ADVERTISEMENT

ರಾಣೆಬೆನ್ನೂರು |ಖರ್ಚು ಹೆಚ್ಚು-ಕೂಲಿಗಳ ಕೊರತೆ: ಹತ್ತಿ ಬೆಳೆಯಲು ರೈತರು ನಿರಾಸಕ್ತಿ

ಮುಕ್ತೇಶ ಕೂರಗುಂದಮಠ
Published 9 ನವೆಂಬರ್ 2024, 4:58 IST
Last Updated 9 ನವೆಂಬರ್ 2024, 4:58 IST
ರಾಣೆಬೆನ್ನೂರಿನ ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದ ಹತ್ತಿ ಅಂಡಿಗೆಗಳು
ರಾಣೆಬೆನ್ನೂರಿನ ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದ ಹತ್ತಿ ಅಂಡಿಗೆಗಳು   

ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಹತ್ತಿ ಬೆಳೆಯನ್ನು ರೈತರು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರುತ್ತಿದ್ದಾರೆ. ಕೂಲಿ ಕಾರ್ಮಿಕರ ಕೊರತೆ ಮತ್ತು ಹತ್ತಿ ಬೆಳೆಗೆ ಕಾಡುವ ಗುಲಾಬಿ ಕಾಯಿ ಕೊರಕ ಕೀಟದ ಹೆಚ್ಚಿನ ರೋಗ ಬಾಧೆಯಿಂದ ಹತ್ತಿ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ತಾಲ್ಲೂಕಿನಲ್ಲಿ ಶೇ 90 ರಷ್ಟು ರೈತರು ಹತ್ತಿ ಬೆಳೆಯುವದನ್ನೇ ಕೈ ಬಿಟ್ಟಿದ್ದಾರೆ.‌

ರಾಜ್ಯ ಮೂಲೆ ಮೂಲೆಗಳಿಂದ ರೈತರು ಹತ್ತಿ ಮಾರಾಟಕ್ಕೆ ತರುತ್ತಿದ್ದರು. ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆ ಹತ್ತಿ ಮಾರಾಟಕ್ಕೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿತ್ತು. ಮೈಸೂರು ಜಿಲ್ಲೆಗಳಿಂದ ಹತ್ತಿಯನ್ನು ಮಾರಾಟಕ್ಕೆ ತರುತ್ತಿದ್ದರು. ಕಣ್ಣಿಗೆ ಕಾಣುವಷ್ಟು ಹತ್ತಿ ಅಂಡಿಗೆ ಇರುತ್ತಿದ್ದವು. ಈಗ ಸೋಮವಾರ ಮತ್ತು ಗುರುವಾರ ಎರಡು ದಿನ ಮಾರುಕಟ್ಟೆ ಇರುತ್ತದೆ.

ಎಪಿಎಂಸಿಯಲ್ಲಿ ಹತ್ತಿ ವ್ಯಾಪಾರ ನಂಬಿಕೊಂಡು ನೂರಾರು ಅಂಗಡಿಗಳು ಹೊಸದಾಗಿ ಆರಂಭವಾಗಿದ್ದವು. ವ್ಯಾಪಾರ ಈಗ ಐದಾರು ಅಂಗಡಿಗಳಲ್ಲಿ ಮಾತ್ರ ಹತ್ತಿ ಅಲ್ಲಲ್ಲಿ ಕಾಣಸಿಗುತ್ತಿದೆ. ಇದರಿಂದ ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌ ಮತ್ತು ಸಹಕಾರಿ ನೂಲಿನ ಗಿರಣಿಗಳು ಬಂದಾಗಿ ಹಾಳು ಬಿದ್ದಿವೆ.

ADVERTISEMENT

ಎರಡು ಮೂರು ವರ್ಷಗಳಿಂದ ಹತ್ತಿ ದರ ಯಥಾಸ್ಥಿತಿ ಇದೆ. ಹತ್ತಿ ಬೆಲೆ ₹7000 ರಿಂದ ₹7500 ವರೆಗೆ ದರ ಇದೆ. ನ.7 ರಂದು ಮಾದರಿ ದರ ₹6255 ರಿಂದ ₹8370 ದರ ಇದೆ.

ಬಿ ಟಿ ಹತ್ತಿ ₹7000 ದಿಂದ ₹7500, ಡಿ ಸಿ ಎಚ್ ಹತ್ತಿ ಕ್ವಿಂಟಲ್ ಗೆ ₹10,000 ದಿಂದ ₹11,000 ವರೆಗೆ ದರ, ಮಳೆಗೆ ತೊಯ್ದು ಕೆಂಪು ಮತ್ತು ಕಪ್ಪಾಗಿದ ಹತ್ತಿ ₹6,000 ದಿಂದ ₹6,500 ವರೆಗೆ ಎಂದು ಮಾರುಕಟ್ಟೆಯಲ್ಲಿ ಕಂಡು ಬಂದಿತು.

ತುಂಗಭದ್ರಾ ನದಿ ತೀರದ ಪ್ರದೇಶಗಳು ಮತ್ತು ಹಿರೆಕೆರೂರು, ಬ್ಯಾಡಗಿ ತಾಲ್ಲೂಕುಗಳಿಂದ ಹತ್ತಿ ಮಾರಾಟಕ್ಕೆ ಬರುತ್ತಿದೆ. ತಾಲ್ಲೂಕಿನ ಉಕ್ಕುಂದ ಮತ್ತು ಸರ್ವಂದ ಭಾಗಗಳಲ್ಲಿ ಮಾತ್ರ ಹತ್ತಿ ಬೆಳೆಯುತ್ತಾರೆ ಎನ್ನುತ್ತಾರೆ ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ.

ತಾಲ್ಲೂಕಿನಲ್ಲಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಕೂಲಿ ಕಾರ್ಮಿಕರ ಕೊರತೆ ಮತ್ತು ರೋಗ ಭಾದೆಯಿಂದ ಇಳುವರಿ ಕುಂಠಿತವಾಗಿದೆ. ಬೆಲೆ ಕೂಡ ಕಡಿಮೆಯಾಗಿದ್ದಕ್ಕೆ ದುಪ್ಪಟ್ಟು ನಷ್ಟ ಅನುಭವಿಸುವಂತಾಗಿದೆ ಎನ್ನುವ ರೈತರು ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ, ಭತ್ತ, ಶೇಂಗಾ, ಹೆಸರು ಮತ್ತು ಬೀಜೋತ್ಪಾದನೆ ಬೆಳೆಯತ್ತು ರೈತರು ಮುಖ ಮಾಡಿದ್ದಾರೆ.

ಹತ್ತಿ ಬಿಡಿಸಲು ಕೂಲಿ ಕಾರ್ಮಿಕರೇ ಅತಿಅವಶ್ಯವಾಗಿದೆ. ಮೆಕ್ಕೆಜೋಳ, ಭತ್ತ ಇತರೆ ಕಾಳು ಕಡಿಗಳನ್ನು ಯಂತ್ರಗಳಿಂದ ಕಟಾವು ಮಾಡಿ ನೇರವಾಗಿ ಮಾರುಕಟ್ಟೆಗೆ ಒಯ್ಯುತ್ತಾರೆ. ಇದರಿಂದ ಹತ್ತಿ ಬೆಳೆಯನ್ನು ಕಡಿಮೆ ಮಾಡಿದ್ದಾರೆ. ಅಲ್ಲದೇ ಹತ್ತಿ ಬೆಂಬಲ ಬೆಲೆ ಖರೀದಿ ಕೇಂದ್ರದ ಮೂಲಕ ಹತ್ತಿ ಖರೀದಿ ಮಾಡುವ ದರವು ಕಡಿಮೆಯಾಗಿದೆ.ರೈತರು ಹತ್ತಿ ಫಸಲು ಬಂದಾಗ ಖರೀದಿ ಕೇಂದ್ರ ಪ್ರಾರಂಭವಾಗಿರುವುದಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ಪ್ರಸಕ್ತ ಬೆಲೆ ಅಂದಾಜು ಪ್ರತಿ ಕೆಜಿಗೆ ₹70 ರಿಂದ ₹80 ಬೆಲೆ ಇದ್ದರೆ, ಹತ್ತಿ ಬಿಡಿಸಲು ಪ್ರತಿ ಕೆಜಿಗೆ ಕೂಲಿ ಕಾರ್ಮಿಕರಿಗೆ ₹15 ನೀಡಬೇಕಾಗಿದೆ. ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಬೇಡಿಕೆ ಹೆಚ್ಚಾಗಿದೆ. ಕೆಜಿಗೆ ₹15 ರಿಂದ 20 ದರ ನೀಡಿದರೂ ಹತ್ತಿ ಬಿಡಿಸಲು ಯಾರೂ ಬರುವುದಿಲ್ಲ. ಅಲ್ಲದೇ ಸರ್ಕಾರದ ವಿವಿಧ ಯೋಜನೆಗಳಿಂದ ಕೂಲಿ ಕೆಲಸಕ್ಕೆ ಬರುತ್ತಿಲ್ಲ ಎನ್ನುತ್ತಾರೆ ರೈತರು.

ಹತ್ತಿ ಬೆಳೆಗೆ ಸಾಕಷ್ಟು ಪರಿಶ್ರಮಬೇಕಾಗಿದೆ. ಗೊಬ್ಬರ, ಬೀಜ, ಹೊಲ ಉಳುಮೆ, ಕ್ರಿಮಿನಾಶಕ ಸಿಂಪಡಣೆ ಸೇರಿ ಎಕರೆಗೆ ₹25 ಸಾವಿರದಿಂದ ₹35 ಸಾವಿರ ಖರ್ಚು ಬರುತ್ತದೆ. ಎಕರೆಗೆ 10 ರಿಂದ 15 ಕ್ವಿಂಟಲ್‌ ಇಳುವರಿ ಬರುತ್ತಿತ್ತು. ವರ್ಷಗಳಿಂದ ಈಗ 4 ರಿಂದ 5 ಕ್ವಿಂಟಲ್‌ ಹತ್ತಿ ಇಳುವರಿ ಇಳಿಕೆಯಾಗಿದೆ. ಖರ್ಚು ಮೈಮೇಲೆ ಬರುವುದರಿಂದ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹಮಾಲರಿಗೂ ಕೂಲಿ ಕೆಸಲ ಕಡಿಮೆಯಾಗಿದೆ ಎನ್ನುತ್ತಾರೆ ಹಮಾಲರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ.

ಜಿನ್ನಿಂಗ್‌ ಮಿಲ್‌ಗಳು ಬಂದಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿ ಹತ್ತಿ ಇಳುವರಿ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ಮಿಲ್‌ಗಳು ಕೆಲಸ ನಿಲ್ಲಿಸಿವೆ. ಇದರಿಂದ ಮಿಲ್‌ ಮಾಲೀಕರು ಕೂಡ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ.

‘ರಾಣೆಬೆನ್ನೂರಿನಲ್ಲಿ ಒಟ್ಟು 32 ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌ ಯುನಿಟ್‌ ಇದ್ದವು. ಹತ್ತಿ ಬೆಳೆ ಕುಸಿತದಿಂದ ಎಲ್ಲಾ ಬಂದಾಗಿದ್ದು 05 ಯುನಿಟ್‌ಗಳು ಮಾತ್ರ ಚಾಲು ಇವೆ. ಹತ್ತಿ ಬೆಳೆಯುವ ಪ್ರದೇಶವು ಕಡಿಮೆಯಾಗಿದ್ದಕ್ಕೆ ಹತ್ತಿ ಮಾರುಕಟ್ಟೆಗೆ ಬರುತ್ತಿಲ್ಲ. ರಾಜ್ಯದಲ್ಲಿ ಅನೇಕ ಸಹಕಾರಿ ನೂಲಿನ ಗಿರಣಿಗಳು ಬಂದಾಗಿವೆ. ನಾವು ಕೈಗಾರಿಕೆ ಸ್ಥಾಪಿಸಲು ಮಾಡಿದ ಸಾಲ ಎರಡು ಪಟ್ಟು ಹೆಚ್ಚಾಗಿದೆ. ಬಹಳಷ್ಟು ನಷ್ಟವನ್ನು ಅನುಭವಿಸುತ್ತಿದ್ದೇವೆ‘ ಎನ್ನುತ್ತಾರೆ ಹತ್ತಿ ಜಿನ್ನಿಂಗ್‌ ಪ್ರೆಸ್ಸಿಂಗ್‌ ಮಾಲೀಕ ಜಯಣ್ಣ (ಸುಜೀತ) ಜಂಬಿಗಿ.

ರಾಣೆಬೆನ್ನೂರಿನ ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದ ಹತ್ತಿ ಅಂಡಿಗೆಗಳು

ಹತ್ತಿ ಬೆಳೆ ಇಳುವರಿ ಕುಂಠಿತ

ರಾಣೆಬೆನ್ನೂರು ತಾಲ್ಲೂಕಿನಲ್ಲಿ ಹತ್ತಿ ಬಿತ್ತನೆ ಮಾಡುವ ಪ್ರದೇಶ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಬಾರಿ ಪ್ರಮಾಣದಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ.  5000 ರಿಂದ 6000 ಹೆಕ್ಟೇರ್‌ ವರೆಗೆ ಬಿತ್ತನೆಯಾಗುತ್ತಿತ್ತು. ಪ್ರಸಕ್ತ ಸಾಲಿಗೆ ಮಳೆಯಾಶ್ರಿತ ಪ್ರದೇಶದಲ್ಲಿ 1150 ಹೆಕ್ಟೇರ್‌ ಮತ್ತು ನೀರಾವರಿಗೆ 217 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆಯುವ ಪ್ರದೇಶವಾಗಿದೆ. ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯುವ ಪ್ರದೇಶ ಕುಂಠಿತವಾಗುತ್ತಿದೆ. ಈ ಬಾರಿ ಮುಂಗಾರು ಮಳೆ ಹೆಚ್ಚಾಗಿದ್ದರಿಂದ ಹತ್ತಿ ಬೆಳೆ ಹಾನಿಗೊಂಡಿದೆ. ರೋಗದ ಬೀತಿ ಮತ್ತು ಕೂಲಿ ಕಾರ್ಮಿಕರ ಬೇಡಿಕೆ ಹೆಚ್ಚಾಗಿದ್ದರಿಂದ ಹತ್ತಿ ಬೆಳೆಯಲು ರೈತರು ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಕೆಲ ರೈತರು

ಹತ್ತಿ ಬೆಳೆ ಕಟಾವು ಮಾಡುವವರೆಗೂ ಖರ್ಚು ಹೆಚ್ಚಾಗುತ್ತದೆ. ರೈತರು ಪರ್ಯಾಯವಾಗಿ ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದಾರೆ. ಇದರಿಂದ ಹತ್ತಿ ಬೆಳೆಯುವ ಪ್ರದೇಶ ಕುಸಿಯುತ್ತಿದೆ.
-ಶಾಂತಮಣಿ ಜಿ. ಕೃಷಿ ಸಹಾಯಕ ನಿರ್ದೇಶಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.