ಹಾವೇರಿ: ರಾಣೆಬೆನ್ನೂರು ನಗರಸಭೆಯ ನೂತನ ಪೌರಾಯುಕ್ತರನ್ನಾಗಿ ಫಕ್ಕೀರಪ್ಪ ಇ. ಇಂಗಳಗಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ ಕೆಲಸ ಮಾಡುತ್ತಿದ್ದ ಇಂಗಳಗಿ ಅವರನ್ನು ರಾಣೆಬೆನ್ನೂರು ನಗರಸಭೆಯ ನೂತನ ಪೌರಾಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ತರ್ಲಘಟ್ಟ ಗ್ರಾಮದ ಫಕ್ಕೀರಪ್ಪ, ಸ್ವಂತ ಊರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದಾರೆ. ನಂತರ, ಕುಂದಗೋಳ ಕಮಡೊಳ್ಳಿಯ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಬಳಿಕ, ಧಾರವಾಡ ಜೆಎಸ್‌ಎಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
2005ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ವೃತ್ತಿ ಆರಂಭಿಸಿದ್ದ ಫಕ್ಕೀರಪ್ಪ, 2014ರವರೆಗೆ ಕೆಲಸ ಮಾಡಿದ್ದರು. ನಂತರ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಐ) ಆಗಿ ಆಯ್ಕೆಗೊಂಡು ಧಾರವಾಡ ಜಿಲ್ಲೆಯಲ್ಲಿ ಕೆಲಸ ಮಾಡಿದ್ದರು. ಇದೇ ಸಂದರ್ಭದಲ್ಲಿ 2017ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದಿದ್ದರು. ಉತ್ತಮ ರ‍್ಯಾಂಕ್ ಪಡೆದು, ನಗರಾಭಿವೃದ್ಧಿ ಇಲಾಖೆ ಸೇವೆಗೆ ಆಯ್ಕೆಯಾದರು.
ಮುಂಡರಗಿ ಪುರಸಭೆಯ ಮುಖ್ಯಾಧಿಕಾರಿಯಾಗಿ ನಗರಾಭಿವೃದ್ಧಿ ಇಲಾಖೆ ಸೇವೆ (ಕೆಎಂಎಸ್) ಆರಂಭಿಸಿದ್ದ ಇವರು 2022ರಲ್ಲಿ ಹು–ಧಾ ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದರು. ಇದೀಗ, ಇವರು ರಾಣೆಬೆನ್ನೂರು ನಗರಸಭೆಯ ಪೌರಾಯುಕ್ತರಾಗಿದ್ದಾರೆ. ಕೆಲ ತಿಂಗಳಿನಿಂದ ಈ ಹುದ್ದೆ ಖಾಲಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.