ADVERTISEMENT

ಹಗರಿಬೊಮ್ಮನಹಳ್ಳಿ: ಬನ್ನಿಕಲ್ಲು ಗ್ರಾಮದಲ್ಲಿದೆ ಗಾಂಧೀಜಿ ನೆನಪು

ವಿ.ಈಶ್ವರಪ್ಪನವರಿಗೆ ಊರುಗೋಲು, ಗಡಿಯಾರ, ಪತ್ರ ನೀಡಿ ಮೆಚ್ಚುಗೆ

ಸಿ.ಶಿವಾನಂದ
Published 2 ಅಕ್ಟೋಬರ್ 2024, 4:39 IST
Last Updated 2 ಅಕ್ಟೋಬರ್ 2024, 4:39 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ಬಿ.ವಿ. ಮಲ್ಲಿಕಾರ್ಜುನಪ್ಪ ಬಳಿ ಇದ್ದ ಗಾಂಧೀಜಿ ನೀಡಿದ್ದ ವಾಕಿಂಗ್ ಸ್ಟಿಕ್ ಮತ್ತು ಪತ್ರವನ್ನು ಹಿಂದೆ ಪ್ರದರ್ಶಿಸಿದ್ದರು (ಸಂಗ್ರಹ ಚಿತ್ರ)
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ಬಿ.ವಿ. ಮಲ್ಲಿಕಾರ್ಜುನಪ್ಪ ಬಳಿ ಇದ್ದ ಗಾಂಧೀಜಿ ನೀಡಿದ್ದ ವಾಕಿಂಗ್ ಸ್ಟಿಕ್ ಮತ್ತು ಪತ್ರವನ್ನು ಹಿಂದೆ ಪ್ರದರ್ಶಿಸಿದ್ದರು (ಸಂಗ್ರಹ ಚಿತ್ರ)   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ವೀರಾಪುರ ಈಶ್ವರಪ್ಪ ಅವರ ಪುತ್ರ ಬಿ.ವಿ.ಮಲ್ಲಿಕಾರ್ಜುನಪ್ಪ ಅವರ ಮನೆಯಲ್ಲಿ ಮಹಾತ್ಮ ಗಾಂಧೀಜಿ ಬಳಸುತ್ತಿದ್ದ ಊರುಗೋಲು (ವಾಕಿಂಗ್ ಸ್ಟಿಕ್), ಅವರ ಹಸ್ತಾಕ್ಷರವಿರುವ ಪತ್ರವನ್ನು ಇಂದಿಗೂ ಕಾಣಬಹುದಾಗಿದೆ.

ಮಲ್ಲಿಕಾರ್ಜುನಪ್ಪ ಅವರು ಈಚೆಗೆ ನಿಧನರಾಗಿದ್ದಾರೆ. ಅವರ ಪುತ್ರ ಬಿ.ವಿ.ಶಿವಯೋಗಿ ಅವರು ಮನೆಯಲ್ಲಿ ಜತನ ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಸೇವೆಗೆ ಮೆಚ್ಚಿ ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ವೀರಾಪುರ ಈಶ್ವರಪ್ಪ ಇವರಿಗೆ ಗಾಂಧೀಜಿ ಸ್ವತಃ ತಮ್ಮ ವಾಕಿಂಗ್ ಸ್ಟಿಕ್, ಗಡಿಯಾರ ನೀಡಿ ಮೆಚ್ಚುಗೆ ಪತ್ರವನ್ನು ಬರೆದಿರುವುದನ್ನು ಅವರ ಮೊಮ್ಮಗ ಇಂದಿಗೂ ತಮ್ಮ ಬಳಿ ಕಾಯ್ದುಕೊಂಡಿದ್ದಾರೆ.

ವೀರಾಪುರ ಈಶ್ವರಪ್ಪನವರು ಗಾಂಧೀಜಿಯವರನ್ನು ಸ್ವಾತಂತ್ರ್ಯ ಅಧಿವೇಶನಕ್ಕೆ ದಾವಣಗೆರೆಯಿಂದ ಬಳ್ಳಾರಿಗೆ ಕರೆತರಲು ತಮ್ಮ ಸ್ವಂತ ಕಾರ್ ಬಳಸಿದ್ದರು. ನಮ್ಮ ತಾತ ಈಶ್ವರಪ್ಪ ಅವರೇ ಚಾಲಕರಾಗಿ ಗಾಂಧೀಜಿ ಅವರನ್ನು ಸುರಕ್ಷಿತವಾಗಿ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದರು ಎಂದು ನಮ್ಮ ತಂದೆ ಮಲ್ಲಿಕಾರ್ಜುನಪ್ಪ ಅವರು ಹೆಮ್ಮೆಯಿಂದ ಹೇಳುತ್ತಿದ್ದರು ಎಂದು ಶಿವಯೋಗಿ ಮೆಲಕು ಹಾಕುತ್ತಾರೆ.

ADVERTISEMENT

ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಸ್ವತಂತ್ರ ಸಂಗ್ರಾಮದ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ ಗಾಂಧೀಜಿ ತಾಲ್ಲೂಕು ಮತ್ತು ಹೊಸಪೇಟೆ ಮೂಲಕ ಬಳ್ಳಾರಿಗೆ ತೆರಳಿದ್ದರು. ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ತೆರಳುತ್ತಿದ್ದ ವೇಳೆ ಗಾಂಧೀಜಿ ಅವರು ಈಶ್ವರಪ್ಪ ಅವರನ್ನು ಕೂಗಿ ಕರೆದು ಅವರ ಬೆನ್ನುತಟ್ಟಿದ್ದರು. ಜತೆಗೆ ತಮ್ಮ ಸೊಂಟದಲ್ಲಿದ್ದ ಗಡಿಯಾರ ಮತ್ತು ಕೈಯಲ್ಲಿದ್ದ ಅತ್ಯಂತ ಹಗುರ ವಾಕಿಂಗ್ ಸ್ಟಿಕ್‍ ಅನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದರು.

ಗಾಂಧೀಜಿ ಅವರು ಈ ಸಂದರ್ಭದಲ್ಲಿ ಹಲವು ಅಧಿವೇಶನಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರೂ 3.3.1934ರಂದು ಈಶ್ವರಪ್ಪ ಅವರ ಸೇವೆಯಿಂದ ಸಂತಸ ವ್ಯಕ್ತಪಡಿಸಿ ತಮ್ಮ ಹಸ್ತಾಕ್ಷರದಲ್ಲಿಯೇ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.