ADVERTISEMENT

ಕೃಷಿ ಖುಷಿ: ಭೂಮಿ ಫಲವತ್ತತೆ ಹೆಚ್ಚಳದಿಂದ ದುಪ್ಪಟ್ಟಾದ ಆದಾಯ

ರಾಜೇಂದ್ರ ನಾಯಕ
Published 24 ಆಗಸ್ಟ್ 2024, 4:46 IST
Last Updated 24 ಆಗಸ್ಟ್ 2024, 4:46 IST
<div class="paragraphs"><p>ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಅಡಿಕೆ ತೋಟದಲ್ಲಿ ಹಂಸಬಾವಿಯ ಮಂಜಪ್ಪ,ಶೋಭಾ ಮುರುಡಕ್ಕನವರ ದಂಪತಿ</p></div>

ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಅಡಿಕೆ ತೋಟದಲ್ಲಿ ಹಂಸಬಾವಿಯ ಮಂಜಪ್ಪ,ಶೋಭಾ ಮುರುಡಕ್ಕನವರ ದಂಪತಿ

   

ಹಂಸಬಾವಿ: ಹಂಸಬಾವಿಯ ಪ್ರಗತಿಪರ ರೈತ ಮಂಜಪ್ಪ ಮುರುಡಕ್ಕನವರ ತಮ್ಮ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದು, 16 ವರ್ಷದ ಹಿಂದೆ ನಾಟಿ ಮಾಡಿದ್ದ ಅಡಿಕೆ ತೋಟದಿಂದ ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಂಡು ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ಅಡಿಕೆ ನಾಟಿ ಮಾಡಿದ ದಿನದಿಂದಲೂ ಬೆಳೆಗೆ ಯಾವುದೇ ಕ್ರಿಮಿನಾಶಕ, ಗೊಬ್ಬರಗಳನ್ನು ಬಳಕೆ ಮಾಡದೇ ಗೋ ತ್ಯಾಜ್ಯದಿಂದ ತಯಾರಿಸಿದ ಗೊಬ್ಬರ, ಔಷಧಿಗಳನ್ನು ಬಳಸಿ ಕೃಷಿ ಮಾಡುತ್ತಿದ್ದು,ಇದರೊಂದಿಗೆ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.

ADVERTISEMENT

ಜೀವನಾಮೃತ: ದೇಶಿ ಹಸು ಮೂತ್ರ, ಗೋಮಯ(ಸಗಣಿ), ದ್ವಿದಳ ಧಾನ್ಯದ ಹಿಟ್ಟು, ಒಂದು ಬೊಗಸೆ ಮಣ್ಣುನ್ನು ಒಂದೂವರೆ ತಿಂಗಳು ಕೊಳೆ ಹಾಕಿ ನಂತರ ಅದರಿಂದ ಲಭ್ಯವಾಗುವ ಜೀವನಾಮೃತವನ್ನುಒಂದು ಎಕರೆಗೆ 400ಲೀ. ನಂತೆ ತೋಟದ ತುಂಬ ಸಿಂಪಡಣೆ ಮಾಡುವುದು.

ಬಿಲ್ವ ರಸಾಯನ: 20ಕೆ.ಜಿ ಬಿಲ್ವಪತ್ರಿ ಕಾಯಿಯನ್ನು ಪುಡಿ ಮಾಡಿ, 5 ಕೆ.ಜಿ ಬೆಲ್ಲ, 500ಮಿ.ಲೀ ಬೇವಿನ ಎಣ್ಣೆ ಸೇರಿಸಿ ಕೊಳೆ ಹಾಕಿ 2 ತಿಂಗಳ ಬಳಿಕ ಅದನ್ನು ಜಮೀನಿಗೆ ಸಿಂಪಡಣೆ ಮಾಡಬೇಕು.

ಹಣ್ಣಿನ ರಸಾಯನ: ಸಂತೆಯಲ್ಲಿ ಸಿಗುವ ನಿರುಪಯುಕ್ತ ಸಿಹಿ ಹಣ್ಣುಗಳಾದ ಕಲ್ಲಗಡಿ, ಮಾವು, ಕರಬೂಜ ಹಣ್ಣುಗಳಿಗೆ ಜೇನುತುಪ್ಪ, ಈರುಳ್ಳಿ, ಶುಂಠಿ, ಬೆಲ್ಲ, ಕಬ್ಬಿನಹಾಲು,ಅಂಟುವಾಳಕಾಯಿ ರಸವನ್ನು ಹಾಕಿ ಒಂದೂವರೆ ತಿಂಗಳ ಬಳಿಕ ಗಿಡಗಳಿಗೆ ಸಿಂಪಡಣೆ ಮಾಡಿದರೆ ಯಾವ ಕೀಟಗಳ ಬಾಧೆಯೂ ಇರದು.

ಎಗ್‌ ಆಮಿನೋ ಆಸಿಡ್:‌ ಅಡಿಕೆ ಹರಳು ಉದುರುವುದನ್ನು ತಡೆಗಟ್ಟಲು 25 ಕೋಳಿಮೊಟ್ಟೆ, 1ಲೀ. ಲಿಂಬುರಸ,2 ಲೀ ದೇಸೀ ಹಸುಹಾಲು, 500 ಮೀ.ಲಿ ಜೇನುತುಪ್ಪ ಸೇರಿಸಿ ಹಿಂಗಾರು ಮತ್ತು ಅಡಿಕೆ ಗೊನೆಗಳಿಗೆ ಸಿಂಪಡಣೆ ಮಾಡಿದರೆ ಅಡಿಕೆ ಹರಳು ಉದುರುವುದನ್ನು ತಡೆಗಟ್ಟಬಹುದು.

ಪಿಶ್‌ ಆಮಿನೋ ಆಸಿಡ್: 2 ಕೆ.ಜಿ ಮೀನಿನ ತ್ಯಾಜ್ಯ, 1 ಕೆ.ಜಿ ಬೆಲ್ಲ ಸೇರಿಸಿ 2 ತಿಂಗಳು ಕೊಳೆಸಿ 400 ಲೀ ನೀರಿಗೆ ಮಿಶ್ರಣ ಮಾಡಿ ಅದಕ್ಕೆ 4 ಲೀಟರ್‌ ದೇಶಿ ಹಸು ಹಾಲನ್ನು ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಣೆ ಮಾಡಿದರೆ ಪೊಟ್ಯಾಸ್‌ ಗೊಬ್ಬರ ಹಾಕಿವುದಕ್ಕೆ ಸಮನಾಗುತ್ತದೆ.

ಸತ್ತ ಆಕಳು ಕರುವಿನ ಔಷಧಿ: ಸತ್ತ ಆಕಳು ಕರುಗಳನ್ನು ಬಯಲಲ್ಲಿ ಬಿಸಾಡದೇ ಅದನ್ನು ಅವಶೇಷಕ್ಕೆ 40 ಕೆ.ಜಿ ಸಗಣಿ, 40ಲೀ ಗೋಮೂತ್ರ, 40 ಲೀ ಮಜ್ಜಿಗೆಯೊಂದಿಗೆ ಒಂದು ಬ್ಯಾರಲ್‌ ನೊಳಗೆ ಹಾಕಿ 6 ತಿಂಗಳು ಕೊಳೆಸಿ ಇದನ್ನು 200ಲೀ. ನೀರಿಗೆ 5 ಲೀಟರಿನಂತೆ ಹಾಕಿ ಭೂಮಿಗೆ ಹಾಕುವುದರಿಂದ ಭೂಮಿಯ ಫಲವತ್ತತೆ ದುಪ್ಪಟ್ಟಾಗುತ್ತದೆ.

‘ನನ್ನ ಈ ಎಲ್ಲ ಸಾವಯವ ಕೃಷಿಗೆ ಕೊಲ್ಲಾಪುರದ ಕಾಡಸಿದ್ದೇಶ್ವರ ಸ್ವಾಮೀಜಿಯ ಉಪದೇಶಗಳೇ ಪ್ರೇರಣೆಯಾಗಿವೆ. ಇದರ ಫಲವಾಗಿ 2003ರಲ್ಲಿ ಒಂದು ಎಕರೆಗೆ 41 ಕ್ವಿಂಟಲ್‌ ಮೆಕ್ಕೇಜೋಳ ಬೆಳೆದು ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಲಭಿಸಿದೆ’ ಎಂದು ರೈತ ಮಂಜಪ್ಪ ಮುರಡಕ್ಕನವರ ತಿಳಿಸಿದರು.

‘ನಾವು ಅಡಿಕೆಯ ಜೊತೆಗೆ 25 ತೆಂಗು, 6 ಮಾವು, 6 ಲಿಂಬು, 50 ತೇಗ, ಗಿಡಗಳನ್ನು ಬೆಳೆಸಿದ್ದೇವೆ. ಜೊತೆಗೆ ಮನೆಯ ಹಿಂದೆ ಕಾಫಿ ಗಿಡವನ್ನು ಬೆಳೆಸಿದ್ದು ಅದರಿಂದ ಕಾಫಿಪುಡಿ ತಯಾರಿಸಿ ಮನೆಬಳಕೆಗೆ ಉಪಯೋಗಿಸುತ್ತೇವೆ. ಅಲ್ಲದೇ ಅಡುಗೆಗೆ ತೋಟದಲ್ಲಿನ ತೆಂಗಿನ ಗಿಡಗಳ ಕೊಬ್ಬರಿಯನ್ನು ಬಳಸಿ ಎಣ್ಣೆ ತಯಾರಿಸಿ ಅಡುಗೆಗೆ ಇದನ್ನೇ ಹಾಕುತ್ತಿದ್ದು, 25 ವರ್ಷದಿಂದ ನಾವು ಯಾವುದೇ ಎಣ್ಣೆಯನ್ನು ಖರೀಸದಿಸಿಲ್ಲ’ ಎಂದು ಅವರ ಆರೋಗ್ಯದ ಗುಟ್ಟನ್ನು ಶೋಭಾ ಮುಡಕ್ಕನವರ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.