ಹಾವೇರಿ: ಜಿಲ್ಲಾ ವ್ಯಾಪ್ತಿಯ ಕುಮಾರಪಟ್ಟಣದಿಂದ ತಡಸ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ–48 (ಎನ್‌ಎಚ್) ಹಾದು ಹೋಗಿದ್ದು, ಈ ಹೆದ್ದಾರಿಯ ಸರ್ವೀಸ್ ರಸ್ತೆಯು ಇದೀಗ ಕೃಷಿ ಫಸಲಿನ ಕಣವಾಗಿದೆ. ಹೆದ್ದಾರಿಯ ಅಕ್ಕ–ಪಕ್ಕ ಹಾಗೂ ಸಮೀಪದ ಗ್ರಾಮಗಳಲ್ಲಿ ಜಮೀನು ಹೊಂದಿರುವ ರೈತರು, ತಮ್ಮ ಕೃಷಿ ಉತ್ಪನ್ನಗಳನ್ನು ಹೆದ್ದಾರಿಗೆ ತಂದು ಸುರಿದು ಒಣಗಿಸಿ ಸ್ವಚ್ಛಗೊಳಿಸುತ್ತಿದ್ದಾರೆ.
ಜಿಲ್ಲೆಯ ಕೃಷಿ ಪ್ರದೇಶದಲ್ಲಿ ಗೋವಿನ ಜೋಳ, ಸೋಯಾಬೀನ್, ಶೇಂಗಾ, ಹೆಸರು ಹಾಗೂ ಇತರ ಕೃಷಿ ಬೆಳೆಗಳನ್ನು ಬೆಳೆಯಲಾಗಿದೆ. ಇದೀಗ ಸೋಯಾಬೀನ್, ಶೇಂಗಾ ಕಟಾವು ಹಂತಕ್ಕೆ ಬಂದಿದೆ. ರೈತರು, ಸೋಯಾಬೀನ್ ಹಾಗೂ ಶೇಂಗಾ ಕಟಾವು ಮಾಡುತ್ತಿದ್ದಾರೆ.
ಯಂತ್ರಗಳ ಮೂಲಕ ಕಟಾವು ಮಾಡುವ ಸೋಯಾಬೀನ್ ಕಾಳುಗಳನ್ನು ರೈತರು ಹೆದ್ದಾರಿಗೆ ಸಾಗಿಸಿ ಒಣಗಿಸಿ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಕೃಷಿ ಕಾರ್ಮಿಕರಿಂದ ಕಟಾವು ಮಾಡಿಸಿದ ಸೋಯಾಬೀನ್ ಬೆಳೆಯನ್ನು ಗಿಡದ ಸಮೇತವಾಗಿ ಹೆದ್ದಾರಿಗೆ ಸಾಗಿಸುತ್ತಿರುವ ರೈತರು, ಅಲ್ಲಿಯೇ ಗಿಡಗಳಿಂದ ಕಾಳು ಬೇರ್ಪಡಿಸಿ ಒಣಗಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.
ರಾಣೆಬೆನ್ನೂರು, ಹಾವೇರಿ, ಶಿಗ್ಗಾವಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯ ಅಕ್ಕ–ಪಕ್ಕದಲ್ಲಿ ರೈತರ ಬಣವೆಗಳು ಹಾಗೂ ಕೃಷಿ ಉತ್ಪನ್ನಗಳ ರಾಶಿಯ ದೃಶ್ಯಗಳು ಕಂಡುಬರುತ್ತಿವೆ. ರೈತಾಪಿ ಕುಟುಂಬದ ಸದಸ್ಯರು, ಕೃಷಿ ಉತ್ಪನ್ನದ ಸ್ವಚ್ಛತೆಯಲ್ಲಿ ತೊಡಗುತ್ತಿದ್ದಾರೆ.
ಹೆದ್ದಾರಿಯಲ್ಲಿ ಬಣವೆ ಹಾಗೂ ಫಸಲಿನ ರಾಶಿ ಹಾಕಿರುವ ರೈತರು, ರಾತ್ರಿಯಿಡಿ ಕಾವಲು ಕಾಯುತ್ತಿದ್ದಾರೆ. ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿಯೇ ಮಲಗುತ್ತಿದ್ದಾರೆ. ಹೆದ್ದಾರಿಯಲ್ಲಿ ರಾತ್ರಿ ಸಂದರ್ಭದಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಈ ಸಂದರ್ಭದಲ್ಲಿ ಅಪಾಯ ಹೆಚ್ಚಿರುತ್ತದೆ. ರೈತರಿಗೆ ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂಬ ಆತಂಕವೂ ಕಾಡುತ್ತಿದೆ.
ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಿದ್ದ ಫಸಲು ಇದೀಗ ಕಟಾವಿಗೆ ಬಂದಿದೆ. ಫಸಲು ಕಟಾವು ಮಾಡಿದ ನಂತರ, ಜಮೀನಿನಲ್ಲಿಯೇ ಕಣ ಮಾಡುವ ರೂಢಿ ಇದೆ. ಅದೇ ಕಣದಲ್ಲಿ ಫಸಲು ಬಣವೆ ಹಾಕಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ರೈತರು ಜಮೀನಿನಲ್ಲಿ ಕಣ ಮಾಡುವುದು ಕಡಿಮೆಯಾಗಿದೆ. ಸಮಯ ವ್ಯರ್ಥ ಹಾಗೂ ಹೆಚ್ಚು ಹಣ ಖರ್ಚಾಗುತ್ತದೆಂದು ಕಣ ಮಾಡುತ್ತಿಲ್ಲವೆಂದು ರೈತರು ಹೇಳುತ್ತಿದ್ದಾರೆ.
‘ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಸದಾ ಖಾಲಿ ಇರುತ್ತದೆ. ಜೊತೆಗೆ ಕಣ ಮಾಡಲು ಹೇಳಿ ಮಾಡಿಸಿದ ಜಾಗವಾಗಿದೆ. ಅದೇ ಕಾರಣಕ್ಕೆ ರೈತರು, ಸರ್ವೀಸ್ ರಸ್ತೆಯಲ್ಲಿ ಕೃಷಿ ಉತ್ಪನ್ನ ಹಾಕುತ್ತಿದ್ದಾರೆ. ಫಸಲು ಕಟಾವು ಮಾಡಿದ ನಂತರ, ನೇರವಾಗಿ ಸರ್ವೀಸ್ ರಸ್ತೆಗೆ ಸಾಗಿಸಲಾಗುತ್ತಿದೆ. ಜಮೀನಿನಲ್ಲಿ ಕಣವಾಗಿದ್ದರೆ, ಸಗಣಿಯಿಂದ ಬಳಿಯಬೇಕು. ಜೊತೆಗೆ, ಸಮತಟ್ಟು ಮಾಡಬೇಕು. ಅದಕ್ಕೆಲ್ಲ ಈಗ ಸಮಯವಿಲ್ಲ’ ಎಂದು ರೈತ ಶರಣಪ್ಪ ಹೇಳಿದರು.
ಗ್ರಾಮಕ್ಕೊಂದು ಕಣ ಅಗತ್ಯ: ‘ಜಿಲ್ಲೆಯಲ್ಲಿ ಸಣ್ಣ ಹಿಡುವಳಿ ರೈತರು ಹೆಚ್ಚಾಗಿದ್ದಾರೆ. ದೊಡ್ಡ ರೈತರು ತಮ್ಮದೇ ಜಮೀನಿನಲ್ಲಿ ಕಾಯಂ ಕಣ ಮಾಡಿಕೊಂಡಿದ್ದಾರೆ. ಸಣ್ಣ ರೈತರು, ಕಣ ಮಾಡುವುದು ಕಷ್ಟ. ಕಣ ಮಾಡಿದರೂ ಬಿತ್ತನೆ ಸಮಯದಲ್ಲಿ, ಅದೇ ಜಾಗವನ್ನು ಬಿತ್ತನೆಗೆ ಬಳಸುತ್ತಾರೆ’ ಎಂದು ರೈತ ಮಲ್ಲೇಶಣ್ಣ ತಿಳಿಸಿದರು.
‘ಗ್ರಾಮದಲ್ಲಿ ಸುಸಜ್ಜಿತ ಕಣ ಬೇಕು. ಅದೇ ಕಣದಲ್ಲಿ ರೈತರು, ಸರದಿ ಪ್ರಕಾರ ಕೃಷಿ ಫಸಲು ಸ್ವಚ್ಛಗೊಳಿಸಲು ಅನುಕೂಲವಾಗುತ್ತದೆ. ಆದರೆ, ಗ್ರಾಮದಲ್ಲಿ ಕಣ ಮಾಡಲು ಯಾವ ಸರ್ಕಾರವೂ ಕ್ರಮ ಕೈಗೊಳ್ಳುತ್ತಿಲ್ಲ. ಬೆಳೆ ಬೆಳೆಯಲು ಒಂದು ರೀತಿಯ ಕಷ್ಟವಾದರೆ, ಕೈಗೆ ಬಂದ ಫಸಲು ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳುಹಿಸುವುದು ಮತ್ತೊಂದು ಕಷ್ಟ’ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಾದು ಹೋಗಿರುವ ಎನ್.ಎಚ್–48 ಕೃಷಿ ಫಸಲಿಗೆ ರೈತರ ಕಾವಲು ಸರ್ವೀಸ್ ರಸ್ತೆಯಲ್ಲಿ ರಾತ್ರಿ ವಾಸ್ತವ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.