ADVERTISEMENT

ಕಿವಿ ಸಮಸ್ಯೆಗೆ ಮನೆಮದ್ದು ಬಳಸಬೇಡಿ: ಡಾ.ಶ್ರೀಕಾಂತ ಸಲಹೆ

‘ವಿಶ್ವ ಶ್ರವಣ ದಿನ’ದ ವಿಶೇಷ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 14:34 IST
Last Updated 10 ಮಾರ್ಚ್ 2021, 14:34 IST
ಹಾವೇರಿಯ ಜಿ.ಎಚ್. ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ವಿಶ್ವ ಶ್ರವಣ ದಿನದ ಅಂಗವಾಗಿ ಬುಧವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು
ಹಾವೇರಿಯ ಜಿ.ಎಚ್. ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ವಿಶ್ವ ಶ್ರವಣ ದಿನದ ಅಂಗವಾಗಿ ಬುಧವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು   

ಹಾವೇರಿ: ‘ಡಿಜೆಯಂತಹ ಹೆಚ್ಚು ಶಬ್ದಮಾಲಿನ್ಯದಿಂದ ದೂರ ಉಳಿಯಿರಿ. ಕಿವಿಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಅವೈಜ್ಞಾನಿಕ ರೀತಿಯಲ್ಲಿ ಮದ್ದು ಮಾಡಿಕೊಳ್ಳುವುದನ್ನು ಕೈಬಿಡಿ. ಕಿವಿಯ ಯಾವುದೇ ಸಮಸ್ಯೆ ಉಂಟಾದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಿ’ ಹಿರೇಕೆರೂರಿನ ಸರ್ಕಾರಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ.ಶ್ರೀಕಾಂತ ಹೇಳಿದರು.

‘ವಿಶ್ವ ಶ್ರವಣ ದಿನ’ದ ಅಂಗವಾಗಿ ನಗರದ ಜಿ.ಎಚ್. ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮತ್ತು ಜಿಲ್ಲಾ ಆಸ್ಪತ್ರೆ, ರಾಷ್ಟ್ರೀಯ ಶ್ರವಣ ದೋಷ ನಿವಾರಣಾ ಹಾಗೂ ನಿಯಂತ್ರಣ ಕಾರ್ಯಕ್ರಮ ವಿಭಾಗದಿಂದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಭಾರತದಲ್ಲಿ 63 ಬಿಲಿಯನ್‌ ಜನ ಕಿವುಡುತನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕಿವುಡುತನ ನಿವಾರಿಸಬಹುದು. ಕಿವುಡುತನಕ್ಕೆ ಎಲ್ಲ ಬಗೆಯ ಚಿಕಿತ್ಸೆಗಳಿವೆ ಎಂದು ಹೇಳಿದರು.

ADVERTISEMENT

ವಂಶವಾಹಿನಿಯಿಂದ, ರೆಬೆಲ್ಲಾ, ಮಂಗನಬಾವು, ಮಿದುಳು ಜ್ವರ, ಮಗು ಗರ್ಭದಲ್ಲಿದ್ದಾಗ ಕಿವಿ ಬೆಳವಣಿಗೆಗೆ ತೊಂದರೆ ಉಂಟಾದರೆ, ಮಗು ಜನಿಸಿದಾಗ ಮಗುವಿಗೆ ಆಕ್ಸಿಜನ್ ಕೊರತೆ ಉಂಟಾದರೆ, ಕೆಲವೊಂದು ಔಷಧಿ, ಇಂಜೆಕ್ಷನ್‍ಗಳು, ಧೂಮಪಾನ, ಮದ್ಯಪಾನ ಹಾಗೂ ಕೊರೊನಾ ವೈರಸ್‍ನಿಂದಲೂ ಕಿವುಡುತನ ಉಂಟಾಗುತ್ತದೆ ಎಂದು ಹೇಳಿದರು.

ನಮ್ಮ ಕಿವಿಯಲ್ಲಿರುವ ನೀರು ಬ್ಲಾಕ್ ಆಗಿ ಹೆಚ್ಚು ಒತ್ತಡ ಉಂಟಾದರೆ ಕಿವುಡುತನ ಬರುತ್ತದೆ. ಇದಕ್ಕೆಲ್ಲಾ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಬೇಕು. ಮನೆಯಲ್ಲಿಯೇ ಅವೈಜ್ಞಾನಿಕ ಪದ್ದತಿ ಬಳಸಿ ಚಿಕಿತ್ಸೆಗೆ ಮುಂದಾಗದೇ ವೈದ್ಯರ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದರು.

ನಿತ್ಯದ ಬದುಕಿನಲ್ಲಿ ಸೌಂಡ್‍ ಸ್ಪೀಕರ್, ಡಿಜೆಗಳ ಶಬ್ದದಿಂದ, ಕಾರ್ಖಾನೆಗಳ ಶಬ್ದದಿಂದ ವಾಹನಗಳ ಕರ್ಕಶ ಶಬ್ದಗಳಿಂದ ಆದಷ್ಟೂ ದೂರವಿರಬೇಕು. 80 ರಿಂದ 90 ಡೆಸಿಬಲ್ ಶಬ್ದವನ್ನು ಗ್ರಹಿಸುವುದರಿಂದ ಶ್ರವಣಕ್ಕೆ ದೋಷವಿಲ್ಲ. 140ಕ್ಕಿಂತ ಹೆಚ್ಚು ಡೆಸಿಬಲ್ ಇದ್ದರೇ ಶ್ರವಣದೋಷ ಉಂಟಾಗುತ್ತದೆ. ಅತಿಯಾದ ಶಬ್ದ ಕಿವುಡುತನವನ್ನು ತಂದೊಡ್ಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ಎಂ.ದೊಡ್ಡಮನಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿ.ಎಚ್.ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜೆ.ಆರ್.ಶಿಂಧೆ ವಹಿಸಿದ್ದರು. ಜಿಲ್ಲಾ ಆಸ್ಪತ್ರೆಯ ಇ.ಎನ್.ಟಿ ತಜ್ಞೆ ಡಾ.ಚಂದ್ರಿಕಾ ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಪಿ.ಆರ್.ಹಾವನೂರು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮಾಧಿಕಾರಿ ಡಾ.ದೇವರಾಜ್ ಎಸ್, ಡಾ.ಚೇತನ ಹಾಗೂ ಡಾ.ಬಿ.ಎ.ಕೊಲ್ಲಾಪುರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚೆನ್ನಪ್ಪ ಲಮಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.