ADVERTISEMENT

ಬೆಳೆ ವಿಮೆ ತಾರತಮ್ಯ ಸರಿಪಡಿಸುವಂತೆ ಆಗ್ರಹ: ಸರ್ಕಾರದ ವಿರುದ್ಧ ಘೋಷಣೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 11:03 IST
Last Updated 28 ಜನವರಿ 2020, 11:03 IST
ಹಾವೇರಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ರೈತ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ರೈತ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆ ವಿಮೆ ತಾರತಮ್ಯ ಸರಿಪಡಿಸಿ ಹಣ ವಿತರಿಸಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ‘ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ‘ಕಿಸಾನ್‌ ಸಮ್ಮಾನ್‌’ ಯೋಜನೆಯ ಹಣವನ್ನು ರೈತರಿಗೆ ತಲುಪಿಸಲು ಜಿಲ್ಲಾಡಳಿತ ವಿಫಲವಾಗಿದೆ. ಈ ಹಣಕ್ಕಾಗಿ ರೈತರು ತಹಶೀಲ್ದಾರ್‌ ಕಚೇರಿ, ಬ್ಯಾಂಕುಗಳಿಗೆ ಅಲೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕಿಸಾನ್‌ ಸಮ್ಮಾನ’ ಎಂಬುದು ಸರ್ಕಾರದ ಯೋಜನೆಯಾಗಿದ್ದರೆ, ಅಧಿಕಾರಿಗಳು ಅದನ್ನು ‘ಕಿಸಾನ್‌ ಅವಮಾನ್‌’ ಎಂದು ಬದಲಾಯಿಸಲು ಹೊರಟಿದ್ದಾರೆ. ಕೇವಲ 5 ಸಾವಿರ ರೈತರಿಗೆ ಯೋಜನೆ ಹಣವನ್ನು ನೀಡಲು ಮುಂದಾಗಿದ್ದಾರೆ. ಎಲ್ಲರಿಗೂ ಈ ಯೋಜನೆ ಹಣ ತಲುಪುವಂತೆ ಮಾಡಬೇಕು’ ಎಂದರು.

‘ರೈತರು ಬರಗಾಲ, ಅತಿವೃಷ್ಟಿಗೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಣವನ್ನು ರೈತರ ಖಾತೆಗೆ ಇದುವರೆಗೂ ಹಾಕಿಲ್ಲ. ಬೆಳೆ ವಿಮೆ ತುಂಬಿದ ಎಲ್ಲರಿಗೂ ಶೇ 25ರಷ್ಟು ವಿಮೆ ನೀಡಬೇಕು ಎಂದು ಸರ್ಕಾರ ₹49 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕೂಡಲೇ ಆ ಹಣವನ್ನು ಜಿಲ್ಲಾಡಳಿತ ರೈತರ ಖಾತೆಗೆ ಹಾಕಬೇಕು’ ಎಂದು ಆಗ್ರಹಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ರೈತರಿಗೆ ₹2,050 ಕೋಟಿ ಸಾಲಮನ್ನಾವನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಲ್ಲಿ ₹450 ಕೋಟಿಯನ್ನು ಕೆಲವು ರೈತರ ಖಾತೆಗೆ ಜಮಾ ಮಾಡಲಾಗಿತ್ತು. ಇನ್ನುಳಿದ ಹಣವನ್ನು ಶೀಘ್ರ ಜಮಾ ಮಾಡಬೇಕು. ಸಾಲ ತೀರಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶೀಘ್ರರೈತರ ಸಾಲಮನ್ನಾ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ರಾಜ್ಯದ ಒಟ್ಟು 73,660 ರೈತರ ಕೃಷಿ ಸಾಲವು ಅಸಲು, ಬಡ್ಡಿ, ದಂಡ ಎಲ್ಲ ಸೇರಿ ₹658 ಕೋಟಿ ಇದೆ. ಈ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬ್ಯಾಂಕ್‌ ಅಧಿಕಾರಿಗಳು ಕೃಷಿ ಸಾಲ ವಸೂಲಿ ಮಾಡಲು ಹಳ್ಳಿಗಳಿಗೆ ಬಂದರೆ, ಅವರನ್ನು ಕಟ್ಟಿ ಹಾಕಿ ಶಿಕ್ಷೆ ನೀಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನೆರೆ ಪರಿಹಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಪರಿಹಾರ ನೀಡಿದ್ದಾರೆ. ಬೆಳೆ ನಾಶವಾದ ರೈತರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯ 48 ಸಾವಿರ ರೈತರಿಗೆ ಪರಿಹಾರವೇ ಮುಟ್ಟಿಲ್ಲ. ಮನೆ ಕಳೆದುಕೊಂಡ ಬಡವರಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ರೈತ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.