ADVERTISEMENT

ಪೈರು ರಕ್ಷಣೆಗೆ ‘ಮೈಕ್‌’ ಉಪಾಯ: ಬೆಳೆ ರಕ್ಷಣೆಗೆ ತಂತ್ರಜ್ಞಾನಕ್ಕೆ ಮೊರೆ

ಶಂಕರ ಕೊಪ್ಪದ
Published 28 ಮಾರ್ಚ್ 2023, 3:20 IST
Last Updated 28 ಮಾರ್ಚ್ 2023, 3:20 IST
   

ಹಿರೇಕೆರೂರು: ರೈತರು ತಾವು ಬೆಳೆದ ಬೆಳೆಗಳನ್ನು ಪ್ರಾಣಿ–ಪಕ್ಷಿಗಳಿಂದ ರಕ್ಷಿಸಿ ಕೊಳ್ಳಲು ಹೊಲದ ಸುತ್ತಲೂ ಮುಳ್ಳಿನ ಬೇಲಿ, ಸೀರೆಯ ಬೇಲಿ ಕಟ್ಟುವುದು, ಬೆದರು ಗೊಂಬೆ ನಿಲ್ಲಿಸುವುದು, ಗಂಟೆ ಕಟ್ಟುವುದು ಸಾಮಾನ್ಯ.

ಆದರೆ, ಹಿರೇಕೆರೂರು ತಾಲ್ಲೂಕಿನ ಹಳೇ ವೀರಾಪುರ ಗ್ರಾಮದ ರೈತ ಸಿದ್ದನಗೌಡ ಹೊಸಗೌಡ್ರು ಬೆಳೆ ರಕ್ಷಣೆಗೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ತಮ್ಮ ನಾಲ್ಕು ಎಕರೆ ಜಮೀನಿನಲ್ಲಿರುವ ಸೂರ್ಯಕಾಂತಿ ಬೆಳೆ ರಕ್ಷಣೆಗೆ ಮಿನಿ ರೆಕಾರ್ಡೆ‌ಬಲ್ ಮೈಕ್ (ಧ್ವನಿ ದಾಖಲಿಸಬಹುದಾದ ಮೈಕ್) ಉಪಾಯ ಕಂಡುಕೊಂಡಿದ್ದಾರೆ.

ಈ ಮೈಕ್‌‌ನಲ್ಲಿ(ಧ್ವನಿವರ್ಧಕ) ತಮ್ಮ ಧ್ವನಿ ದಾಖಲಿಸಿ ಹೊಲದ ಸುತ್ತಲೂ ಅಳವಡಿಸಿದ್ದಾರೆ. ಹೊಲದಲ್ಲಿ ಅದರಿಂದ ನಿರಂತರವಾಗಿ ಸದ್ದು ಮೊಳಗುವಂತೆ ಮಾಡಿದ್ದು, ಪ್ರಾಣಿ– ಪಕ್ಷಿಗಳು ಹೊಲದ ಕಡೆ ಸುಳಿಯುತ್ತಿಲ್ಲ.

ADVERTISEMENT

‘ಬೆಳೆ ಬೆಳೆದು ನಿಂತ ಮೇಲೆ ರಾಶಿ ಮಾಡೋವರೆಗೆ ತಿಂಗಳುಗಟ್ಟಲೆ ದಿನಪೂರ್ತಿ ಶಬ್ದ ಮಾಡುವುದು ಕಷ್ಟದ ಕೆಲಸ. ಹೊಲದ ಸುತ್ತಲೂ ಸೀರೆಯ ಬೇಲಿ ಕಟ್ಟುವುದು, ಗಾಳಿ ಬಿಸಿದಾಗಲೆಲ್ಲ ಶಬ್ದ ಮಾಡುವಂತೆ ಗಂಟೆ ಕಟ್ಟುವುದು ಇತ್ಯಾದಿ ಪ್ರಯತ್ನಗಳನ್ನು ರೈತ ಮಾಡುತ್ತಾರೆ. ಇದೀಗ ತಂತ್ರಜ್ಞಾನ ಬಳಸಿ ಬೆಳೆ ರಕ್ಷಣೆಗೆ ಕ್ರಮವಹಿಸಿರುವೆ’ ಎನ್ನುತ್ತಾರೆ ರೈತ ಸಿದ್ದನಗೌಡ.

‘ಬೇಸಾಯದಲ್ಲಿ ಆಗಿರುವ ತೊಂದರೆಗಿಂತ ಕೈಗೆ ಬಂದ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿತ್ತು. ಪ್ರತಿ ಸಲ ಬೆಳೆ ಬಂದಾಗ ಗಿಳಿಗಳು, ಗುಬ್ಬಿ–ಕಾಗೆಗಳ ಕಾಟಕ್ಕೆ ಬೇಸತ್ತು ಹೋಗಿದ್ದೆ. ಪಕ್ಕದ ಮಾಸೂರಿನ ಸಂತೆಯಲ್ಲಿ ಮೈಕ್‌‌ಗಳನ್ನು ಮಾರಾಟ ಮಾಡುತ್ತಿದ್ದರು. ಅದನ್ನು ₹400 ಕೊಟ್ಟು ಖರೀದಿಸಿ ತಂದೆ. ನಮ್ಮ ಹೊಲದ ಸುತ್ತ ನಾಲ್ಕು ಮೈಕ್‌‌ಗಳನ್ನು ಗಿಡಕ್ಕೆ ಕಟ್ಟಿದ್ದೇನೆ. ಕೂಗುವ ಧ್ವನಿಯನ್ನು ಮೈಕ್‌‌ನಲ್ಲಿ ರೆಕಾರ್ಡ್ ಮಾಡಿದ್ದೇವೆ. ಇದರಿಂದಾಗಿ ಯಾವುದೇ ಪ್ರಾಣಿ ಪಕ್ಷಿಗಳು ನಮ್ಮ ಹೊಲದ ಕಡೆ ಸುಳಿಯುತ್ತಿಲ್ಲ’ ಎಂದು ರೈತ ಸಿದ್ದನಗೌಡ ಹೊಸಗೌಡ್ರು ಹೇಳಿದರು.

ನೆರೆ ರೈತರಿಂದ ಅನುಕರಣೆ: ಹಳೆಯ ವೀರಾಪುರ ಗ್ರಾಮದ ರೈತರು ಪ್ರಾಣಿ ಪಕ್ಷಿಗಳಿಂದ ರೈತರು ಬೆಳೆದಿರುವ ತೊಗರಿ, ಜೋಳ, ಮೆಕ್ಕೆಜೋಳ, ಸೂರ್ಯ ಕಾಂತಿ ಹೀಗೆ ವಿವಿಧ ಬೆಳೆಗಳನ್ನು ಪ್ರಾಣಿ-ಪಕ್ಷಿಗಳಿಂದ ರಕ್ಷಿಸಲು ಹೊಲದ ಸುತ್ತಲೂ ರೈತರು ಮೈಕ್ ಅಳವಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.