ರಟ್ಟೀಹಳ್ಳಿ: ಪಟ್ಟಣದ ಭಗತ್ ಸಿಂಗ್ ಸರ್ಕಲ್ ಹತ್ತಿರ ಇರುವ ಆರ್.ಎಚ್. ಕಾಲೊನಿ ಒಂದು ಮತ್ತು ಎರಡನೇ ಕ್ರಾಸ್‌ನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳಿಲ್ಲದೆ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಇಲ್ಲಿ ನಿರ್ಮಿಸಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಚರಂಡಿ ನೀರು ಸರಾಗವಾಗಿ ಹರಿಯದೇ ತುಂಬಿಕೊಳ್ಳುತ್ತಿದೆ. ಮನೆಯ ಮುಂದೆ ಚರಂಡಿ ನೀರು ನಿಲ್ಲುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ದುರ್ವಾಸನೆ ಮಿತಿಮೀರಿದ್ದು, ಬುದುಕುವುದೇ ಕಷ್ಟವಾಗಿದೆ.
ಚರಂಡಿಯನ್ನು ಮುಖ್ಯ ಚರಂಡಿಗೆ ಸಂಪರ್ಕಿಸಿಲ್ಲ, ಇದು ದೊಡ್ಡ ಸಮಸ್ಯೆಯಾಗಿದೆ. ಬೀದಿ ದೀಪಗಳು ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.
ಪಟ್ಟಣ ಪಂಚಾಯ್ತಿಗೆ ಸಾಕಷ್ಟು ಸಾರಿ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದ್ದಾರೆ. ಆದರೆ ಪರಿಹಾರ ಕಲ್ಪಿಸಿಲ್ಲ. ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದರಿಂದ ಸೊಳ್ಳೆ ವಿಪರೀತವಾಗಿದ್ದು, ಡೆಂಗಿ, ಕಾಲರಾ ರೋಗ ಹರಡುವ ಕಾರ್ಖಾನೆಗಳಂತಾಗಿವೆ. ಇಲ್ಲಿ ವಾಸಿಸುವ ಪ್ರತಿ ಕುಟುಂಬದ ಚಿಕ್ಕಮಕ್ಕಳು, ವೃದ್ಧರು, ಒಂದಿಲ್ಲೊಂದು ಕಾಯಿಲೆಯಿಂದ ಬಳಲುವಂತಾಗಿದೆ ಎಂದು ಇಲ್ಲಿನ ನಿವಾಸಿ ಸಾದತ್ ಮುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಲೊನಿಯಲ್ಲಿ ಗಟಾರ ನಿರ್ಮಿಸಿ ಆರು ತಿಂಗಳು ಸಹ ಕಳೆದಿಲ್ಲ. ಆದರೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಚರಂಡಿಗಳ ಮೇಲೆ ಸಿ.ಡಿ. ನಿರ್ಮಿಸಿಲ್ಲ. ಈ ಕಾಮಗಾರಿಗಳಲ್ಲಿ ಜನರ ಹಣವನ್ನು ಪೋಲು ಮಾಡಲಾಗಿದೆ.
ಬೀದಿ ದೀಪಗಳು ಹತ್ತುವುದಿಲ್ಲ. ಚರಂಡಿ ಅಕ್ಕಪಕ್ಕದಲ್ಲಿ ಗಿಡಗಂಟೆಗಳು ಬೆಳೆದು ವಿಷಜಂತುಗಳ ತಾಣವಾಗಿದೆ. ಈ ಭಾಗದಲ್ಲಿ ಖಾಲಿ ನಿವೇಶನಗಳಿದ್ದು, ಅಕ್ಕಪಕ್ಕದ ಜನರು ಕಸವನ್ನು ಸುರಿಯುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಖಾಲಿ ನಿವೇಶನ ಮಾಲೀಕರು ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸೂಚಿಸಬೇಕು ಎಂದು ಎರಡನೇ ಕ್ರಾಸಿನ ನಿವಾಸಿ ಯಲ್ಲಪ್ಪ ಖಾಪಸೇಕರ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.