ADVERTISEMENT

ಕುಮಾರಪಟ್ಟಣ | ರೈತ ಆತ್ಮಹತ್ಯೆ: ಪರಿಹಾರಕ್ಕಾಗಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:21 IST
Last Updated 16 ಮೇ 2024, 15:21 IST
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಒತ್ತಾಯಿಸಿದರು
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಒತ್ತಾಯಿಸಿದರು   

ಕುಮಾರಪಟ್ಟಣ: ಸಮೀಪದ ಕರೂರು ಗ್ರಾಮದ ರೈತ ಸೋಮಪ್ಪ ಕರಿಹನುಮಪ್ಪ ಹೊಸಮನಿ (45) ಗುರುವಾರ ಎಣ್ಣಿಹೊಸಳ್ಳಿ ಬಳಿಯ ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮಪ್ಪ ಅವರಿಗೆ ಪತ್ನಿ ಹಾಗೂ ಪುತ್ರರು ಇದ್ದಾರೆ.

ಬೆಲೆ ಕುಸಿತ, ಬೆಳೆ ಹಾನಿ, ಕೊಳವೆ ಬಾವಿ ಬತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರೂರಿನ ಕೆವಿಜಿ ಬ್ಯಾಂಕ್‌ ಹಾಗೂ ವಿಎಸ್‌ಎಸ್‌ ಬ್ಯಾಂಕಿನಲ್ಲಿ ₹18.4 ಲಕ್ಷ ಸಾಲ ಮಾಡಿದ್ದರು’ ಎಂದು ಕುಮಾರಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪರಿಹಾರಕ್ಕಾಗಿ ಮನವಿ: ‘ಸೋಮಪ್ಪ ಮನನೊಂದು ಜಮೀನಿನ ರೇಷ್ಮೆ ಸಾಕಣೆ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತನ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು. ಪತ್ನಿಗೆ ₹15 ಸಾವಿರ ಮಾಸಾಶನ ನೀಡಬೇಕು’ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಒತ್ತಾಯಿಸಿದರು.

ತಾಲ್ಲೂಕು ಆಡಳಿತ ಘಟನಾ ಸ್ಥಳಕ್ಕೆ ಬರುವ ವರೆಗೆ ಮೃತದೇಹವನ್ನು ಹೆದ್ದಾರಿಯಲ್ಲಿಟ್ಟು ಪ್ರತಿಭಟಿಸುವುದಾಗಿ ರೈತರು ಪಟ್ಟು ಹಿಡಿದಾಗ ಸ್ಥಳಕ್ಕೆ ತಹಶೀಲ್ದಾರ್‌ ಸುರೇಶಕುಮಾರ್ ಟಿ., ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ, ಹಲಗೇರಿ ಠಾಣೆ ಪಿಎಸ್‌ಐ ಸುನೀಲಕುಮಾರ ನಾಯಕ ದೌಡಾಯಿಸಿದರು.

ಮೃತ ರೈತನ ಅಲ್ಪ ಜಮೀನು ಕರೂರಿನ ರಾಮ್ಕೊ ಸಿಮೆಂಟ್ ಫ್ಯಾಕ್ಟರಿಗೆ ಹೋಗಿರುವುದರಿಂದ ಕಂಪನಿಯ ಮುಖ್ಯಸ್ಥರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ ಪ್ರತಿಭಟನಕಾರರು ಮೃತ ರೈತನ ಹಿರಿಯ ಮಗನಿಗೆ ಕಂಪನಿಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಒತ್ತಡಕ್ಕೆ ಮಣಿದ ಸಿಮೆಂಟ್‌ ಫ್ಯಾಕ್ಟರಿಯ ಮುಖ್ಯಸ್ಥರು, ಮಗನಿಗೆ ಉದ್ಯೋಗ ಕೊಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಮುಖಂಡ ಈರಣ್ಣ ಹಲಗೇರಿ, ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಎಂ.ಎಸ್. ಕಡೂರ, ಕಂದಾಯ ನಿರೀಕ್ಷಕ ವಿ.ಎಂ. ಮಳೀಮಠ, ಎಂ.ಎಸ್. ಕೆಂಚರಡ್ಡೇರ, ಬಸವಂತಪ್ಪ ಆಶ್ವನವರ, ಮುಖಂಡರಾದ ಚಂದ್ರಣ್ಣ ಬೇಡರ, ತಿರುಕಪ್ಪ ವಡ್ಲವರ, ಬಸವಂತಪ್ಪ ಬೆನ್ನೂರ, ವಾಸಪ್ಪ ಎಲಿಗಾರ, ಮಲ್ಲಿಕಾರ್ನುನ ಬೆಣ್ಣಿ, ಬಸವಂತಪ್ಪ ಬಣಕಾರ, ಹರಿಹರಗೌಡ ಪಾಟೀಲ ಹಾಜರಿದ್ದರು.

ಸೋಮಪ್ಪ ಹೊಸಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.