ADVERTISEMENT

ಆಸ್ಪತ್ರೆ ಹಕೀಕತ್ತು | ಹಂಸಭಾವಿ: ತುರ್ತು ಸಂದರ್ಭದಲ್ಲಿಲ್ಲ ಚಿಕಿತ್ಸೆ

ಆಸ್ಪತ್ರೆ ಮೇಲ್ದರ್ಜೆಗೇರಿಸಲು ಜನರು ಒತ್ತಾಯಿ

ರಾಜೇಂದ್ರ ನಾಯಕ
Published 31 ಜುಲೈ 2024, 7:22 IST
Last Updated 31 ಜುಲೈ 2024, 7:22 IST
ಹಂಸಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರ
ಹಂಸಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರ   

ಹಂಸಬಾವಿ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವು ಸೌಕರ್ಯಗಳಿಂದ ವಂಚಿತವಾಗಿದ್ದು, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

‘ಅಪಘಾತ, ಹೆರಿಗೆ ಹಾಗೂ ಇತರೆ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ರೋಗಿಗಳನ್ನು ಅನಿವಾರ್ಯವಾಗಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದ ಸ್ಥಿತಿಯಿದೆ’ ಎಂದು ಜನರು ದೂರುತ್ತಿದ್ದಾರೆ.

ನಿತ್ಯ 100ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಬಂದು ಹೋಗುತ್ತಾರೆ. ಇರುವ ಸೌಲಭ್ಯಗಳಲ್ಲಿಯೇ ವೈದ್ಯರು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಜನರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿಯಿದೆ.

ADVERTISEMENT

ಸದ್ಯದ ಪರಿಸ್ಥಿತಿಯಲ್ಲಿ ತೀವ್ರ ಜ್ವರ, ಮೈ,ಕೈ ನೋವು, ಡೆಂಗಿ, ಇಲಿ ಜ್ವರ, ಉಣ್ಣೆ ಜ್ವರ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಮಕ್ಕಳು ಹಾಗೂ ವೃದ್ಧರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಜನರ ಸಂಖ್ಯೆ ಹೆಚ್ಚಿರುವುದರಿಂದ, ಲಭ್ಯವಿರುವ ಅಲ್ಪ ಸೌಕರ್ಯಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುವುದೇ ವೈದ್ಯರಿಗೆ ಸವಾಲಾಗಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದರಿಂದಾಗಿ ಜನರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುತ್ತಿಲ್ಲವೆಂಬ ಆರೋಪವೂ ಇದೆ.

‘ಆಸ್ಪತ್ರೆಯಲ್ಲಿ 6 ಬೆಡ್‌ಗಳು ಮಾತ್ರ ಇವೆ. ಹೆಚ್ಚುವರಿ ರೋಗಿಗಳು ಬಂದರೆ, ಬೆಡ್‌ಗಳಿಲ್ಲ. ಎಲ್ಲರನ್ನೂ ಬೇರೆ ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಸಣ್ಣ–ಪುಟ್ಟ ಸಮಸ್ಯೆಗೂ ಹೆಚ್ಚು ಖರ್ಚು ಮಾಡಿಕೊಂಡು ಬೇರೆ ಆಸ್ಪತ್ರೆಗಳಿಗೆ ಹೋಗಬೇಕಾದ ಸ್ಥಿತಿ ಇದೆ’ ಎಂದು ಜನರು ದೂರುತ್ತಿದ್ದಾರೆ.

ಲಭ್ಯವಿಲ್ಲದ ಆಂಬುಲೆನ್ಸ್‌: ‘ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ್‌ಗಳಿಲ್ಲ. ತುರ್ತು ಚಿಕಿತ್ಸೆ ಅಗತ್ಯವಿದ್ದರೆ ರೋಗಿಗಳನ್ನು ಖಾಸಗಿ ವಾಹನಗಳಲ್ಲಿ ಕರೆದೊಯ್ಯಬೇಕು. ವಾಹನದವರು ಕೇಳಿದಷ್ಟು ಹಣ ನೀಡಬೇಕು’ ಎಂದು ಚಿಕ್ಕೇರೂರಿನ ಜಮೀರ ಚಿಕ್ಕೋಣ್ತಿ ಅಳಲು ತೋಡಿಕೊಂಡರು.

‘ಆಸ್ಪತ್ರೆಯಲ್ಲಿ ಹೆಚ್ಚಿನ ಸಿಬ್ಬಂದಿ ಇಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗೆ ಹೋಗುವ ರಸ್ತೆಯು ಹಾಳಾಗಿದ್ದು, ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡಲು ಪರದಾಡುತ್ತಿದ್ದೇವೆ’ ಎಂದರು.

ಹಂಸಬಾವಿ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯವಿಲ್ಲ. ಗರ್ಭಿಣಿಯರನ್ನು ತುರ್ತು ಚಿಕಿತ್ಸೆ ಹಾಗೂ ಹೆರಿಗೆಗಾಗಿ ದೂರದ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದೇವೆ. ಇದೇ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ ತೆರೆದರೆ ಅನುಕೂಲ
-ವೀರೇಂದ್ರ ಕರಿಯಂಡ್ರ ಮಡ್ಲೂರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.