ADVERTISEMENT

ಶಿಗ್ಗಾವಿ: ಪಾಂಡವರ ಮೂರ್ತಿಗಳಿಗೆ ವಿಶೇಷ ಪೂಜೆ, ಪ್ರಾರ್ಥನೆ

ಎಂ.ವಿ.ಗಡಾದ
Published 31 ಅಕ್ಟೋಬರ್ 2024, 6:05 IST
Last Updated 31 ಅಕ್ಟೋಬರ್ 2024, 6:05 IST
ದೀಪಾವಳಿ ಹಬ್ಬದಂದು ಹಟ್ಟಿ ಲಕ್ಕವ್ವ ಹಾಗೂ ಪಾಂಡವರ ಮೂರ್ತಿಗಳ ಪೂಜೆ ಮಾಡಿರುವುದು (ಸಂಗ್ರಹ ಚಿತ್ರ)
ದೀಪಾವಳಿ ಹಬ್ಬದಂದು ಹಟ್ಟಿ ಲಕ್ಕವ್ವ ಹಾಗೂ ಪಾಂಡವರ ಮೂರ್ತಿಗಳ ಪೂಜೆ ಮಾಡಿರುವುದು (ಸಂಗ್ರಹ ಚಿತ್ರ)   

ಶಿಗ್ಗಾವಿ: ಬೆಳಕು ಅಭಿವೃದ್ಧಿ ಸಂಕೇತವಾಗಿದೆ. ಬದುಕಿನ ವಿಕಾಸವನ್ನು ತೋರಿಸುವ ಮಾರ್ಗದರ್ಶಿಯಾಗಿ ಆಚರಿಸುವ, ದೀಪಗಳ ಹಬ್ಬ ದೀಪಾವಳಿ. ಅಜ್ಞಾನ ದೂರ ಮಾಡಿ, ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯುವ ಹಬ್ಬ ದೀಪಾವಳಿ. ಬದುಕಿನಲ್ಲಿ ಹೊಸ ಆಸೆಗಳನ್ನು ಚಿಗುರಿಸಿ, ಹೊಸ ಚೈತನ್ಯ ತುಂಬುವುದೇ ದೀಪಾವಳಿ. ಈ ಹಬ್ಬದಂದು ಪಾಂಡವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವ ಪದ್ಧತಿಯಿದೆ.

ಮುಂಗಾರು ಮುಗಿದು ಹಿಂಗಾರು ಆರಂಭವಾಗುತ್ತಿದ್ದಂತೆ ವಿಜಯದಶಮಿ ಹಬ್ಬದ ನಂತರ ಬರುವ ದೊಡ್ಡ ಹಬ್ಬವೆಂದರೆ ದೀಪಾವಳಿ ಹಬ್ಬವಾಗಿದೆ. ಅದನ್ನು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ನಾಲ್ಕು ದಿನಗಳವರೆಗೆ ಸಂಭ್ರಮದಿಂದ ಆಚರಣೆ ಮಾಡುವುದನ್ನು ಕಾಣುತ್ತೇವೆ.

ಆರಂಭದಲ್ಲಿ ನೀರು ತುಂಬುವ ಸಂಪ್ರದಾಯ ಕಾರ್ಯವನ್ನು ನೆರವೇರಿಸುತ್ತಾರೆ. ನರಕ ಚತುರ್ದಶಿ, ಅಭ್ಯಂಜನ ಸ್ನಾನ, ಅಮಾವಾಸ್ಯೆ ಮತ್ತು ಧನಲಕ್ಷ್ಮಿ ಪೂಜೆ, ಬಲಿಪಾಡ್ಯಮಿ, ಹಬ್ಬದ ಕರಿ ಬಿಡುವುದು, ವರ್ಷದ ತೊಡಕು... ಹೀಗೆ ಹತ್ತಾರು ವಿಶಿಷ್ಠ ಸಾಂಪ್ರದಾಯಿಕ ಪದ್ಧತಿಗಳನ್ನು ಆಚರಿಸಲಾಗುತ್ತದೆ.

ADVERTISEMENT

ಹಬ್ಬಕ್ಕಾಗಿ ದೂರದ ಸಂಬಂಧಿಗಳು ಒಗ್ಗೂಡುತ್ತಾರೆ. ಉದ್ಯೋಗ ಅರಸಿಕೊಂಡು ನಗರ, ಪಟ್ಟಣದಲ್ಲಿ ಇರುವ ಜನ ತಮ್ಮ ಮನೆಗಳಿಗೆ ಬಂದು ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಸಂಬಂಧಗಳನ್ನು ಬೆಸೆಯುವ ಮೂಲಕ ಬಂಧು–ಬಾಂಧವರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ.

ಪಾಂಡವರ ಮೂರ್ತಿಗೆ ಪೂಜೆ: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಸಂಪ್ರದಾಯದ ಮನೆಗಳಲ್ಲಿ ಕೃಷಿಗೆ ಬಳಕೆ ಮಾಡುವ ಸಾಮಗ್ರಿಗಳನ್ನು ಸ್ವಚ್ಛವಾಗಿ ತೊಳೆದು ಪೂಜಿಸುತ್ತಾರೆ. ಎತ್ತು, ಗೋವುಗಳನ್ನು ಸಿಂಗರಿಸಿ ಗೋವು ಪೂಜೆ ಸಲ್ಲಿಸುತ್ತಾರೆ. ಎತ್ತುಗಳಿಗೆ ಬಣ್ಣ,ಬಣ್ಣದ ಬಟ್ಟೆಯಿಂದ ಅಲಂಕರಿಸುತ್ತಾರೆ. ಹೀಗೆ ಅಲಂಕೃತಗೊಂಡಿರುವ ಜೋಡೆತ್ತುಗಳ ಮೆರವಣಿಗೆ, ಕೊಬ್ಬರಿ ಹೋರಿ ಬಿಡುವುದು, ಕರಿ ಬಿಡುವ ಕಾರ್ಯಗಳು ನಡೆಯುತ್ತವೆ. ಮನೆಯಲ್ಲಿ ಸಗಣಿಯಿಂದ ಪಾಂಡವರ ಮೂರ್ತಿ ತಯಾರಿಸಿ ಪೂಜಿಸಿದರೆ, ಹೊಲಗದ್ದೆಗಳಲ್ಲಿ ಕಲ್ಲಿನ ಪಾಂಡವರಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ವ್ಯಾಪಾರಸ್ಥರು ತಮ್ಮ ವಾಹನಗಳನ್ನು, ಅಂಗಡಿಗಳನ್ನು ಹೂಮಾಲೆಗಳಿಂದ ತಳಿರು ತೋರಣಗಳಿಂದ ಅಲಕರಿಸುವ ಜತೆಗೆ ಲಕ್ಷ್ಮಿ ಪೂಜೆ ಸಲ್ಲಿಸುವ ಸಂಭ್ರಮಾಚರಣೆಯನ್ನು ಈ ಹಬ್ಬದಲ್ಲಿ ಕಾಣುತ್ತೇವೆ.

ಮನೆಯಲ್ಲಿ ಬಂಧು, ಬಾಂಧವರು ಒಟ್ಟಾಗಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಖರ್ಜಿಕಾಯಿ, ಹೋಳಿಗೆ ಸೇರಿದಂತೆ ವಿವಿಧ ತರಹದ ಸಿಹಿ ಪದಾರ್ಥಗಳನ್ನು ಸಾಮೂಹಿಕವಾಗಿ ಸವಿಯುತ್ತಾರೆ. ಅಳಿಯ, ಮಗಳಿಗೆ ಹೊಸ ವಸ್ತ್ರ, ಆಭರಣಗಳು ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುತ್ತಿದೆ.

ಪಟಾಕಿಗಳ ಚಿತ್ತಾರ

ಹಬ್ಬದಂದು ಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ಮಹಿಳೆಯರು ಮಕ್ಕಳು ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಯುವಕರು ಮಕ್ಕಳು ಪಟಾಕಿ ಹೊಡೆಯುತ್ತಿದ್ದರೆ ಮನೆಯ ಹಿರಿಯರು ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಮಾವಿನ ತಳಿರು ತೋರಣ ಬಾಳೆ ಕಂದು ಕಟ್ಟಿ ಅಲಂಕಾರ ಮಾಡುತ್ತಾರೆ. ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವುದು ಬಲು ಆಕರ್ಷಕವಾಗಿ ಕಂಡು ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.