ADVERTISEMENT

ಕಚ್ಚಾತೈಲದ ಬೆಲೆ ಇಳಿದರೂ ಪೆಟ್ರೋಲ್‌ ಬೆಲೆ ಇಳಿಕೆ ಏಕಿಲ್ಲ: ಮಾನೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:41 IST
Last Updated 18 ಜೂನ್ 2024, 14:41 IST
ಶ್ರೀನಿವಾಸ ಮಾನೆ
ಶ್ರೀನಿವಾಸ ಮಾನೆ   

ಹಾನಗಲ್: ಕಳೆದ 10 ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಗ್ಯಾಸ್ ಬೆಲೆಯನ್ನು ಇಳಿಸಲಿಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಹೆಚ್ಚಿಸಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರು ಯಾವ ಉದ್ದೇಶಕ್ಕಾಗಿ ಜನಸಾಮಾನ್ಯರಿಗೆ ಹೊರೆ ಮಾಡಲಾಯಿತು ಎನ್ನುವುದಕ್ಕೆ ಮೊದಲು ಉತ್ತರ ನೀಡಲಿ ಎಂದು ಶಾಸಕ ಶ್ರೀನಿವಾಸ ಮಾನೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 

ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2014 ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 90 ಡಾಲರ್ ಇತ್ತು. ಆಗ ದೇಶದಲ್ಲಿ ಪೆಟ್ರೋಲ್ ₹ 70 ಹಾಗೂ ಡೀಸೆಲ್ ₹  50 ಮತ್ತು ಸಿಲಿಂಡರ್ ಗ್ಯಾಸ್ ಬೆಲೆ ₹ 500 ಇತ್ತು. ಕಳೆದ 10 ವರ್ಷಗಳಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 80 ಡಾಲರ್‌ಗೆ
ಇಳಿಕೆಯಾಗಿದೆ. ಆದರೆ ಪೆಟ್ರೋಲ್ ಬೆಲೆ ಮಾತ್ರ ₹ 100 ಹಾಗೂ ಡೀಸೆಲ್ ₹ 86 ಆಸುಪಾಸಿನಲ್ಲಿದೆ. ಸಿಲಿಂಡರ್ ಬೆಲೆಯೂ ಗಗನಮುಖಿಯಾಗಿದೆ ಎಂದು ಟೀಕಿಸಿದರು.

ಯುಪಿಎ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಿದ್ದ ಸಂದರ್ಭದಲ್ಲಿಯೂ ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಗ್ಯಾಸ್ ಬೆಲೆ ಕಡಿಮೆ ಇತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡರೂ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗದೇ ಏರಿಕೆಯಾಗುತ್ತಲೇ ಸಾಗಿ ಪ್ರತಿ ಲೀಟರ್‌ಗೆ ₹ 25 ರಿಂದ ₹ 30ರಷ್ಟು, ಸಿಲಿಂಡರ್ ಗ್ಯಾಸ್ ಬೆಲೆಯೂ ₹ 500ರವರೆಗೆ ಹೆಚ್ಚಳ ಕಂಡಿದ್ದು ಮಾತ್ರ ಸೋಜಿಗ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

‘ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ತೆರಿಗೆ ಹೆಚ್ಚಿಸಿದೆ ಎಂದು ಬಿಜೆಪಿ ಹೇಳುವುದಾದರೆ ಕಚ್ಚಾತೈಲದ ಬೆಲೆ ಕುಸಿತ ಕಂಡಾಗಲೂ ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹೆಚ್ಚಿನ ಹಣ ಪಡೆದು ಅದನ್ನು ಯಾವುದಕ್ಕೆ ಬಳಕೆ ಮಾಡಲಾಯಿತು ಎನ್ನುವುದನ್ನು ಸ್ಪಷ್ಪಪಡಿಸಬೇಕಿದೆ’ ಎಂದು ಹೇಳಿದ್ದಾರೆ.

‘ಒಬ್ಬರ ಮೇಲೊಬ್ಬರು ಆರೋಪ ಮಾಡುವುದು, ರಾಜಕಾರಣ ಮಾಡುವುದನ್ನು ಇಲ್ಲಿಗೆ ನಿಲ್ಲಿಸಿ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಮುಖ್ಯಮಂತ್ರಿಗಳಿಗೆ ನಾವೆಲ್ಲ ಒತ್ತಡ ತಂದು ತೆರಿಗೆ ಹೆಚ್ಚಳ ಕೈ ಬಿಡುವಂತೆ ಮನವಿ ಸಲ್ಲಿಸುತ್ತೇವೆ. ಬಿಜೆಪಿ ನಾಯಕರೂ ಸಹ ತಮ್ಮ ಸಂಸದರ ಮೂಲಕ ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ತಂದು  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀ.ಗೆ ₹ 20- ₹ 25ರಷ್ಟು ಕಡಿತಗೊಳಿಸಲಿ. ಸಿಲಿಂಡರ್ ಬೆಲೆಯನ್ನೂ ಇಳಿಸಿದರೆ
ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿಯವರೂ ಜವಾಬ್ದಾರಿ ಪ್ರದರ್ಶಿಸಲಿ. ನಾವೂ ಪ್ರದರ್ಶಿಸುತ್ತೇವೆ’ ಎಂದು ಮಾನೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.