ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದ ಗುತ್ತಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮುಕ್ತಾಬಾಯಿ ಬೀಸೆ ಹಾಗೂ ಸಹಾಯ ಮಾಡಿದ ಭರಡಿ ಗ್ರಾಮದ ಮಾರುತಿ ಕಿಳ್ಳಿಕ್ಯಾತರ ಈ ಇಬ್ಬರಿಗೂ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ ₹37 ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಆದೇಶ ನೀಡಿದ್ದಾರೆ.
ಮುಕ್ತಾಬಾಯಿ ಅವರು ಹಿಂದೂ ಗೊಂದಳಿ ಸಮುದಾಯಕ್ಕೆ (ಪ್ರವರ್ಗ-01) ಸೇರಿದವರಾಗಿದ್ದಾರೆ. ಕಳಕಪ್ಪ ತಳವಾರ ಹಾಗೂ ಮಾರುತಿ ಕಿಳ್ಳಿಕ್ಯಾತರ ಅವರ ಸಹಕಾರ ಪಡೆದು, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿದ್ದರು. ನಂತರ ಹಾವೇರಿ ತಹಶೀಲ್ದಾರ್ ಕಚೇರಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು 2010ರಲ್ಲಿ ಗುತ್ತಲ ಪಂಚಾಯಿತಿ ವಾರ್ಡ್ ನಂ.10ರ ಪರಿಶಿಷ್ಟ ಜಾತಿಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎ.ಬಿ.ಹಪ್ಪಳಿ ಅವರು ಪ್ರಕರಣದ ತನಿಖೆ ನಡೆಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ 2ನೇ ಆರೋಪಿ ರಾಣೆಬೆನ್ನೂರು ತಾಲ್ಲೂಕಿನ ನೂಕಾಪುರ ಶಾಲೆಯ ಮುಖ್ಯಶಿಕ್ಷಕರಾಗಿದ್ದ ಕಳಕಪ್ಪ ತಳವಾರ ಅವರು ಈಚೆಗೆ ನಿಧನರಾಗಿದ್ದಾರೆ.
ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ.ಕೂಡಲಗಿಮಠ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.