ಸಾತೇನಹಳ್ಳಿ (ಹಂಸಭಾವಿ): ‘ಊರಿಗೊಂದು ದೇವಸ್ಥಾನವಿರುವಂತೆ ಶಾಲೆಗೊಂದು ಗ್ರಂಥಾಲಯ ಇರಬೇಕು. ಶಿಕ್ಷಣ ಮನುಷ್ಯನ ಬದುಕು ರೂಪಿಸುವ ದಿವ್ಯ ಶಕ್ತಿ. ಅದು ಪ್ರತಿಯೊಬ್ಬರ ಹಕ್ಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್ ರೋಶನ್ ಹೇಳಿದರು.
ಸಾತೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸಪ್ಪ ಹಕ್ಕಿ ಸ್ಮರಣಾರ್ಥ, ಅವರ ಮಕ್ಕಳು ಕೊಡುಗೆ ನೀಡಿದ ಗ್ರಂಥಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
‘ಶಾಲೆಯ ಅಭಿವೃದ್ಧಿಗೆ ಹಕ್ಕಿ ಕುಟುಂಬದ ಕೊಡುಗೆ ಅಪಾರ. ಅವರಂತೆ ಎಲ್ಲರೂ ಕೈಜೋಡಿಸುವಂತಾಗಬೇಕು. ಶಾಲೆಗೆ 3 ಕೊಠಡಿಗಳನ್ನು ಮಂಜೂರು ಮಾಡಿಸಲಾಗುವುದು’ ಎಂದರು.
ಐಎಫ್‌ಎಸ್ ಅಧಿಕಾರಿ ಶಂಭುಲಿಂಗ ಹಕ್ಕಿ ಮಾತನಾಡಿ, ‘ಮನುಷ್ಯನ ಸರ್ವಾಂಗೀಣ ಅಭಿವೃದ್ದಿಗೆ ಶಿಕ್ಷಣವೇ ರಹದಾರಿ. ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಉನ್ನತ ಸೇವೆ ಸಲ್ಲಿಸಲು ಹಂಬಲಿಸಬೇಕು’ ಎಂದು ಕಿವಿಮಾತು ಹೇಳಿದರು.
ಡಿಡಿಪಿಐ ಜಗದೀಶ್ವರ ಮಾತನಾಡಿ, ‘ಕಾರಣಾಂತರಗಳಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳು ದೇಶದ ಆಸ್ತಿಯಾಗಿದ್ದು, ಅವುಗಳ ಬೆಳವಣಿಗೆಗೆ ಶ್ರಮಿಸಬೇಕು’ ಎಂದರು.
‘ಪ್ರತಿ ವಿದ್ಯಾರ್ಥಿಯಲ್ಲೂ ವಿಶೇಷ ಕೌಶಲವಿರುತ್ತದೆ. ಅದನ್ನು ಶಿಕ್ಷಕರು ಗುರುತಿಸಿ, ಪ್ರೋತ್ಸಾಹಿಸಬೇಕು. ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಹೇಳಿದರು.
ಜಿಲ್ಲಾ ವಿಷಯ ಪರಿವೀಕ್ಷಕ ಬಸನಗೌಡ ಪಾಟೀಲ, ಅಕ್ಷರ ದಾಸೋಹ ನಿರ್ದೇಶಕ ಮಾರುತೆಪ್ಪ ಎಚ್., ಗ್ರಾ.ಪಂ. ಅಧ್ಯಕ್ಷ ಶಂಭು ಮಾನೇರ, ಬಿಆರ್‌ಸಿ ನಂದೀಶ ಲಮಾಣಿ, ಸಿಆರ್‌ಸಿ ಲಲಿತಾ ಮತ್ತೀಹಳ್ಳಿ, ಮುಖ್ಯಶಿಕ್ಷಕ ಎ.ಡಿ. ಬಡೇಗರ, ಬಸನಗೌಡ ಬಡ್ಡಿ, ಮೂಕನಗೌಡ ಕಾನಕೇರಿ, ಸೋಮಶೇಖರ ಕರಡೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.