ADVERTISEMENT

ತಡಸ | ಗೋವಿನಜೋಳಕ್ಕೆ ಲದ್ದಿ ಹುಳು ಕಾಟ

ಹೆಚ್ಚಿದ ಹಂದಿ, ಮುಳ್ಳಂದಿ, ಜಿಂಕೆ, ನರಿಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:14 IST
Last Updated 2 ಜುಲೈ 2024, 4:14 IST
ಮಮದಾಪೂರ ಗ್ರಾಮದ ರೈತ ಆನಂದ ಲಮಾಣಿ ಗೋವಿನಜೋಳ ಹೊಲಕ್ಕೆ ಲದ್ದಿ ಹೂಳದ ಕೀಟ ನಾಶಕ ಸಿಂಪಡಿಸಿದರು
ಮಮದಾಪೂರ ಗ್ರಾಮದ ರೈತ ಆನಂದ ಲಮಾಣಿ ಗೋವಿನಜೋಳ ಹೊಲಕ್ಕೆ ಲದ್ದಿ ಹೂಳದ ಕೀಟ ನಾಶಕ ಸಿಂಪಡಿಸಿದರು   

ತಡಸ (ದುಂಡಶಿ): ಜೂನ್‌ ತಿಂಗಳಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಬಿತ್ತನೆ ಕಾರ್ಯವೂ ಉತ್ತಮವಾಗಿದೆ ಎಂದು ನಿಟ್ಟುಸಿರು ಬಿಡುತ್ತಿದ್ದ ರೈತರಿಗೆ ಈದೀಗ ಲದ್ದಿಹೂಳಗಳ ಕಾಟ ನಿದ್ದೆಗೆಡಿಸಿದೆ.   

ಶಿಗ್ಗಾವಿ ತಾಲ್ಲೂಕಿನ ದುಂಡಶಿ ಹೋಬಳಿಯಲ್ಲಿ ಶೇ 65ರಷ್ಟು ಕೃಷಿ ಕ್ಷೇತ್ರದಲ್ಲಿ ಗೋವಿನ ಜೋಳ ಬೆಳೆಯಲಾಗಿದೆ. ಉಳಿದ ಭಾಗದಲ್ಲಿ ಭತ್ತ, ಶೇಂಗಾ, ಸೋಯಾಬಿನ್ ಮುಂತಾದ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. ಕೆಲ ಬೆಳೆಗಳು ನೀರಿಲ್ಲದೇ ಕಾರಣ ಹಾಳಾಗಿವೆ. ನಂತರ ಸುರಿದ ಸತತ ಮಳೆಗೆ ಹಲವು ಬೆಳೆ ಜೌಗು ಹಿಡಿದು ಹಾಳಾಗಿವೆ. ಅಳಿದುಳಿದ ಬೆಳೆಗಳು ಈಗ ಕೀಟಬಾಧೆಯಿಂದ ಬಳಲುತ್ತಿವೆ.

‘ಒಂದೆಡೆ ಕೀಟಬಾಧೆ ಕಾಟ ಹೆಚ್ಚಿದ್ದರೆ ಇನ್ನೊಂದೆಡೆ ಹಂದಿ, ಮುಳ್ಳಂದಿ, ಜಿಂಕೆ, ನರಿಗಳ ಕಾಟ ಹೆಚ್ಚಿದೆ. ಅರಣ್ಯ ಇಲಾಖೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ರೈತ ಆನಂದ ಲಮಾಣಿ ಅಳಲು ತೋಡಿಕೊಂಡರು.

ADVERTISEMENT

‘ರೈತರು ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಕುಟುಂಬದ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಔಷಧ ಅಂಗಡಿಯವರು ತಮಗೆ ಬೇಕಾಗುವ ದರದಲ್ಲಿ ಗೊಬ್ಬರ ಮಾರುತ್ತಿದ್ದರೂ ಕೃಷಿ ಇಲಾಖೆಯ ಅಧಿಕಾರಿಗಳು ಯಾವುದೇ ಶಿಸ್ತು ಕ್ರಮವನ್ನು ವ್ಯಾಪಾರಸ್ಥರ ಮೇಲೆ ಕೈಗೊಳ್ಳುತ್ತಿಲ್ಲ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಸಮಾಗೊಂಡ ಕಿಡಿಕಾರಿದರು.

‘ಕಳೆದ ವರ್ಷದ ಹಲವು ರೈತರ ಬೆಳೆ ವಿಮೆ ಖಾತೆಗೆ ಜಮೆಯಾಗಿಲ್ಲ ಹಾಗೂ ಬರಗಾಲದ ಬೆಳೆಹಾನಿ ಕನಿಷ್ಠ ಮೊತ್ತದಲ್ಲಿ ನೀಡಿರುವುದು, ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬೆಳೆ ವಿಮೆಯನ್ನು ರೈತರಿಗೆ ನೀಡಿಲ್ಲ. ಈ ಕುರಿತು ಜಿಲ್ಲಾ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಪರಿಹಾರ ಮಂಜೂರು ಮಾಡಬೇಕು’ ಎಂದು ಕರ್ನಾಟಕ ಹಸಿರು ಸೇನೆ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ವರುಣಗೌಡ ಪಾಟೀಲ ಹೇಳಿದರು.

ಮಮದಾಪೂರ ಗ್ರಾಮದ ರೈತ ಆನಂದ ಲಮಾಣಿ ಗೋವಿನಜೋಳ ಹೊಲಕ್ಕೆ ಲದ್ದಿ ಹೊಲದ ಕೀಟ ನಾಶಕ ಸಿಂಪಡಿಸುತ್ತಿರುವುದು.

ರೈತರು ಬೀಜೋಪಚಾರ ಸಮಗ್ರ ಕೀಟ ಹತೋಟಿ ಕಾರ್ಯ ಮಾಡಬೇಕು. ಹೊಲದಲ್ಲಿ ದೀಪದ ಬಲೆ ನಿರ್ಮಿಸಿದರೆ ಕೀಟ ಬಾಧೆ ತಡೆಗಟ್ಟಲು ಸಾಧ್ಯ

-ಎಸ್.ಆ‌ರ್.ದಾವಣಗೆರ ಅಧಿಕಾರಿ ರೈತ ಸಂಪರ್ಕ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.