ ಚರ್ಮದ ಆಕೃತಿ ನೋಡಿದ ತಕ್ಷಣ ಹೂಂಕರಿಸುತ್ತವೆ. ಕೆಂಗಣ್ಣು ಬೀರಿ, ದೊಡ್ಡ ಹೆಜ್ಜೆಗಳನ್ನು ಇಡುತ್ತ, ಓಡಿ ಬಂದು ಚರ್ಮದ ಆಕೃತಿಗೆ ಬಲವಾಗಿ ಗುದ್ದು ಕೊಡುತ್ತವೆ.
ಸದಾ ಶಾಂತವಾಗಿರುವ, ನಿಧಾನ ನಡವಳಿಕೆಯ ಎಮ್ಮೆಗಳು ಕಾಳಗಕ್ಕೆ ನಿಂತರೆ, ಚಾಕಚಕ್ಯತೆ, ತಮ್ಮ ಬಲಿಷ್ಠತೆಯನ್ನು ತೋರುತ್ತವೆ ಎಂಬುದನ್ನು ಇಲ್ಲಿ ನಡೆಯುವ ಕಾಳಗ ನಿರೂಪಿಸುತ್ತದೆ.
ಕಟ್ಟಿಗೆ ತುಂಡಿಗೆ ಜೋತು ಹಾಕಿ ನಿಲ್ಲಿಸಿದ್ದ ಹುಲಿ ಆಕೃತಿಯ ಚರ್ಮಕ್ಕೆ ಗುದ್ದಿದ ಬಳಿಕ ನೆಲಕ್ಕೆ ಬೀಳುತ್ತಿದ್ದ ಚರ್ಮವನ್ನು ಸಂಘಟಕರು ಎತ್ತಿ ಓಡಾಡುತ್ತಿದ್ದರೆ, ರೋಶಗೊಂಡ ಎಮ್ಮೆಗಳು ಚರ್ಮದ ಹಿಂದೆ ಬೆನ್ನು ಹತ್ತಿ ಮತ್ತೆ ಮತ್ತೆ ಡಿಚ್ಚಿ ಕೊಡುತ್ತವೆ. ಇದನ್ನು ಕಂಡ ಪ್ರೇಕ್ಷಕರ ಸಿಳ್ಳೆ, ಕೇಕೆ, ಚೀರಾಟಕ್ಕೆ ಎಮ್ಮೆಗಳು ಮತ್ತಷ್ಟು ಕ್ರೋದ ಪ್ರದರ್ಶಿಸುತ್ತವೆ. ಇಂತಹ ಮೈನವಿರೇಳಿಸುವ ಎಮ್ಮೆ ಕಾಳಗವನ್ನು ವರ್ಷದಲ್ಲಿ ಒಮ್ಮೆ ಕಣ್ತುಂಬಿಕೊಳ್ಳಬೇಕು.
ಪರಸಪ್ಪ ಗುಂಡೆಗೌಳಿ, ರಾಜು ಗುಂಡೆಗೌಳಿ, ನಾಗರಾಜ ತಡಸದ, ನಾಗರಾಜ ಅರಳಿಮರದ, ಬಸವರಾಜ ಗುಂಡೆಗೌಳಿ, ರಾಘವೇಂದ್ರ ಗೌಳಿ, ಮನೋಜ ಗೌಳಿ ಮತ್ತು ಸಂಗಡಿಗರು ಎಮ್ಮೆ ಕಾಳಗವನ್ನು ವ್ಯವಸ್ಥಿತವಾಗಿ ಆಯೋಜಿಸುತ್ತಾರೆ. ಈ ಭಾಗದ ಪುರಸಭೆ ಸದಸ್ಯ ನಾಗಪ್ಪ ಸವದತ್ತಿ ಸಹಕಾರ ನೀಡುತ್ತಾರೆ.
‘ಎಮ್ಮೆ ಕಾಳಗ ವರ್ಷದಿಂದ ವರ್ಷಕ್ಕೆ ಆಕರ್ಷಣೆ ಪಡೆಯುತ್ತಿದೆ. ಸ್ಪರ್ಧೆಯಲ್ಲಿ ವಿಜೇತ ಎಮ್ಮೆಗಳಿಗೆ ಬಹುಮಾನ ನೀಡುತ್ತೇವೆ. ದೀಪಾವಳಿ ಪಾಡ್ಯದ ದಿನದಂದು ಗೌಳಿಗಲ್ಲಿಯ ಸರ್ಕಲ್‌ನಲ್ಲಿ ಎಮ್ಮೆ ಕಾಳಗ ನಡೆಯಲಿದೆ’ ಎಂದು ಸಂಘಟಕ ಪರಸಪ್ಪ ಗೌಳಿ ತಿಳಿಸಿದ್ದಾರೆ.
‘ಕೃಷಿಕರ ಮೆಚ್ಚಿನ ಕ್ರೀಡೆಯಾಗಿ ಕೊಬ್ಬರಿ ಹೋರಿ ಸ್ಪರ್ಧೆ ಬೆಳೆದುಬಂದಿದೆ. ಇದು ನಮ್ಮ ಸಂಪ್ರದಾಯವಾಗಿದೆ. ಆದರೆ, ಕಠಿಣ ನಿಯಮಗಳು ಸ್ಪರ್ಧೆ ಆಯೋಜನೆಗೆ ತೊಡಕಾಗುತ್ತಿವೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾದ ಹೋರಿ ಸ್ಪರ್ಧೆ ಆಯೋಜನೆಗೆ ಸರಳ ನಿಯಮಗಳು ಜಾರಿಗೊಳ್ಳಬೇಕು’ ಎಂದು ಕೊಬ್ಬರಿ ಹೋರಿ ಸ್ಪರ್ಧೆ ಸಂಘಟಿಸುವ ಇಲ್ಲಿನ ಗಣೇಶ ಮೂಡ್ಲಿಯವರ ಹೇಳುತ್ತಾರೆ.
ದೀಪಾವಳಿ ಹಬ್ಬದ ಸಡಗರ ಎಲ್ಲೆಡೆ ಆವರಿಸುತ್ತಿದ್ದರೆ ಇತ್ತ ರೈತರ ಮನೆಯಲ್ಲಿ ಜಾನುವಾರುಗಳನ್ನು ಸಿಂಗರಿಸುವ ಕೆಲಸ ನಡೆಯುತ್ತದೆ. ವಿಶೇಷವಾಗಿ ಹೋರಿಗಳ ಕೊಂಬಿಗೆ ಬಣ್ಣ ಹಚ್ಚಿ ಕಾಲುಗಳಲ್ಲಿ ಗೆಜ್ಜೆ ಕಟ್ಟಿ ಮೈಮೇಲೆ ತರೇವಾರಿ ಜೂಲಾ ಹಾಕಿ ಸಿದ್ಧಗೊಳಿಸುತ್ತಾರೆ. ಕೊರಳಲ್ಲಿ ಕೊಬ್ಬರಿ ಹಾರ ಕಟ್ಟಿ ಹಲಗೆ ಬಾರಿಸಿಕೊಂಡು ಕೃಷಿಕ ಯುವಕರು ಕುಣಿದಾಡುತ್ತಾರೆ. ಹೋರಿ ಓಡಿಸುವ ಸ್ಥಳಕ್ಕೆ ಬಂದು ಬೀಗುತ್ತಾರೆ. ಮಿಂಚಿನ ವೇಗದಲ್ಲಿ ಕಾಲ್ಕೀಳುವ ಹೋರಿಗಳ ಹಿಂದೆ ಸಿಳ್ಳೆ ಕೇಕೆ ಹಾಕಿಕೊಂಡು ಯುವಕರೂ ಓಡುತ್ತಾರೆ.
ದೀಪಾವಳಿ ಬಳಿಕ ಹಾನಗಲ್ ತಾಲ್ಲೂಕಿನಲ್ಲಿ ಕೊಬ್ಬರಿ ಹೋರಿಗಳ ಅಬ್ಬರ ಶುರುವಾಗುತ್ತದೆ. ವಿವಿಧ ಗ್ರಾಮಗಳಲ್ಲಿ ಭರ್ಜರಿ ಹಬ್ಬ ಆಯೋಜನೆಗೊಳ್ಳುತ್ತದೆ. ಪಟ್ಟಣದಲ್ಲಿ ನಡೆಯುವ ಹೋರಿ ಸ್ಪರ್ಧೆ ಕಣ್ತುಂಬಿಕೊಳ್ಳಲು ಹೊರರಾಜ್ಯದವರೂ ಸೇರಿದಂತೆ ಜನಸಾಗರವೇ ಸೇರುತ್ತದೆ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಇಲ್ಲಿ ಹೋರಿ ಸ್ಪರ್ಧೆ ಆಯೋಜಿಸಲಾಗುತ್ತದೆ. ವಿವಿಧ ಯುವಕ ಸಂಘಟನೆಗಳು ವ್ಯವಸ್ಥಿತವಾಗಿ ಸ್ಪರ್ಧೆ ಆಯೋಜಿಸುತ್ತಾರೆ. ಆದರೆ ಕೆಲವು ಸಣ್ಣಪುಟ್ಟ ಅನಾಹುತಗಳು ಸಂಭವಿಸುತ್ತವೆ. ಇಲ್ಲಿನ ಹಳೆಕೋಟಿ ಭಾಗದ ಕಂದಕವು ಹೋರಿ ಸ್ಪರ್ಧೆಗೆ ನೈಸರ್ಗಿಕ ಕ್ರೀಡಾಂಗಣವಾಗಿ ರೂಪುಗೊಂಡಿದೆ. ಎರಡೂ ಬದಿಯಲ್ಲಿ ಗುಡ್ಡವಿದೆ. ನಡುವೆ ಇರುವ ತಗ್ಗು ಭಾಗದಲ್ಲಿ ಹೋರಿ ಸ್ಪರ್ಧೆ ನಡೆಯುತ್ತದೆ. ಅಪಾಯಕ್ಕೆ ಅವಕಾಶವಿಲ್ಲದಂತೆ ಪ್ರೇಕ್ಷಕರು ಸ್ಪರ್ಧೆ ವೀಕ್ಷಿಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.