ADVERTISEMENT

ರೀಲ್ಸ್ ವಿಡಿಯೊಗಾಗಿ ಮತಯಂತ್ರದ ಚಿತ್ರೀಕರಣ: ಯುವಕರಿಬ್ಬರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:45 IST
Last Updated 13 ನವೆಂಬರ್ 2024, 16:45 IST
   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ ಗ್ರಾಮದಲ್ಲಿರುವ ಮತಗಟ್ಟೆ–9ರಲ್ಲಿ ಮತಯಂತ್ರದ ಚಿತ್ರೀಕರಣ ಮಾಡಲು ಮುಂದಾಗಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ.

‘ಗ್ರಾಮದ ನಿವಾಸಿಯಾಗಿರುವ ಯುವಕರು, ಮೊದಲ ಬಾರಿ ಮತದಾನ ಮಾಡಲು ಅರ್ಹತೆ ಪಡೆದಿದ್ದರು. ಮತದಾನದ ಮೊದಲ ಕ್ಷಣವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ‘ರೀಲ್ಸ್‌’ ವಿಡಿಯೊ ಮಾಡಲು ಯೋಚಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮತಗಟ್ಟೆಗಳಲ್ಲಿ ಮೊಬೈಲ್‌ ಬಳಕೆ ನಿರ್ಬಂಧಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿದ್ದ ಇಬ್ಬರು ಯುವಕರು, ಮೊಬೈಲ್ ಸಮೇತ ಒಳಗಡೆ ಹೋಗಿದ್ದರು. ಮತದಾನದ ಚೀಟಿ ನೀಡಿ, ಮತಯಂತ್ರದ ಬಳಿ ಮತ ಚಲಾಯಿಸಲು ತೆರಳಿದ್ದರು. ಇದೇ ಸಂದರ್ಭದಲ್ಲಿ ಮೊಬೈಲ್ ಹೊರಗೆ ತೆಗೆದು, ಚಿತ್ರೀಕರಣ ಮಾಡಲಾರಂಭಿಸಿದ್ದರು.’

ADVERTISEMENT

‘ಯುವಕರ ಕೃತ್ಯವನ್ನು ನೋಡಿದ್ದ ಮತಗಟ್ಟೆ ಅಧಿಕಾರಿಗಳು, ವಿಡಿಯೊ ಚಿತ್ರೀಕರಣವನ್ನು ಪ್ರಶ್ನಿಸಿದ್ದರು. ಅವರ ಜೊತೆಗೆಯೇ ಯುವಕರು ವಾಗ್ವಾದ ನಡೆಸಿದ್ದರು. ನಂತರ, ಭದ್ರತಾ ಸಿಬ್ಬಂದಿ ಮತಗಟ್ಟೆಯೊಳಗೆ ಹೋಗಿ ಯುವಕರನ್ನು ವಶಕ್ಕೆ ಪಡೆದರು’ ಎಂದು ಮೂಲಗಳು ತಿಳಿಸಿವೆ.

ಭಾಗಶಃ ಚಿತ್ರೀಕರಣ: ‘ಯುವಕರಿಬ್ಬರು ಮೊಬೈಲ್ ಜಪ್ತಿ ಮಾಡಲಾಗಿದೆ. ಮತಗಟ್ಟೆ ಹೊರಗಿನ ವಿಡಿಯೊ ಹಾಗೂ ಯುವಕರ ಸೆಲ್ಫಿ ವಿಡಿಯೊಗಳಿವೆ. ಜೊತೆಗೆ, ಮತಗಟ್ಟೆಯೊಳಗಿನ ಭಾಗಶಃ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೊದಲ ಬಾರಿ ಮತದಾನ ಮಾಡುತ್ತಿದ್ದರಿಂದ, ಈ ಸಂಭ್ರಮವನ್ನು ರೀಲ್ಸ್‌ ವಿಡಿಯೊ ಮಾಡಲು ಯೋಚಿಸಿದ್ದೆ. ಇದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿರಲಿಲ್ಲ’ ಎಂದು ಯುವಕರು ಹೇಳುತ್ತಿದ್ದಾರೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.