ಹಂಸಬಾವಿ: ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದ ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದ್ದು, ಶತಮಾನದ ಅಂಚಿನಲ್ಲಿರುವ ಈ ಶಾಲೆ ಈಗ ಮುಚ್ಚುವ ಭೀತಿಯಲ್ಲಿದೆ.
ಇದು ಹಂಸಬಾವಿಯ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ದುಸ್ಥಿತಿ. ಈ ಶಾಲೆಯಲ್ಲಿ ಒಂದನೇ ತರಗತಿಗೆ 2, ಎರಡನೇ ತರಗತಿಗೆ 2, ಮೂರನೇ ತರಗತಿಗೆ ‘ಶೂನ್ಯ’, ನಾಲ್ಕನೇ ತರಗತಿಗೆ 5, ಐದನೇ ತರಗತಿಗೆ 3, ಆರನೇ ತರಗತಿಗೆ 1, ಏಳನೇ ತರಗತಿಗೆ 3 ಮಕ್ಕಳು ದಾಖಲಾತಿ ಪಡೆದಿದ್ದು, ಒಟ್ಟು 16 ಮಕ್ಕಳಿದ್ದು, ಶಿಕ್ಷಕರು ಎಲ್ಲಾ ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ.
1928ರಲ್ಲಿ ಆರಂಭಗೊಂಡ ಈ ಶಾಲೆ ಶತಮಾನೋತ್ಸವ ಆಚರಣೆಯ ಹೊಸ್ತಿಲ್ಲಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಪೋಷಕರ ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದ ಈ ಶಾಲೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಈ ಗ್ರಾಮದಲ್ಲಿ ಖಾಸಗಿ ಶಾಲೆಗಳ ಪ್ರಭಾವ ಹೆಚ್ಚಿದ್ದು, ಈ ಸರ್ಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ. ಈ ಶಾಲೆಗೆ ಸೌಕರ್ಯ ಒದಗಿಸಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿ ಮನವಿ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಚಕ್ರಸಾಲಿ ‘ಪ್ರಜಾವಾಣಿ’ ತಿಳಿಸಿದರು.
ಕಾಂಪೌಂಡ್ ಇಲ್ಲ: ‘ಈ ಶಾಲೆಗೆ ಕಟ್ಟಡ ಶಿಥಿಲವಾಗಿದ್ದು, ಅಲ್ಲಲ್ಲಿ ಹೆಂಚುಗಳು ಒಡೆದು ಮಕ್ಕಳ ತಲೆ ಮೇಲೆ ಬೀಳುವ ಆತಂಕವಿದೆ. ಶಾಲೆಯ ಸುತ್ತಲೂ ಇರುವ ಕಾಂಪೌಂಡ್ ಹಾಳಾಗಿದ್ದು, ಸಂಜೆ ವೇಳೆ ಮಧ್ಯವ್ಯಸನಿಗಳು ಇಲ್ಲಿ ಮಧ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಈ ಶಾಲೆಯ ಶೌಚಾಲಯವನ್ನು ಸಾರ್ವಜನಿಕರೂ ಬಳಸುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ. ನಮ್ಮ ಮಕ್ಕಳು ಇದರಲ್ಲಿಯೇ ಅಭ್ಯಾಸ ಮಾಡಬೇಕಾಗಿದೆ‘ ಎಂದು ಗ್ರಾಮದ ಸತ್ಯವತಿ ಕರಡೇರ ತಿಳಿಸಿದರು.
ಪೋಷಕರು ಇಂಗ್ಲಿಷ್ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸುತ್ತಿರುವ ಕಾರಣ ಈ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗಿದೆ. ಗ್ರಾಮದ ಇನ್ನೊಂದು ಸರ್ಕಾರಿ ಶಾಲೆಗೆ ಕ್ರೋಡೀಕರಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.-ಶ್ರೀಧರ್. ಎನ್. ಕ್ಷೇತ್ರ ಶಿಕ್ಷಣಾಧಿಕಾರಿ
ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದರೂ ಇಲ್ಲಿ ಯಾರೂ ಬರುತ್ತಿಲ್ಲ. ಸರ್ಕಾರ ಸೌಕರ್ಯಗಳನ್ನು ನೀಡಿದರೆ ಶಾಲೆಯ ಅಭಿವೃದ್ಧಿಗೆ ಸಹಕಾರಿಯಾಗಬಹುದು.-ಮಾಲತೇಶ ಮುಗದೂರ. ಮುಖ್ಯ ಶಿಕ್ಷಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.