ಹಂಸಬಾವಿ: ಇಲ್ಲಿಗೆ ಸಮೀಪದ ದೀವಿಗೆಹಳ್ಳಿ ಗ್ರಾಮ ಚಿಕ್ಕದಾಗಿದ್ದರೂ 18 ಜನ ಸ್ವಾತಂತ್ರ್ಯ ಯೋಧರನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದ್ದು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗ್ರಾಮದ ಪಾತ್ರವಿದೆ.
ತಾಲ್ಲೂಕು ಕೇಂದ್ರ ಹಿರೇಕೆರೂರಿನಿಂದ ಉತ್ತರಕ್ಕೆ 18 ಕಿ.ಮೀ ಹೋಬಳಿ ಕೇಂದ್ರ ಹಂಸಬಾವಿಯಿಂದ 4 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಕುರಿತು ಐತಿಹಾಸಿಕವಾಗಿ ಯಾವುದೇ ಕುರುಹುಗಳಿಲ್ಲ. ಆದರೆ ಬಳ್ಳಿಗಾವಿಯ ಒಂದು ಶಾಸನ ಈ ಗ್ರಾಮವನ್ನು ಉಲ್ಲೇಖಿಸುತ್ತದೆ. ಅಲ್ಲಿ ‘ಮೇಗುನ್ದ ಪನ್ನೆರಡರ ಬಳಿಯ ಬಾಡ ಕುಂದವಿಗೆ’ ಎಂದು ಉಲ್ಲೇಖವಿದೆ ಅರ್ಥಾರ್ಥ ‘ಆಗ ಚಿನ್ನಮುಳಗುಂದ 12 ಗ್ರಾಮಗಳ ಆಡಳಿತ ಕೇಂದ್ರವಾಗಿತ್ತು. ಆ 12 ಗ್ರಾಮಗಳಲ್ಲಿ ದೀವಿಗಿಹಳ್ಳಿಯೂ ಒಂದಾಗಿದೆ’ ಎಂದು ಹಿರಿಯ ಸಾಹಿತಿ ಭೊಜರಾಜ ಪಾಟೀಲರು ಬರೆದ ‘ಹಿರೇಕೆರೂರ ಗ್ರಾಮನಾಮ ಅಧ್ಯಯನ’ ಕಿರುಗ್ರಂಥದಲ್ಲಿ ನೋಡಬಹುದು.
‘ದೀವಿಗೆಹಳ್ಳಿ ಎಂಬ ಹೆಸರು ಹಿಂದಿನ ಕಾಲದಲ್ಲಿ ಹಂಸಬಾವಿ ಮಾರ್ಗದಿಂದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಬಲೂರಿಗೆ ಸಂಚರಿಸುವ ಶರಣರಿಗೆ ರಾತ್ರಿ ವೇಳೆ ಈ ಗ್ರಾಮದವರು ದೀವಟಿಗೆ ಹಿಡಿದು ದಾರಿ ಮುನ್ನಡೆಸುತ್ತಿದ್ದರಂತೆ ಹೀಗಾಗಿ ನಮ್ಮ ಊರಿಗೆ ದೀವಿಗೆಹಳ್ಳಿ ಎಂದು ಹೆಸರು ಬಂದಿದೆ’ ಎಂದು ಗ್ರಾಮದ ಮಲ್ಲನಗೌಡ ನಾಗಪ್ಪನವರ ತಿಳಿಸಿದರು.
‘ನಮ್ಮೂರಿನಿಂದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಾಜಿ ಸಂಸದರು ಟಿ.ಆರ್.ನೆಶ್ವಿಯವರ ಮಾರ್ಗದರ್ಶನದಲ್ಲಿ ಬ್ರಿಟಿಷರ ವಿರುದ್ಧ ಪಿತೂರಿಗಳನ್ನು ನಡೆಸುತ್ತಿದ್ದರಂತೆ. ಟಿ.ಆರ್. ನೆಶ್ವಿಯವರು ವೃತ್ತಿಯಲ್ಲಿ ಶಿಕ್ಷಕರಾಗಿ ಸುತ್ತಲಿನ ಗ್ರಾಮದ ಯುಕರನ್ನು, ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಹುರಿದುಂಬಿಸುತ್ತಿದ್ದರು. ಮುಂದುವರಿದು ಬ್ರಿಟಿಷರು ಸಂಚರಿಸುವ ರಸ್ತೆ ಮಾರ್ಗಗಳಲ್ಲಿ ಕಂದಕಗಳನ್ನು ನಿರ್ಮಾಣ ಮಾಡಿ ಅವರ ಸಂಚಾರಕ್ಕೆ ಅಡ್ಡಿಪಡಿಸುವುದು, ದೂರವಾಣಿ ಸಂಪರ್ಕದ ತಂತಿಗಳನ್ನು ಕತ್ತರಿಸಿ ಬ್ರಿಟಿಷರ ಬೆಳವಣಿಗೆಗೆ ತಲೆನೋವಾಗಿದ್ದರು. ಹೀಗಾಗಿ ನೆಶ್ವಿಯವರನ್ನು ಸೇರಿದಂತೆ 18 ಜನರನ್ನು ಒಂದು ವರ್ಷ ಕಾರಾಗೃಹಕ್ಕೆ ಹಾಕಲಾಗಿತ್ತು. ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮೂರಿನ ಜನ ಶ್ರಮಿಸಿದ್ದಾರೆ’ ಎಂದು ಗ್ರಾಮದ ನಿವೃತ್ತ ಯೋಧ ಉಜ್ಜನಗೌಡ ಮಾವಿನತೋಪ ‘ಪ್ರಜಾವಾಣಿʼ’ಗೆ ತಿಳಿಸಿದರು.
ಈ ಗ್ರಾಮದಲ್ಲಿ 1500 ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿನ ಜನ ಪ್ರಮುಖವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಮುಖ್ಯವಾಗಿ ಕಬ್ಬು, ಗೋವಿನಜೋಳ, ಬೀಜೋತ್ಪಾದನೆ, ತರಕಾರಿ, ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಗ್ರಾಮದಲ್ಲಿ ಆಂಜನೇಯ, ಬಸವೇಶ್ವರ, ಕರಿಯಮ್ಮ, ಕಲ್ಲೇಶ್ವರ ದೇವಸ್ಥಾನಗಳಿದ್ದು, ಗ್ರಾಮದ ಹೊರಭಾಗದಲ್ಲಿ ಸುತ್ತಮುತ್ತಲ ಯಾವ ಗ್ರಾಮಗಳಲ್ಲಿಯೂ ಕಾಣಸಿಗದ ಪಾರ್ವತಿ ದೇವಸ್ಥಾನ ನಿರ್ಮಾಣ ಮಾಡಿದ್ದು, ಇದರ ಆವರಣದಲ್ಲಿ ಸ್ವಾತಂತ್ರ್ಯ ಯೋಧರ ಸವಿನೆನಪಿಗಾಗಿ ಸ್ಮಾರಕ ಹಾಗೂ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.