ಹಾವೇರಿ: ಚಾರ್‌ಧಾಮ್ ಯಾತ್ರೆಗೆ ಹೋಗಿ ಭೂ ಕುಸಿತದಿಂದ ಅರ್ಧದಲ್ಲೇ ಸಿಲುಕಿಕೊಂಡಿದ್ದ ಹಾವೇರಿಯ ಜಿಲ್ಲೆಯ ಏಳು ಮಂದಿ ಸುರಕ್ಷಿತವಾಗಿದ್ದು, ಎಲ್ಲರೂ ಇದೀಗ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಅಶೋಕ ವೆಂಕಪ್ಪ ಶಿವಮೊಗ್ಗ (61), ಭಾರತಿ ಅಶೋಕ ಶಿವಮೊಗ್ಗ (55), ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ಶ್ರೀಧರ ಮಂಜಪ್ಪ ಹೊಳಲಕೇರಿ (62), ಶಾಂತಾ ಹೊಳಲಕೇರಿ (57), ವೆಂಕಟೇಶ (62), ರಾಜೇಶ್ವರಿ (60) ಹಾಗೂ ರಾಹುಲ್ (35) ಅವರು ಜೂನ್ 29ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇದಾರನಾಥ ಯಾತ್ರೆಗೆ ಹೋಗಿದ್ದಾರೆ.
ಉತ್ತರಾಖಂಡದ ಜೋಶಿಮಠ ಬಳಿ ಭಾರಿ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ, ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಏಳು ಮಂದಿಯೂ ಮಾರ್ಗಮಧ್ಯೆಯೇ ಸಿಲುಕಿಕೊಂಡಿದ್ದರು. ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದ ಅವರು, ರಕ್ಷಣೆಗಾಗಿ ಕೋರಿದ್ದರು.
ಭೂ ಕುಸಿತ ಸ್ಥಳದಲ್ಲಿದ್ದ ಮಣ್ಣನ್ನು ತೆರವು ಮಾಡಿದ್ದ ಸ್ಥಳೀಯ ಆಡಳಿತ ಮಂಡಳಿ ಸಿಬ್ಬಂದಿ, ಹಾವೇರಿಯ ಏಳು ಮಂದಿಯನ್ನು ಸ್ಥಳದಿಂದ ಮುಂದಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಏಳು ಮಂದಿಯೂ ಹೃಷಿಕೇಶ್‌ನಲ್ಲಿದ್ದಾರೆ. ಮಾರ್ಗಮಧ್ಯೆ ಸಿಲುಕಿದ್ದರಿಂದ, ನಿಗದಿತ ವಿಮಾನದಿಂದ ದೆಹಲಿ ಮೂಲಕ ಹುಬ್ಬಳ್ಳಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ, ಹೊಸದಾಗಿ ವಿಮಾನದ ಟಿಕೆಟ್ ಕಾಯ್ದಿರಿಸಿದ್ದಾರೆ. ಜುಲೈ 16ರಂದು ಏಳು ಮಂದಿಯೂ ದೆಹಲಿಯಿಂದ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಹಾವೇರಿಗೆ ಬರುವ ಸಾಧ್ಯತೆ ಇದೆ.
ಮೊಬೈಲ್ ಕರೆ ಮೂಲಕ ಮಾತನಾಡಿದ ಶ್ರೀಧರ ಹೊಳಲಕೇರಿ, ‘ಎಲ್ಲರೂ ಸುರಕ್ಷಿತವಾಗಿದ್ದಾರೆ. ಭೂ ಕುಸಿತದ ಸ್ಥಳದಿಂದ ಪಾರಾಗಿ ಸುರಕ್ಷಿತವಾಗಿ ಬೇರೆ ಕಡೆ ಬಂದಿದ್ದೇವೆ. ಎಲ್ಲರೂ ಸದ್ಯ ಹೃಷಿಕೇಶದಲ್ಲಿ ಇದ್ದೇವೆ. ನಿನ್ನೆ ಔಷಧಿ ಕೊರತೆ ಇತ್ತು. ಈಗ, ಎಲ್ಲ ಔಷಧಿ ಹಾಗೂ ಮೂಲ ಸೌಕರ್ಯಗಳು ಸಿಕ್ಕಿದೆ. ಜುಲೈ 16ರಂದು ಹಾವೇರಿಗೆ ಬರುತ್ತೇವೆ’ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಸೂಚನೆ ನೀಡುತ್ತಿದ್ದಂತೆ ತ್ವರಿತವಾಗಿ ಕ್ರಮ ಕೈಗೊಂಡು, ಯಾತ್ರಿಗಳನ್ನು ಸುರಕ್ಷಿತವಾಗಿ ಹಾವೇರಿಗೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಆಡಳಿತ ಮಂಡಳಿ ಅಧಿಕಾರಿಗಳ ಜೊತೆಯಲ್ಲೂ ಸಂಪರ್ಕದಲ್ಲಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.