ADVERTISEMENT

‘ಗಂಗಾಮತ ಸಮುದಾಯಕ್ಕೆ ಟಿಕೆಟ್‌ ನೀಡಿ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 14:50 IST
Last Updated 11 ಮಾರ್ಚ್ 2023, 14:50 IST
ಮಂಜುನಾಥ ಭೋವಿ
ಮಂಜುನಾಥ ಭೋವಿ   

ಹಾವೇರಿ: ‘ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡುವ ಸಂದರ್ಭದಲ್ಲಿ ಗಂಗಾಮತ ಸಮಾಜದ ಮುಖಂಡರಿಗೆ ಆದ್ಯತೆ ನೀಡಬೇಕು’ ಎಂದು ಗಂಗಾಮತಸ್ಥರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಭೋವಿ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಂಗಾಮತ ಸಮಾಜವು ರಾಜಕೀಯ ಪ್ರಾತಿನಿಧ್ಯ ಸಿಗದೇ ಅನ್ಯಾಯಕ್ಕೆ ಒಳಗಾಗಿದೆ. ರಾಜ್ಯದಲ್ಲಿ 45 ಲಕ್ಷ ಜನಸಂಖ್ಯೆ ಹೊಂದಿದ್ದು, ಸಮಾಜದ ಮುಖಂಡರಿಗೆ ರಾಜಕೀಯ ಸ್ಥಾನಮಾನ ನೀಡದೇ ನಿರ್ಲಕ್ಷ್ಯ ತೋರಿದ್ದರಿಂದ ಸಮಾಜಕ್ಕೆ ಅನ್ಯಾಯವಾಗಿದೆ ಎಂದರು.

ಈವರೆಗೂ ರಾಜ್ಯದಲ್ಲಿ ಕೇಲವ 2ರಿಂದ 3 ಸೀಟುಗಳ್ನು ಸಮಾಜದ ಮುಖಂಡರಿಗೆ ನೀಡುತ್ತಾ ಬಂದಿದ್ದಾರೆ. ಸಮಾಜದ ಜನರು ಸಹ ಸಂಘಟಿತರಾಗಿದ್ದು, ಇದೇ ರೀತಿ ಸಮಾಜದ ಮುಖಂಡರನ್ನು ನಿರ್ಲಕ್ಷ್ಯ ಮಾಡುತ್ತಿದ್ದರೆ, ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಸಣ್ಣ ಸಮುದಾಯವೆಂದು ನಿರ್ಲಕ್ಷ್ಯ ತೋರದೇ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಹಿನ್ನೆಲೆಯಲ್ಲಿ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡಬೇಕು. ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 10 ಸೀಟುಗಳನ್ನು ನೀಡಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಎರಡು ಲಕ್ಷ ಜನಸಂಖ್ಯೆ ಹೊಂದಿದ್ದು, ಒಂದೂವರೆ ಲಕ್ಷ ಮತದಾರರಿದ್ದಾರೆ. ಅದರಲ್ಲಿ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ 40 ಸಾವಿರ ಮತದಾರರಿದ್ದು, ಉಳಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿರ್ಣಾಯಕರಾಗಿದ್ದಾರೆ. ಸಾಮಾಜಿಕ ನ್ಯಾಯ ಕೇವಲ ರಾಜಕೀಯ ಭಾಷಣಕ್ಕೆ ಸೀಮಿತಗೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಸಮಯದಾಯಕ್ಕೆ ಆದ್ಯತೆ ನೀಡಲಿದ್ದರೆ ಶಕ್ತಿ ಪ್ರದರ್ಶನ ಮಾಡುವ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗುವುದು ಎಂದು ಹೇಳಿದರು.

ಸಮಾಜದ ಹಿರಿಯರಾದ ಶಂಕರ ಸುತಾರ ಮಾತನಾಡಿ, ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ಈವರೆಗೂ ಸಮುದಾಯ ಎಸ್‍.ಟಿ.ಗೆ ಸೇರ್ಪಡೆಗೊಂಡಿಲ್ಲ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿದೆ. ಕೇವಲ ಭರವಸೆ ನೀಡುತ್ತಾ ಬಂದಿದ್ದಾರೇ ಹೊರತು ಬೇಡಿಕೆ ಈಡೇರಿಲ್ಲ. ಇದರಿಂದಾಗಿ ಸಮುದಾಯವು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಾಗೇಂದ್ರ ತುಮರಿಕೊಪ್ಪ, ರಾಜಣ್ಣ ಜಾಡಮಲ್ಲಿ, ಅಣ್ಣಪ್ಪ ಚಾಕಾಪುರ, ರಾಜು ಕರಿಯಣ್ಣನವರ, ಹೊನ್ನಪ್ಪ ಬಾಸೂರ, ರವಿ ನಿಂಬಕ್ಕನವರ, ಕಾಂತೇಶ ಕುಂದೂರ, ಭರಮಣ್ಣ ಉಳಗಿ, ನಾಗರಾಜ ಮೂಲಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.