ಹಾವೇರಿ: ಬೆಳಗಾವಿಯಲ್ಲಿ ಅಮಾನವೀಯವಾಗಿ ನಡೆದ ಮಹಿಳೆಯ ಬೆತ್ತಲೆ ಪ್ರಕರಣ ಹಾಗೂ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಶಿಶು ಭ್ರೂಣ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ.ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿತು. ನಂತರ ಕೆಲಹೊತ್ತು ರಸ್ತೆ ತಡೆ ನಡೆಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆದ ಮಹಿಳೆಯ ಬೆತ್ತಲೆ ದುಷ್ಕೃತ್ಯ ವಿರೋಧಿಸಿ, ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಸ್ಪಂದನೆರಹಿತ ಸರ್ಕಾರವಾಗಿದ್ದು, ಮಹಿಳೆಯರು ಸುರಕ್ಷಿತವಾಗಿ ಬದುಕುವುದು ಕಷ್ಟವಾಗಿದೆ. ಇಂತಹ ಸರ್ಕಾರ ನಡೆಸುವುದಕ್ಕಿಂತ ರಾಜೀನಾಮೆ ಕೊಟ್ಟು ಮನೆಯಲ್ಲಿ ವಿಶ್ರಮಿಸುವುದು ಒಳ್ಳೆಯದು. ರೈತರು ಮಳೆ, ಬೆಳೆ ಇಲ್ಲದೇ ಕಂಗಾಲಾಗಿದ್ದು, ಇಂತಹ ಸಂದರ್ಭದಲ್ಲಿ ರೈತರಿಗೆ ಅಸಲು ತುಂಬಿದರೆ ಬಡ್ಡಿ ಮನ್ನಾ ಎಂಬ ಮುಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದು, ಇಂತಹ ದುರಾಡಳಿತ ನಡೆಸುವುದಕ್ಕಿಂತ ಕಾನೂನು ಕಾಪಾಡಲು ಸಾಧ್ಯವಿಲ್ಲ. ರಾಜ್ಯದ ಜನತೆಯ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಕಾಂಗ್ರೆಸ್‍ನ ಈ ದುಷ್ಟ ಸರ್ಕಾರದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ದಲಿತರಿಗೆ ಬದುಕುವ ಹಕ್ಕಿಲ್ಲದಂತಾಗಿದೆ. ಬಡವರು ದೀನದಲಿತರು ಜೀವನ ನಡೆಸುವುದೇ ಕಷ್ಟವಾಗಿದ್ದು, ಸರ್ಕಾರ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಣ ಮಾಡುವ ಉದ್ದೇಶದಿಂದ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದು, ಇದರಿಂದ ಸಮಾಜದಲ್ಲಿ ಯುವಸಮುದಾಯ ದಾರಿತಪ್ಪುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ವೀರೇಂದ್ರ ಶೆಟ್ಟರ, ಶಶಿಧರ ಹೊಸಳ್ಳಿ, ಕೃಷ್ಣಾ ಈಳಗೇರ, ರುದ್ರೇಶ ಚಿನ್ನಣ್ಣನವರ, ಕೆ.ಶಿವಲಿಂಗಪ್ಪ, ಶೋಭಾ ನಿಸ್ಸೀಮಗೌಡ್ರ, ಕೆ.ಸಿ. ಕೋರಿ, ಮಂಜುನಾಥ ಮಡಿವಾಳರ, ಲತಾ ಬಡ್ನಿಮಠ, ನಿಂಗಪ್ಪ ಗೋಬ್ಬೇರ, ಶಿವಾನಂದ ಮ್ಯಾಗೇರಿ, ಸಂತೋಷ ಅಲದಕಟ್ಟಿ, ಶಿವಕುಮಾರ ತಿಪ್ಪಶೆಟ್ಟಿ, ನೀಲಪ್ಪ ಚಾವಡಿ, ಮಂಜುನಾಥ ಬ್ಯಾಹಟ್ಟಿ, ಕಲ್ಯಾಣಕುಮಾರ ಶೆಟ್ಟರ, ಅಲ್ಲಾಭಕ್ಷ ತಿಮ್ಮಾಪೂರ, ಜಗದೀಶ ಬಸೇಗಣ್ಣಿ, ನಿರಂಜನ ಹೇರೂರ, ಮಹೇಶ ಕಮಡೊಳ್ಳಿ, ಲಲಿತಾ ಗುಂಡೇನಹಳ್ಳಿ, ಪುಷ್ಪಾ ಚಕ್ರಸಾಲಿ, ಚನ್ನಮ್ಮ ಪಾಟೀಲ, ರತ್ನಾ ಭೀಮಕ್ಕನವರ, ರೋಹಿಣಿ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.