ಹಾನಗಲ್: ಅಪ್ಪಟ ಮಲೆನಾಡು ಬೆಳೆ ಕೋಕೋ ಹಾನಗಲ್ ತಾಲ್ಲೂಕಿಗೆ ಕಾಲಿಟ್ಟಿದೆ. ರೈತರಿಗೆ ಲಾಭದಾಯಕ, ಕಡಿಮೆ ನೀರು ಸಾಕು, ನಿರ್ವಹಣಾ ವೆಚ್ಚವಿಲ್ಲ, ಅಡಿಕೆ ತೋಟಗಳಿಗೆ ಸಾವಯವ ಗೊಬ್ಬರ ನೀಡಲು ಕೂಡ ಕೋಕೋ ಬೆಳೆ ಉಪಯುಕ್ತ ಎಂಬುದು ಸಾಬೀತಾಗಿದೆ.
ಇದು ಕಾಡು ಜಾತಿಗೆ ಸೇರಿದ ಬೆಳೆ. ತುಂಬ ಎತ್ತರ ಬೆಳೆಯುವುದಿಲ್ಲ. ಪೊದೆಯಂತೆ ಸುಮಾರು 4 ಅಡಿ ತನಕ ಎದ್ದು ನಿಲ್ಲುತ್ತದೆ. ನಾಟಿ ಮಾಡಿದ ಒಂದೂವರೆ ವರ್ಷದಲ್ಲಿ ಗಿಡದಲ್ಲಿ ಕಾಯಿಗಳು ಬಿಡಲಾರಂಭಿಸುತ್ತವೆ. ಕಾಯಿ ಹಳದಿಯಾದಾಗ ಕಟಾವ್ ಮಾಡುತ್ತಾರೆ. ಏಳೆಂಟು ದಿನ ಚೀಲದಲ್ಲಿ ತುಂಬಿ ಇಟ್ಟು ಬಳಿಕ ಹಣ್ಣಿನ ಒಳಗಿನ ಬೀಜಗಳನ್ನು ಹೊರಗೆ ತೆಗೆದು ಹದವಾಗಿ ಒಣಗಿಸುತ್ತಾರೆ.
ಈ ಕೋಕೋ ಬೀಜಗಳು ಮಾರುಕಟ್ಟೆಯ ಹೊಯ್ದಾಟದಲ್ಲಿ ಕೆ.ಜಿಗೆ ₹ 250 ರಿಂದ ₹ 1 ಸಾವಿರ ತನಕ ಬೆಲೆ ತರುತ್ತವೆ. ಚಾಕೋಲೇಟ್, ಕೋಕೋ ಪೌಡರ್, ಕೋಕೋ ಸಿರಫ್, ಬಿಸ್ಕೆಟ್, ಐಸ್ಕ್ರೀಂ ಸೇರಿದಂತೆ ವಿವಿಧ ತಿನಿಸುಗಳಿಗಾಗಿ ಇದರ ಬೇಡಿಕೆ ಇದೆ.
ತಾಲ್ಲೂಕಿನ ಬೈಚವಳ್ಳಿ ಗ್ರಾಮದ ವಿರುಪಾಕ್ಷಪ್ಪ ದಾನಪ್ಪನವರ ತಮ್ಮ 4 ಎಕರೆ ಅಡಿಕೆ ತೋಟದಲ್ಲಿ ಕೋಕೋ ಬೆಳೆ ಬೆಳೆದಿದ್ದಾರೆ. ವಾರ್ಷಿಕವಾಗಿ ಉತ್ತಮ ಆದಾಯವನ್ನು ಕಂಡುಕೊಂಡಿದ್ದಾರೆ. ಅಲ್ಲದೆ, ಅಡಿಕೆ ತೋಟವನ್ನು ತಂಪಾಗಿಟ್ಟುಕೊಳ್ಳಲು ಕೋಕೋ ಬೆಳೆಯನ್ನು ಅವಲಂಬಿಸಿದ್ದಾರೆ.
ನಿವೃತ್ತ ಕೃಷಿ ಅಧಿಕಾರಿಯೂ ಆಗಿರುವ ವಿರುಪಾಕ್ಷಪ್ಪ ಪ್ರಕಾರ, ಅಡಿಕೆಯಲ್ಲಿ ಕೋಕೋ ಉತ್ತಮ ಬೆಳೆ. ಈಚೆಗೆ ಮೊದಲ ಕಟಾವ್‌ನಿಂದ ಆದಾಯ ಬಂದಿದೆ. ಕೋಕೋ ಇನ್ನೊಂದು ಬೆಳೆಗೆ ಹಾನಿಕಾರಕವಲ್ಲ. ತೋಟಗಾರಿಕೆಯಲ್ಲಿ ಅವಸರ ಸಲ್ಲದು. ತಾಳ್ಮೆ ಮುಖ್ಯ ಎಂದು ಹೇಳುತ್ತಾರೆ.
ವಿದೇಶದಿಂದ ಕರ್ನಾಟಕದ ಮಲೆನಾಡಿಗೆ ಬಂದ ಮಿಶ್ರ ಬೆಳೆ ಕೋಕೋ ಅರೆ ಮಲೆನಾಡಾದ ಹಾನಗಲ್ ತಾಲ್ಲೂಕಿನಲ್ಲಿ 30 ಎಕರೆಗೂ ಅಧಿಕ ತೋಟಗಾರಿಕಾ ಬೆಳೆಯಲ್ಲಿ ಬೆಳೆಯಲಾಗುತ್ತಿದೆಯಲ್ಲದೆ, ಉತ್ತಮ ಲಾಭದಾಯಕ ಎಂದು ಪರಿಗಣಿಸಲಾಗಿದೆ.
ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಮಾವು ಬೆಳೆಗಳಲ್ಲಿ ಅರ್ಧ ನೆರಳಿನಲ್ಲಿ ಅತ್ಯುತ್ತಮವಾಗಿ ಬೆಳೆಯಬಲ್ಲ ಕೋಕೋ ಹಾನಗಲ್ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಬೆಳೆಯುತ್ತಿರುವುದು ವಿಶೇಷವಾಗಿದೆ. ಇದರ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ, ಕೇರಳ ರಾಜ್ಯಗಳು ಮುಂಚೂಣಿಯಲ್ಲಿವೆ ಎನ್ನಲಾಗುತ್ತಿದೆ. ಆಂಧ್ರಪ್ರದೇಶ ತಮಿಳುನಾಡಿನಲ್ಲಿ ಇದನ್ನು ಬೆಳೆಯುತ್ತಾರೆ.
ಇದು ಉಷ್ಣವಲಯದ ಬೆಳೆಯಾಗಿದೆ. ವಾರ್ಷಿಕ 1 ಸಾವಿರದಿಂದ 1600 ಮಿ.ಮೀ ಮಳೆ ಬೀಳುವ ಪ್ರದೇಶದಲ್ಲಿ 10 ರಿಂದ 30 ಡಿಗ್ರಿ ಸೆಂಟಿಗ್ರೇಡ್ ವಾತಾವರಣದಲ್ಲಿ ಬೆಳೆಯುತ್ತದೆ. ಶೇ 50 ರಷ್ಟು ನೆರಳಿನಲ್ಲಿ ಚೆನ್ನಾಗಿ ಬೆಳೆಯಬಲ್ಲದು. ಈ ತೋಟಗಾರಿಕಾ ಬೆಳೆ ಇತರ ಬೆಳೆಗೆ ಅತ್ಯುತ್ತಮ ಸಾವಯವ ಗೊಬ್ಬರವನ್ನು ಎಲೆಗಳ ಮೂಲಕ ಕೊಡಬಲ್ಲದು. ಹೆಚ್ಚು ಎಲೆ ಉದುರಿಸುವ ಗಿಡವಾಗಿದ್ದರಿಂದ ತೋಟದಲ್ಲಿ ಕಳೆ ನಿರ್ವಹಣೆಗೂ ಇದು ಪೂರಕ.
‘ಬೇಸಿಗೆಯಲ್ಲಿ ತೋಟಗಳನ್ನು ತಂಪಾಗಿಡಲು ಹಾಗೂ ನೀರಿನ ನಿರ್ವಹಣೆಯಲ್ಲಿಯೂ ಸಹಕಾರಿ. 8 ವರ್ಷದಿಂದ ಕೋಕೋ ಬೆಳೆಯುತ್ತಿದ್ದೇನೆ. ಒಳ್ಳೆಯ ಲಾಭ ಸಿಕ್ಕಿದೆ. ಗೊಬ್ಬರ, ಔಷಧಿ ಖರ್ಚಿಲ್ಲ. 800 ಗಿಡಗಳನ್ನು ಬೆಳೆಸಿದ್ದೇನೆ. ವಾರ್ಷಿಕ ₹ 4 ಲಕ್ಷದ ತನಕ ಆದಾಯ ಬರುತ್ತದೆ’ ಎಂದು ಅಕ್ಕಿಆಲೂರಿನ ರೈತ ಉದಯ ವಿರುಪಣ್ಣನವರ ಹೇಳುತ್ತಾರೆ.
‘ಕೂಲಿಗಳ ಸಮಸ್ಯೆಯ ನಡುವೆಯೂ ಸುಲಭವಾಗಿ ಇದರ ನಿರ್ವಹಣೆ ಸಾಧ್ಯ. ಕೋಕೋ ಬೆಳೆಗೆ ಹಾನಗಲ್ ತಾವಾವರಣ ಉತ್ತಮವಾಗಿದೆ. ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಕೋಕೋ ಬೆಳೆಯಬಹುದು. ಈಗ ಕೋಕೋ ಬೀಜಗಳಿಗೆ ಬಹು ಬೇಡಿಕೆ ಇದೆ. ಹೀಗಾಗಿ ರೈತರಿಗೆ ಕೋಕೋ ಬೆಳೆ ಲಾಭದಾಯಕ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದ್ದಾರೆ.
ಹಾನಗಲ್‌ನಿಂದ ಕೇವಲ 40 ಕಿಮೀ ದೂರದ ಶಿರಶಿಯಲ್ಲಿ ಇದಕ್ಕೆ ಉತ್ತಮ ಮಾರುಕಟ್ಟೆಯೂ ಇದೆ. ಕೋಕೋ ಕಾಳನ್ನು ಕಾಯಿಯಿಂದ ಬಿಡಿಸಿ ಒಣಗಿಸುವುದು ಕೂಡ ಅತ್ಯಂತ ಸುಲಭ. ಎಲ್ಲಕ್ಕೂ ಮಿಗಿಲಾಗಿ ಅತ್ಯಂತ ಕಡಿಮೆ ಜನ ಈ ಕೆಲಸವನ್ನು ಸುಲಭವಾಗಿ ಮಾಡಬಲ್ಲರು.
ಶಿರಸಿಯಲ್ಲಿ ಕೋಕೋ ಮಾರುಕಟ್ಟೆ ಕಡಿಮೆ ವೆಚ್ಚ, ನಿರ್ವಹಣೆಯ ಬೆಳೆ ಅರೆ ಮಲೆನಾಡಿನಲ್ಲಿಯೂ ಬೆಳೆದು ಯಶಸ್ಸು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.