ADVERTISEMENT

ಕಾರ್ಖಾನೆಗಳಿಂದ ಕಾರ್ಮಿಕರ ಕೊರತೆ ನೆಪ: ಕಬ್ಬು ಕಟಾವಿಗೆ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 6:57 IST
Last Updated 24 ನವೆಂಬರ್ 2023, 6:57 IST
ಕುನ್ನೂರ ಗ್ರಾಮದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರು
ಕುನ್ನೂರ ಗ್ರಾಮದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರು   

ತಡಸ (ದುಂಡಶಿ): ಸಕಾಲಕ್ಕೆ ಕಬ್ಬು ಕಟಾವಿಗೆ ಕಾರ್ಮಿಕರು ಸಿಗದಂತಾಗಿದ್ದು, ಬೆಳೆ ಒಣಗುವ ಮುನ್ನ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.

ಸುಮಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳಿಲ್ಲದ ಕಾರಣ ಕಬ್ಬು ಬೆಳೆಯಲು ರೈತರು ನಿರಾಸಕ್ತಿ ತೋರುತ್ತಿದ್ದರು. ಆದರೆ, ಕೋಣನಕೇರಿ ಹತ್ತಿರದ ವಿಐಎನ್‌‌ಪಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಿಂದಾಗಿ ತಾಲ್ಲೂಕಿನಲ್ಲಿ 1 ಲಕ್ಷಕ್ಕೂ ಅಧಿಕ ಎಕರೆಯಷ್ಟು ಕಬ್ಬು ಬೆಳೆದಿದ್ದಾರೆ. ಮಳೆ ಕೊರತೆಯಿಂದಾಗಿ ಹೇಳಿಕೊಳ್ಳುವಂತಹ ಇಳುವರಿ ಬಾರದಿದ್ದರೂ, ಬೋರ್‌ವೆಲ್‌ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಕಬ್ಬು ಕಟಾವು ಮಾಡುವುದೇ ಅವರಿಗೆ ಚಿಂತೆಯಾಗಿ ಪರಿಣಮಿಸಿದೆ.

ಕಬ್ಬು ಕಟಾವಿಗೆ ಕಾರ್ಖಾನೆಗಳು ಮಹಾರಾಷ್ಟ್ರದ ಬೀಡ, ಸತಾರಾ, ಬಳ್ಳಾರಿ ಜಿಲ್ಲೆಯಿಂದ ಗ್ಯಾಂಗ್‌ಗಳನ್ನು ಕರೆಸಿವೆ. ಆದರೆ, ಇವರು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಕಟಾವಿಗೆ ತಮ್ಮ ಸರದಿ ಬರುವಷ್ಟರಲ್ಲಿ ಬೆಳೆ ಒಣಗುತ್ತದೆ ಎಂಬ ಚಿಂತೆ ಕಬ್ಬು ಬೆಳೆಗಾರರದ್ದಾಗಿದೆ.

ADVERTISEMENT

ಹೆಚ್ಚುವರಿ ಹಣಕ್ಕೆ ಬೇಡಿಕೆ:

ಕಬ್ಬು ಕಟಾವಿಗೆ ಕಾರ್ಖಾನೆ ವತಿಯಿಂದ ಹಣ ನೀಡುತ್ತಿದ್ದರೂ, ಗ್ಯಾಂಗ್‌ಗಳು ರೈತರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿವೆ. ಕಬ್ಬು ಕಟಾವಿಗೆ ಬಂದಿರುವ ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಟನ್‌ಗೆ ₹200ರಿಂದ ₹250ಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಾರ್ಖಾನೆಗೆ ಒಂದು ಲಾರಿ ಕಬ್ಬು ಸಾಗಿಸಲು ಚಾಲಕನಿಗೆ ಭತ್ಯೆಯಾಗಿ ₹400, ಕಟಾವು ಯಂತ್ರ ಚಾಲಕನಿಗೆ ದಿನಕ್ಕೆ ₹500ರಿಂದ ₹1,000, ಯಂತ್ರದ ಮಾಲೀಕನಿಗೆ ಟನ್‌ಗೆ ಹೆಚ್ಚುವರಿಯಾಗಿ ₹200 ನೀಡಬೇಕಾಗಿದೆ. ಕಟಾವು ಗ್ಯಾಂಗ್‌ನವರು ಟನ್ ಕಬ್ಬಿಗೆ ₹150ರಿಂದ ₹300 ಬೇಡಿಕೆ ಇಡುತ್ತಿದ್ದಾರೆ.

ಹೆಚ್ಚು ಹಣ ನೀಡಿದ ರೈತರ ಕಬ್ಬು ಕಟಾವಿಗೆ ಗ್ಯಾಂಗ್ ಮುಂದಾಗುತ್ತಿದ್ದು, ಹಣ ನೀಡಲು ಸಾಧ್ಯವಾಗದ ಬಡರೈತರು ಕಬ್ಬನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಕಳುಹಿಸಲು ಪರದಾಡುವಂತಾಗಿದೆ.

ಶಿಗ್ಗಾಂವಿ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯವರು ಕಾರ್ಮಿಕರ ಕೊರತೆಯ ನೆಪ ಹೇಳುವುದನ್ನು ಬಿಟ್ಟು ಕಬ್ಬನ್ನು ತಕ್ಷಣ ಕಟಾವು ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಕುನ್ನೂರ ಗ್ರಾಮದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರು
ಸಾಗಣೆ ವೆಚ್ಚ; ರೈತರಿಗೆ ನಷ್ಟ
ವಿಐಎನ್‌ಪಿ ಕಾರ್ಖಾನೆಯು ಜಿಲ್ಲೆಯ ವಿವಿಧೆಡೆ ಹಾಗೂ ಕಾರ್ಖಾನೆಯ ಅಕ್ಕಪಕ್ಕದ ಹಳ್ಳಿಗಳಿಂದಲೂ ಕಬ್ಬು ಖರೀದಿಸುತ್ತಿದೆ. ಆದರೆ ಎಲ್ಲರಿಗೂ ಒಂದೇ ರೀತಿಯಾಗಿ ಸಾಗಣೆ ವೆಚ್ಚ ಕಡಿತ ಮಾಡುತ್ತಿದೆ. ಇದರಿಂದ ಕಾರ್ಖಾನೆ ಸುತ್ತಲಿನ ಹಳ್ಳಿಗಳ ರೈತರಿಗೆ ಅನ್ಯಾಯವಾಗುತ್ತಿದೆ. 1 ಟನ್‌ಗೆ ₹80ರಿಂದ ₹100 ನಷ್ಟವಾಗುತ್ತಿದೆ. ಸಾಗಣೆಯಲ್ಲಿ ಆಗುತ್ತಿರುವ ತಾರತಮ್ಮ ಸರಿಪಡಿಸಿ ಕನಿಷ್ಠ ದರ ನಿಗದಿಪಡಿಸಬೇಕು. ಸಕಾಲಕ್ಕೆ ಕಬ್ಬು ಕಟಾವು ಮಾಡಬೇಕು ಎಂದು ರೈತ ರುದ್ರಪ್ಪ ಕರಡಿ ಆಗ್ರಹಿಸಿದ್ದಾರೆ. ಕಾರ್ಖಾನೆ ಘೋಷಿಸಿರುವ ದರ ಅಂತಿಮವಲ್ಲ! ವಿಐಎನ್‌ಪಿ ಕಾರ್ಖಾನೆ ವತಿಯಿಂದ ಘೋಷಿಸಿರುವ ದರ ಅಂತಿಮವಲ್ಲ. ಬೇರೆ ಕಾರ್ಖಾನೆಯವರು ಯಾವ ದರ ನೀಡುತ್ತಾರೆ ಎನ್ನುವುದನ್ನು ಆಡಳಿತ ಮಂಡಳಿ ಗಮನಿಸುತ್ತಿದೆ. ಅವರು ಹೆಚ್ಚುವರಿ ದರ ನೀಡಿದರೆ ನಾವು ನೀಡಬೇಕಾಗುತ್ತದೆ. ಈಗ ನಮ್ಮ ಕಾರ್ಖಾನೆ ಕಬ್ಬು ಸಾಗಣೆ ಮತ್ತು ಕಟಾವು ವೆಚ್ಚವಾಗಿ ಸರಾಸರಿ ₹750 ದರ ನಿಗದಿ ಮಾಡಿದೆ.  1 ಟನ್‌ಗೆ ₹2415 ನೀಡಲಾಗುತ್ತಿದೆ ಎನ್ನುತ್ತಾರೆ ವಿಐಎನ್ಎಪಿ ಸಕ್ಕರೆ ಕಾರ್ಖಾನೆ ಕೋಣನಕೇರಿ ಎಂಡಿ ಬಸವನಗೌಡ ಪಾಟೀಲ. 1 ಟನ್‌ಗೆ ₹3073 ದರ ನಿಗದಿ ವಿಐಎನ್‌ಪಿ ಕಾರ್ಖಾನೆಗೆ ಒಂದು ಟನ್ ಕಬ್ಬಿಗೆ ₹3073 ಎಫ್ಆರ್‌ಪಿ ನಿಗದಿಯಾಗಿದೆ . ಇದರಲ್ಲಿ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ₹750 ಕಡಿತವಾಗುತ್ತಿದೆ. ಕಾರ್ಖಾನೆ ಹೆಚ್ಚುರಿಯಾಗಿ ₹92 ಸೇರಿಸಿ ರೈತರಿಗೆ ₹2415 ಪಾವತಿಸುತ್ತಿದೆ.  ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಹಳಿಯಾಳ ₹3678 ಮಲಪ್ರಭಾ ಶುಗರ್ಸ್ ₹3168 ರೇಣುಕಾ ಶುಗರ್ಸ್ ಮುನವಳ್ಳಿ ₹3773 ದಾವಣಗೆರೆ ಶುಗರ್ಸ್ ₹2970 ವಿಜಯನಗರ ಶುಗರ್ಸ್ ₹2920 ಜೆಎಂ ಶುಗರ್ಸ್ ಸಂಗೂರ ಹಾವೇರಿ ₹2923 ನಿದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.