ಹಾವೇರಿ:ಶುದ್ಧ ನೀರಿನ ಘಟಕ ಸ್ಥಗಿತವಾಗಿ ಒಂದೂವರೆ ವರ್ಷವಾಗಿದೆ. ಅಂದಿನಿಂದ ಶಿವಬಸವನಗರದ ನಿವಾಸಿಗಳು ಕುಡಿಯುವ ನೀರಿಗಾಗಿ ಅಕ್ಷರಶಃ ಪರದಾಡುವಂತಾಗಿದೆ.
ನಗರದ ಶಿವಬಸವನಗರದ (13ನೇ ವಾರ್ಡ್) ಸಿಂದಗಿ ಮಠದ ಸಮೀಪದಲ್ಲಿ ನಗರಸಭೆ ವತಿಯಿಂದ 2018ರಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿತ್ತು. ಘಟಕ ಆರಂಭವಾದ ನಂತರ ನಿವಾಸಿಗಳು ₹5 ನಾಣ್ಯ ಹಾಕಿ 20 ಲೀಟರ್ ನೀರು ತರುತ್ತಿದ್ದರು. ಆದರೆ, ಘಟಕ ಆರಂಭಗೊಂಡು ಚಾಲನೆಯಲ್ಲಿದ್ದುದು ಒಂದೇ ತಿಂಗಳು!
ನೀರು ಚಾಲನೆ ಮಾಡಿದ ನಂತರ ನಿಗದಿತ ಸಮಯ ಮುಗಿದ ಮೇಲೆ ನೀರುಗಂಟಿ ಸ್ವಿಚ್ ಆಫ್ ಮಾಡುತ್ತಲೇ ಇರಲಿಲ್ಲ. ಇದರಿಂದ ನೀರು ಪೋಲಾಗಿ ಹರಿಯುತ್ತಿತ್ತು. ಆ ನಂತರ ಕಾರಣಾಂತರದಿಂದ ಘಟಕವೇ ಮುಚ್ಚಿಹೋಯಿತು. ಈಗ ಗಿಡಗಂಟಿಗಳು ಬೆಳೆದು ಘಟಕ ಪಾಳು ಬಿದ್ದಿದೆ. ಲಕ್ಷಾಂತರ ವೆಚ್ಚ ಮಾಡಿ ಸ್ಥಾಪಿಸಿದ್ದ ಘಟಕದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ ಎಂದು ನಿವಾಸಿಗಳು ದೂರುತ್ತಾರೆ.
ಕರ ಪಾವತಿಸಿದರೂ ಸಿಗದ ನೀರು!
‘ಪೈಪ್‌ಲೈನ್‌ನಲ್ಲಿ ಕುಡಿಯುವ ನೀರು 15 ದಿನಕ್ಕೊಮ್ಮೆ ಬರುತ್ತದೆ. ಅದೂ ಒಂದೂವರೆ ಗಂಟೆ ಮಾತ್ರ. ಆ ಸಮಯದಲ್ಲಿ ನೀರು ಹಿಡಿದಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಮತ್ತೆ 15 ದಿನ ಕಾಯಬೇಕು. ಈ ನೀರು ಎರಡು ಮೂರು ದಿನಗಳಿಗೆ ಖಾಲಿಯಾಗುತ್ತದೆ. ಹಾಗಾಗಿ ಖಾಸಗಿ ನೀರಿನ ಘಟಕದಿಂದ ನಿತ್ಯ ₹ 10 ಕೊಟ್ಟು 20 ಲೀಟರ್ ನೀರು ತರಬೇಕು. ತಿಂಗಳಿಗೆ ₹ 250ರಿಂದ ₹ 300 ಖರ್ಚು ತಗಲುತ್ತದೆ. ಇಷ್ಟೆಲ್ಲ ಖರ್ಚಿನ ನಡುವೆ ನಗರಸಭೆಗೆ ತಿಂಗಳಿಗೆ ₹ 140 ನೀರಿನ ಕರ ಕಟ್ಟಬೇಕು’ ಎಂದು ಚನ್ನಬಸವಗೌಡ್ರು ವಿ.ಬೆಳವಿಗಿ ಸಮಸ್ಯೆ ತೋಡಿಕೊಂಡರು.
‘ಶುದ್ಧ ನೀರಿನ ಘಟಕದಿಂದ ನೀರು ಸಿಗುತ್ತದೆ ಎಂಬ ಆಸೆಯಿಂದ ₹5ರ ನಾಣ್ಯಗಳನ್ನು ಎರಡು ಸಾವಿರ ರೂಪಾಯಿಯಷ್ಟು ಸಂಗ್ರಹಿಸಿದ್ದೆ. ನಾನೂ ಬಳಸಿ, ನಾಣ್ಯದ ಸಮಸ್ಯೆ ಎದುರಿಸುವವರಿಗೂ ಕೊಡುತ್ತಿದ್ದೆ. ಈಗ ನೋಡಿದರೆ ಘಟಕವೇ ಬಂದ್ ಆಗಿದೆ. ಮೋಟಾರು, ಪೈಪ್‌ಗಳು ಎಲ್ಲವೂ ಚೆನ್ನಾಗಿವೆ. ಆದರೆ, ನೀರು ನಿರ್ವಹಣೆ ಮಾಡುವವರೇ ಇಲ್ಲ. ಮೂರು ದಿನಕ್ಕೊಮ್ಮೆ ಪೈಪ್‌ಲೈನ್‌ನಲ್ಲಿ ಸವಳು ನೀರು ಬಿಡುತ್ತಾರೆ. ಆ ಉಪ್ಪು ನೀರನ್ನು ಪಾತ್ರೆ ತೊಳೆಯಲು ಮಾತ್ರ ಬಳಸಬಹುದು. ಸ್ನಾನ ಮಾಡಲು ಯೋಗ್ಯವಾಗಿಲ್ಲ’ ಎಂದು ಬೆಳವಿಗಿ ದೂರಿದರು.
ಜಾಗ ಕೊಟ್ರೂ, ನೀರು ಕೊಟ್ಟಿಲ್ಲ!
‘ಹೊಸಮಠದವರು ಶುದ್ಧ ನೀರಿನ ಘಟಕ ಸ್ಥಾಪಿಸಲು ನಗರಸಭೆಗೆ ಜಾಗ ಕೊಟ್ಟಿದ್ದಾರೆ. ಆದರೆ, ನಗರಸಭೆಯವರು ಸರಿಯಾಗಿ ನೀರು ಕೊಡುತ್ತಿಲ್ಲ. ಹೀಗಾಗಿ, ಖಾಸಗಿ ನೀರಿನ ಘಟಕದಿಂದಎರಡು ದಿನಕ್ಕೊಮ್ಮೆ ₹20 ಕೊಟ್ಟು ಎರಡು ಕ್ಯಾನ್ ನೀರು ತರುತ್ತೇನೆ. ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ನಮ್ಮ ಗೋಳು ಕೇಳೋರು ಯಾರೂ ಇಲ್ರಿ’ ಎಂದು ಶಿವಬಸವನಗರ ನಿವಾಸಿ ಸುಮಂಗಲ ಅಂಕಲಗಿಮಠ ಅಳಲು ತೋಡಿಕೊಂಡರು.
‘ಸಿಹಿ ನೀರಿನ ಸಮಸ್ಯೆ ಬಾಳ ಐತ್ರಿ, ಮಟನ್ ಮಾರ್ಕೆಟ್‌ನಿಂದ ತಳ್ಳುಗಾಡಿ ಮೂಲಕ ನೀರು ತರೋದ್ರೊಳಗೆ ರೆಟ್ಟೆ ಬಿದ್ದೋಗ್ತವ್ರಿ. ಮನೆ ಮುಂದೆ ಕುಡಿಯುವ ನೀರಿನ ನಲ್ಲಿಗಳೇ ಇಲ್ಲ. ಹಾಗಾಗಿ ನಗರಸಭೆಯವರು ಬಿಟ್ಟ ನೀರು ಹಿಡಿಯಲು ನಲ್ಲಿ ಹುಡುಕಬೇಕ್ರಿ’ ಎಂದು ಶಿವಬಸವನಗರದ ನಿವಾಸಿ ದಾವಲ್‌ಸಾಬ್ ಡಿ.ಸಂಶಿ ಕಷ್ಟ ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.