ADVERTISEMENT

ರಾಜ್ಯದ ಆರ್ಥಿಕ ಪರಿಸ್ಥಿತಿ ಅಭದ್ರ: ಬೊಮ್ಮಾಯಿ ಟೀಕೆ

ಅಭಿನಂದನಾ ಸಮಾರಂಭ: ಸಂಸದ ಬಸವರಾಜ ಬೊಮ್ಮಾಯಿ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:16 IST
Last Updated 20 ಜೂನ್ 2024, 15:16 IST
ಬ್ಯಾಡಗಿ ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು
ಬ್ಯಾಡಗಿ ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಬ್ಯಾಡಗಿ: ಸೂಕ್ತ ಯೋಜನೆಗಳನ್ನು ತಯಾರಿಸಿಕೊಂಡು ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಸಂಸದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲ್ಲೂಕು ಘಟಕ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಅಭಿವೃದ್ಧಿ ಕಾಮಗಾರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಜ್ಯ ಸರ್ಕಾರ ಒದ್ದಾಡುತ್ತಿದೆ, ಸದ್ಯ ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಪೆಟ್ರೋಲ್, ಡಿಸೇಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಿಸಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ 75 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಮೂಲಕ ಬಿಜೆಪಿ ಅಧಿಕಾರದ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ’ ಎಂದರು.

ADVERTISEMENT

‘ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿಲ್ಲ. ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಸಕ್ತ ವರ್ಷ ₹1.5ಲಕ್ಷ ಕೋಟಿ ಸಾಲ ಮಾಡಿದ್ದು, 25 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಬ್ಬರ ಜೇಬಿನಿಂದ ಕದ್ದು, ಇನ್ನೊಬ್ಬರ ಜೇಬಿಗೆ ಹಣ ಹಾಕುತ್ತಿರುವುದೇ ಕಾಂಗ್ರೆಸ್‌ ಸರ್ಕಾರದ ಸಾಧನೆ’ ಎಂದು ಅವರು ಕಿಡಿಕಾರಿದರು.

‘2013–14ರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ₹13 ಸಾವಿರ ಕೋಟಿ ಸಾಲವನ್ನು ತೀರಿಸಿ, ಉಳಿತಾಯ ಬಜೆಟ್ ಮಂಡಿಸಿದ್ದೇವೆ. ಹಾವೇರಿ–ಗದಗ ಲೋಕಸಭಾ ಕ್ಷೇತ್ರ ವಿಭಿನ್ನವಾಗಿದ್ದು, ಫಲವತ್ತಾದ ಕೃಷಿ ಭೂಮಿ ಇದೆ. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಸದ್ಭಳಕೆ ಮಾಡಿಕೊಳ್ಳಬೇಕಾಗಿದೆ’ ಎಂದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ ಮಾತನಾಡಿದರು. ಬಿಜೆಪಿ ಬ್ಯಾಡಗಿ ಮಂಡಲದ ಅಧ್ಯಕ್ಷ ಶಿವಯೋಗಿ ಶಿರೂರ, ಮುಖಂಡರಾದ ಹಾಲೇಶ ಜಾಧವ, ಮುರಿಗೆಪ್ಪ ಶೆಟ್ಟರ, ಶಿವಬಸಪ್ಪ ಕುಳೇನೂರ, ವಿರೂಪಾಕ್ಷಪ್ಪ ಕಡ್ಲಿ, ವೀರಭದ್ರಪ್ಪ ಗೊಡಚಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಶಂಕ್ರಣ್ಣ ಮಾತನವರ, ಸುರೇಶ ಅಸಾದಿ, ರಾಜು ಹೊಸಕೇರಿ, ಪುರಸಭೆ ಸದಸ್ಯ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಸರೋಜಾ ಉಳ್ಳಾಗಡ್ಡಿ ಇದ್ದರು.

ದೇಶದಲ್ಲಿ ಕೇವಲ 99 ಕ್ಷೇತ್ರಗಳಲ್ಲಿ ಗೆದ್ದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸಂಭ್ರಮಿಸಿದ್ದು ನೋಡಿದರೆ ಪಕ್ಕದ ಮನೆಯಲ್ಲಿ ಮಗು ಹುಟ್ಟಿದ್ದಕ್ಕೆ ಸಿಹಿ ಹಂಚಿದಂತಾಗಿದೆ

- ಬಸವರಾಜ ಬೊಮ್ಮಾಯಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.