ರಟ್ಟೀಹಳ್ಳಿ: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯದ ಎಲ್ಲ ಭಾಗಗಳಲ್ಲಿ ಮನೆಗಳು ಕುಸಿತಗೊಂಡಿದ್ದು, ಜನಜೀವನ ಅಸ್ತವ್ಯವಸ್ತವಾಗಿದೆ.
ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿ ತಹಶೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ ನಾಗಣ್ಣನವರ, ತಾಲ್ಲೂಕಿನಲ್ಲಿಯೇ ಈ ವರೆಗೆ ಸುಮಾರು 200ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನೆಲಕಚ್ಚಿವೆ. ಸರ್ಕಾರ ಪ್ರಕೃತಿ ವಿಕೋಪದಿಂದ ಹಾಳಾದ ಮನೆಗಳಿಗೆ ಪರಿಹಾರವಾಗಿ ₹5 ಲಕ್ಷ ನೆರವು ನೀಡಬೇಕು ಎಂದು ಹೇಳಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಮನೆಗಳಿಗೆ ಪರಿಹಾರವೆಂದು ₹5 ಲಕ್ಷ ನೆರವು ನೀಡಲಾಗುತ್ತಿತ್ತು. ಮನೆಗಳು ಹಾನಿಗೊಳಗಾದಾಗ ಎ,ಬಿ,ಸಿ, ಎಂದು ವರ್ಗೀಕರಿಸಿ, ಸೂಕ್ತ ಪರಿಹಾರ ನೀಡುವ ಮೂಲಕ ಬಡಜನರ ಸಂಕಷ್ಟಕ್ಕೆ ನೆರವಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೇವಲ ₹5 ಸಾವಿರದಿಂದ ₹6 ಸಾವಿರ ಪರಿಹಾರ ನೀಡಿ ಬಡಜನರ ಜೀವದೊಂದಿಗೆ ಚಲ್ಲಾಟವಾಡುತ್ತಿದೆ’ ಎಂದು ಆರೋಪಿಸಿದರು.
ರಾಜ್ಯ ರೈತವೋರ್ಚಾ ಮಾಜಿ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ ಮಾತನಾಡಿ, ‘ತಾಲ್ಲೂಕಿನಲ್ಲಿ ಬೆಳೆ ಹಾನಿಯಾಗಿದ್ದು, ಕೂಡಲೇ ತಹಶೀಲ್ದಾರ್ ಅವರು ಕೃಷಿ ಅಧಿಕಾರಿಗಳು, ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ವರದಿ ನೀಡುವಂತೆ ನಿರ್ದೇಶನ ನೀಡಬೇಕು. ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಬೆಳೆವಿಮಾ ಕಂತು ತುಂಬುವ ಅವಧಿಯನ್ನು ಸರ್ಕಾರ ಮುಂದುವರೆಸಬೇಕು’ ಎಂದು ಆಗ್ರಹಿಸಿದರು.
ತಹಶೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ‘ಹಾನಿಗೊಳಗಾದ ಮನೆಗಳ ಸರ್ವೆ ಕಾರ್ಯ ಕೈಗೊಳ್ಳಲು ಸರ್ಕಾರ ತ್ರಿಸದಸ್ಯ ಕಮಿಟಿ ರಚನೆ ಮಾಡಿದ್ದು, ಹಾನಿಯ ವರದಿಯನ್ನು ತರೆಸಿಕೊಂಡು ಪರಿಹಾರದ ಮೊತ್ತವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ನೀಡಲಾಗುವುದು’ ಎಂದರು.
ಮುಖಂಡರಾದ ಆನಂದಪ್ಪ ಹಾದಿಮನಿ, ಶಂಭಣ್ಣ ಗೂಳಪ್ಪನವರ, ಹನುಮಂತಪ್ಪ ಗಾಜೇರ, ಬಸವರಾಜ ಬಾಗೋಡಿ, ಉಜಿನೆಪ್ಪ ಕೋಡಿಹಳ್ಳಿ, ಕಾವ್ಯ ಪಾಟೀಲ, ಪ್ರಕಾಶ ಹರಳಳ್ಳಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.