ADVERTISEMENT

ಜಾನಪದ ವಿವಿ ಘಟಿಕೋತ್ಸವ: ರೂಪಾ, ಹುಸೇನ್‌ಸಾಬ್‌ಗೆ ಚಿನ್ನದ ಪದಕ

ಜಾನಪದ ವಿವಿ ಘಟಿಕೋತ್ಸವ ಇಂದು: ಎಂ.ಆರ್‌.ಬಸಪ್ಪಗೆ ‘ಗೌರವ ಡಾಕ್ಟರೇಟ್‌’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 19:30 IST
Last Updated 8 ಮಾರ್ಚ್ 2021, 19:30 IST
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನ
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನ   

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ‘ಕರ್ನಾಟಕ ಜಾನಪದ ವಿಶ್ವವಿದ್ಯಾಲಯ’ದ 5ನೇ ವಾರ್ಷಿಕ ಘಟಿಕೋತ್ಸವವು ಮಾರ್ಚ್‌ 9ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಆವರಣದ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಡಿ.ಬಿ. ನಾಯಕ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯಪಾಲ ವಜುಭಾಯ್‌ ರೂಢಾಭಾಯ್‌ ವಾಲಾ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರನ್ನು ಆಹ್ವಾನಿಸಿದ್ದೆವು. ಬಜೆಟ್‌ ಮತ್ತು ಚುನಾವಣೆ ಸೇರಿದಂತೆ ಇತರ ಕಾರಣಗಳಿಂದಾಗಿ ಅವರು ಘಟಿಕೋತ್ಸವಕ್ಕೆ ಬರುವ ಸಾಧ್ಯತೆ ಕಡಿಮೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥಾಪಕ ಡಾ.ಆರ್‌.ಬಾಲಸುಬ್ರಹ್ಮಣ್ಯಂ ‘ಘಟಿಕೋತ್ಸವ ಭಾಷಣ’ ಮಾಡಲಿದ್ದಾರೆ ಎಂದು ಹೇಳಿದರು.

ಬಸಪ್ಪಗೆ ಗೌರವ ಡಾಕ್ಟರೇಟ್‌:

ADVERTISEMENT

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಮಾಳೇನಹಳ್ಳಿಯ ವೀರಗಾಸೆ ಕಲಾವಿದ ಎಂ.ಆರ್‌. ಬಸಪ್ಪ ಅವರಿಗೆ ಜಾನಪದ ವಿ.ವಿ.ಯಿಂದ ಈ ಬಾರಿ ‘ಗೌರವ ಡಾಕ್ಟರೇಟ್‌’ ನೀಡಲಾಗುತ್ತಿದೆ. ಇವರು 200ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು, 60ಕ್ಕೂ ಹೆಚ್ಚು ಮೇಳಗಳನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದರು.

ಹೊಸ ಕೋರ್ಸ್‌:

ಪ್ರಸ್ತುತ ಕೋರ್ಸ್‍ಗಳ ಜೊತೆಗೆ ಹೊಸ ಹೊಸ ಕೋರ್ಸ್‍ಗಳು ಹಾಗೂ ಅಲ್ಪಾವಧಿ ತರಬೇತಿ ಕೋರ್ಸ್‍ಗಳು ಹಾಗೂ ಗುರು ಶಿಷ್ಯ ಪರಂಪರೆ ಕೋರ್ಸ್‍ಗಳು ಆರಂಭಿಸುವ ಚಿಂತನೆ ನಡೆಸಲಾಗಿದೆ. ಕರಕುಶಲ ಕಲೆಯಲ್ಲಿ ಹೊಸ ಆಯಾಮ ಮತ್ತು ಆಲೋಚನೆಗಳನ್ನು ಪ್ರಸ್ತುತಪಡಿಸುವುದು ನಮ್ಮ ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ. ಅನುದಾನದ ಕೊರತೆಯಿಂದ ಬಹಳಷ್ಟು ಕೋರ್ಸ್‍ಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಆರ್ಥಿಕ ಮಿತಿಯಲ್ಲೂ ಹಲವು ಪ್ರಕಟಣೆಗಳನ್ನು ಜನಪದ ವಿ.ವಿ ಹೊರತಂದಿದೆ. ಭಾರತದ ಜಾನಪದ ವಿಶ್ವಕೋಶ 10 ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಮೊದಲ ಸಂಪುಟ ಹೊರಬಂದಿದೆ. ರಾಜ್ಯದ 30 ಜಿಲ್ಲೆಗಳ ‘ಗ್ರಾಮ ಚರಿತ್ರೆ’ ಪ್ರಕಟಣೆ ಮಾಡುವ ಯೋಜನೆಯಡಿ ಈಗಾಗಲೇ ಹಾವೇರಿ ಜಿಲ್ಲೆ ಒಳಗೊಂಡಂತೆ 14 ಜಿಲ್ಲೆಗಳ ಗ್ರಾಮ ಚರಿತ್ರೆ ಪ್ರಕಟಿಸಲಾಗಿದೆ. ಜಾನಪದ ಸಾಂಸ್ಕೃತಿಕ ಕೋಶ ಪ್ರಕಟಣೆ, ಬುಡಕಟ್ಟು ಚಿಂತನೆ, ಮಲೆ ಮಹದೇಶ್ವರ ಸಂಗ್ರಹ ಸೇರಿದಂತೆ ಹಲವು ಪ್ರಕಟಣೆಗಳನ್ನು ಹೊರತರುವ ಕಾರ್ಯ ನಡೆದಿದೆ ಎಂದು ಹೇಳಿದರು.

789 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

2017–18ನೇ ಹಾಗೂ 2018–19ನೇ ಸಾಲಿನಲ್ಲಿ ತಲಾ 7 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 14 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದಾರೆ. ಜಾನಪದ ಸಾಹಿತ್ಯ ವಿಭಾಗದ ರೂಪಾ ಮೂಡೇರ ಮತ್ತು ಹುಸೇನ್‌ಸಾಬ್‌ ಪಿ. ಅವರಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಗುತ್ತದೆ. 2019–20ನೇ ಸಾಲಿನಲ್ಲಿ 19 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಿದ್ದೇವೆ. ಒಟ್ಟಾರೆ 789 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕಾಯಂ ಬೋಧಕರ ಕೊರತೆ

2011ರ ಜುಲೈ 22ರಂದು ಅಧಿಕೃತವಾಗಿ ಸ್ಥಾಪನೆಯಾದ ಜಾನಪದ ವಿ.ವಿ.ಯು ದಶಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜಾನಪದ ಕ್ಷೇತ್ರದ ಅಧ್ಯಯನ ಮತ್ತು ಬೆಳವಣಿಗೆಗೆ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಂಡು ಸಾಗುತ್ತಿದೆ.ಜಾನಪದ ವಿಶ್ವವಿದ್ಯಾಲಯದಲ್ಲಿ 9 ಸ್ನಾತಕೋತ್ತರ ಕೋರ್ಸ್‍ಗಳು ಆರಂಭಿಸಲಾಗಿದೆ. 35 ತಾತ್ಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಾಯಂ ಬೋಧಕರ ಕೊರತೆ ಮತ್ತು ಹಣಕಾಸು ಕೊರತೆಯಿಂದ ನಿರೀಕ್ಷಿತ ಪ್ರಗತಿಗೆ ತೊಡಕಾಗಿದೆ. 50 ಹುದ್ದೆಗಳನ್ನು ಶೀಘ್ರದಲ್ಲೇ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಾನಪದ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಕೆ.ಎನ್. ಗಂಗಾನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್ ಮಂಜುನಾಥ ಸಾಲಿ ಹಾಗೂ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕ ಯತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.