ADVERTISEMENT

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ಪದವೀಧರ

ಖಾಸಗಿ ನೌಕರಿಗೆ ಗುಡ್‌ ಬೈ, ಕೃಷಿಗೆ ಜೈ ಹೇಳಿದ ಚಂದ್ರಶೇಖರ ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 14:37 IST
Last Updated 23 ಜೂನ್ 2018, 14:37 IST
ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು ಗ್ರಾಮದ ಸಾವಯವ ಕೃಷಿಕ ಚಂದ್ರಶೇಖರ ಪಾಟೀಲ 
ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು ಗ್ರಾಮದ ಸಾವಯವ ಕೃಷಿಕ ಚಂದ್ರಶೇಖರ ಪಾಟೀಲ    

ರಾಣೆಬೆನ್ನೂರು: ಪದವಿ ಪೂರೈಸಿದ ಬಳಿಕ ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಹೋಗುವುದು ಸಾಮಾನ್ಯ. ಆದರೆ, ಅಲ್ಲಿನ ಖಾಸಗಿ ನೌಕರಿಗೆ ಗುಡ್‌ ಬೈ ಹೇಳಿ ಹಳ್ಳಿಗೆ ವಾಪಸಾದ ತಾಲ್ಲೂಕಿನ ಕೂನಬೇವು ಗ್ರಾಮದ ಚಂದ್ರಶೇಖರ ಪಾಟೀಲ ಸಾವಯವ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

ಸಾಹಿತಿ ಪೂರ್ಣಚಂದ್ರ ತೇಜಸ್ವಿ ಬರೆದ ಜಪಾನಿನ ಕೃಷಿ ಋಷಿ ಫುಕುವೋಕಾರ ಕುರಿತ ಪುಸ್ತಕವನ್ನು ಕಾಲೇಜಿನ ದಿನಗಳಲ್ಲಿ ಓದಿ ಪ್ರಭಾವಿತರಾಗಿದ್ದ ಪಾಟೀಲರಿಗೆ, ಹಸಿರು ಕ್ರಾಂತಿಯ ಪರಿಣಾಮ ನೆಲ, ಜಲ, ವಾಯು ಮಲೀನ ಹೆಚ್ಚಾಗುತ್ತಿರುವುದು ತೀವ್ರವಾಗಿ ಕಾಡಿತ್ತು. ಪರಿಸರಕ್ಕೆ ಪೂರಕವಾದ ಕೃಷಿಯಿಂದ ಮಾತ್ರ ಜೀವಸಂಕುಲ ಉಳಿಯಲು ಸಾಧ್ಯ ಎಂಬ ನಿಲುವಿಗೆ ಬಂದಿದ್ದರು. ಆಧುನಿಕ ಕೃಷಿಯಿಂದ ಸರ್ವನಾಶ ಎಂಬ ನಿರ್ಧಾರಕ್ಕೆ ಬಂದ ಅವರು, ಸಾವಯವ ಕೃಷಿಯನ್ನು ಆಯ್ಕೆ ಮಾಡಿಕೊಂಡರು.

2010–11 ರಲ್ಲಿ ಸಹಜ ಸಮೃದ್ಧ ಸಂಸ್ಥೆಯ ಕೃಷ್ಣ ಪ್ರಸಾದ ಅವರು ಜಿಲ್ಲೆಯ ಸಾವಯವ ರೈತರನ್ನು ಒಗ್ಗೂಡಿಸಿಕೊಂಡು ಬ್ಯಾಡಗಿಯಲ್ಲಿ ದೇಶಿ ಕೃಷಿಕರ ಬಳಗದ ಸಮಾಲೋಚನಾ ಸಭೆ ಆಯೋಜಿಸಿದ್ದರು. ಅದರಲ್ಲಿ ಪಾಲ್ಗೊಂಡಿದ್ದ ಪಾಟೀಲರಿಗೆ, ಪ್ರಗತಿಪರ ರೈತರಾದ ಕಾಕೋಳ ಚನ್ನಬಸಪ್ಪ ಕೊಂಬಳಿ, ಚಿನ್ನಿಕಟ್ಟಿ ಶ್ರೇಣಿಕರಾಜ ಯಳವತ್ತಿ, ಜಲ್ಲಾಪುರದ ಓಂಕಾರ ಗೌಡ್ರ, ಸಂಗೂರಿನ ಚಂದ್ರಕಾಂತರ ಸಾಧನೆಗಳು ಸ್ಪೂರ್ತಿಯಾದವು. ಅ ನಂತರ ಸಾವಯವ ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ಅವರು, ಫುಕುವೋಕಾರ ಸಹಜ ಕೃಷಿಯ ವಿಚಾರಧಾರೆಗೆ ಪೂರಕವಾಗಿ ಕೆಲವು ಪ್ರಯೋಗಗಳನ್ನೂ ಮಾಡುತ್ತಿದ್ದಾರೆ.

‘ನಾನು, ಮೊದಲಿಗೆ ನಮ್ಮ ಜಮೀನನ್ನು ಸಾವಯವ ಕೃಷಿಗೆ ಮೀಸಲಿಟ್ಟೆನು. ಹಿಂದೆ ಮಾಡಿಕೊಂಡಿದ್ದ ಬಿಟಿ ಹತ್ತಿ, ಸೇವಂತಿಗೆ, ಶೇಂಗಾ, ಟೊಮೆಟೊ, ಬದನೆ, ಮೆಕ್ಕೆಜೋಳ ಬೆಳೆಗಳನ್ನು ಕೈ ಬಿಟ್ಟೆನು. ಹಿರೇಕೆರೂರಿನ ನಾಗಪ್ಪ ನಿಂಬೆಗೊಂದಿ ಅವರ ಮಾರ್ಗದರ್ಶನದ ಮೂಲಕ ‘ಸಹನಾ ಹತ್ತಿ’ ತಳಿಯ ಬಗ್ಗೆ ಮಾಹಿತಿ ಪಡೆದುಕೊಂಡೆನು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಾವಯವ ವಿಭಾಗದ ಮುಖ್ಯಸ್ಥ ಡಾ.ಬಬಲಾದ ಬಿಟಿಗೆ ಪರ್ಯಾಯವಾಗಿ ದೇಶಿ ಹತ್ತಿ ಬೆಳೆಯುವ ಬಗ್ಗೆ ಮಾಹಿತಿ ನೀಡಿ ನೆರವಾದರು’ ಎಂದು ಚಂದ್ರಶೇಖರ ಪಾಟೀಲ ವಿವರಿಸಿದರು.

ADVERTISEMENT

‘ಒಂದೂವರೆ ಎಕರೆಯಲ್ಲಿ ‘ಸಹನಾ ಜವಾರಿ’ ಹತ್ತಿಯನ್ನು ಸಾವಯವ ಪದ್ಧತಿಯಲ್ಲಿ ಬೆಳೆದೆ. ಬೇಸಿಗೆಯಲ್ಲಿ ಹೊಲ ಉಳುಮೆ ಮಾಡಿ ತಿಪ್ಪೆ ಗೊಬ್ಬರ ಹಾಕಿ ಗುಣಿಗೆ ಬಿತ್ತನೆ ಮಾಡಿದೆ. ಒಂದೆರಡು ವಾರದಲ್ಲಿ ಸಾಲು ಕಟ್ಟಿತ್ತು. ಸಾಲಿನ ಮಧ್ಯೆ ರಂಟೆ, ಸಾಲು ಹೊಡೆದು ಪುನ: ತಿಪ್ಪೆ ಗೊಬ್ಬರ ನೀಡಿದ್ದೆ. ನಳನಳಿಸುವಂತೆ ಹತ್ತಿ ಬೆಳೆದು ನಿಂತಾಗ ಸಂತೋಷ ಇಮ್ಮಡಿಯಾಗಿತ್ತು’ ಎಂದರು.

‘ಗೋ ಮೂತ್ರ ಹಾಗೂ ಬೇವಿನ ಎಣ್ಣೆ ಸಿಂಪರಣೆ ಮಾಡಿದೆ. ಬಿಟಿ ಹತ್ತಿಗೆ ಶರಣಾಗಿದ್ದ ನಮ್ಮ ಸುತ್ತಲಿನ ರೈತರು ಸಹನಾ ಹತ್ತಿಯನ್ನು ನೋಡಿ ಬೆರಗಾದರು’ ಎಂದರು.

‘ಒಂದೂವರೆ ಎಕರೆಯಲ್ಲಿ ಮುಂಗಾರಿನ 12 ಕ್ವಿಂಟಲ್‌ ಹಾಗೂ ಹಿಂಗಾರಿ ಕೂಳೆಯಲ್ಲಿ 2 ಕ್ವಿಂಟಲ್‌ ಸೇರಿದಂತೆ ಒಟ್ಟು 14 ಕ್ವಿಂಟಲ್‌ ಹತ್ತಿ ಬಂದಿತ್ತು. 60 ಕೆ.ಜಿ. ಬೀಜಗಳನ್ನು ಮೈಸೂರಿನ ಹೆಗ್ಗಡದೇವನಕೋಟೆ ರೈತರು ಹಾಗೂ 7 ಕ್ವಿಂಟಲ್‌ ಬೀಜವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಕೆ.ಜಿಗೆ ₹ 60ರಂತೆ ನೀಡಿದ್ದೆನು’ ಎಂದು ವಿವರಿಸಿದರು.

ಗೋವಿನ ಜೋಳದ ಜೊತೆಗೆ ಹೆಸರು, ತೊಗರಿ, ಅಲಸಂದಿಯಂತಹ ದ್ವಿ ದಳ ಧಾನ್ಯಗಳನ್ನು ಮಿಶ್ರ ಬೆಳೆಯಾಗಿ ಬೆಳೆದೂ ಯಶಸ್ವಿಯಾಗಿದ್ದಾರೆ. ಬಾಳೆ, ಸಜ್ಜೆ, ನವಣಿ, ಊದಲು, ಬರಗು, ರಾಗಿ, ಶೇಂಗಾ ಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿದ್ದಾರೆ.

ಎಲ್ಲ ರೀತಿಯ ಬೆಳೆಯಿಂದ ಭೂಮಿ ಫಲವತ್ತತೆ ಹೆಚ್ಚಾಗುತ್ತದೆ. ಒಂದು ನಷ್ಟವಾದರೂ ಇನ್ನೊಂದು ಕೈ ಹಿಡಿಯುತ್ತದೆ. ಉತ್ಪಾದನೆ ಹೆಚ್ಚಾಗುತ್ತದೆ. ರೋಗಗಳು ಕಡಿಮೆಯಾಗಿ, ಮಳೆ ಕಡಿಮೆಯಾದರೂ ಬೆಳೆ ಬರುತ್ತದೆ. ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆ. ಲಾಭ ಹೆಚ್ಚು ಎನ್ನುವುದು ಅವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.