ಹಾವೇರಿ: ಹಾನಗಲ್‌ನಲ್ಲಿ ಜನವರಿ 8ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮತ್ತೊಬ್ಬ ಆರೋಪಿ ಅಕ್ಕಿಆಲೂರಿನ ಮಫೀದ್ ಓಣಿಕೇರಿ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈವರೆಗೆ ಒಟ್ಟು 8 ಆರೋಪಿಗಳನ್ನು ಬಂಧಿಸಿದಂತಾಗಿದೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಅಕ್ಕಿಆಲೂರಿನ ಗ್ಯಾರೇಜ್ ಕಾರ್ಮಿಕ ಅಫ್ತಾಬ್ ಚಂದನಕಟ್ಟಿ (24), ವ್ಯಾಪಾರಿ ಮದರಸಾಬ್ ಮಂಡಕ್ಕಿ (23) ಮತ್ತು ಆಟೊ ಚಾಲಕ ಅಬ್ದುಲ್ ಖಾದರ್ ಜಾಫರಸಾಬ್ ಹಂಚಿನಮನಿ (28) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಜ.14ರಂದು ಅಕ್ಕಿಆಲೂರಿನ ಇಮ್ರಾನ್ ಬಶೀರ್ ಅಹಮದ್ ಜೇಕಿನಕಟ್ಟಿ (23) ಹಾಗೂ ರೇಹಾನ್ ಮಹಮ್ಮದ್ ಹುಸೇನ್ ವಾಲೀಕಾರ ಅಕ್ಕಿಆಲೂರ (19) ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಮರುದಿನವೇ (ಜ.15ರಂದು) ಅಕ್ಕಿಆಲೂರಿನ ಸಂತೆ ವ್ಯಾಪಾರಿ ಸಾದಿಕ್ ಬಾಬುಸಾಬ್ ಅಗಸಿಮನಿ (29) ಮತ್ತು ಹೋಟೆಲ್ ಕಾರ್ಮಿಕ ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ (19) ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಕಿಮ್ಸ್ ಆಸ್ಪತ್ರೆಗೆ ಆರೋಪಿ ಸ್ಥಳಾಂತರ
‘ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮಹಮದ್ ಸೈಫ್ ಸಾವಿಕೇರಿ ಅಪಘಾತದಲ್ಲಿ ಗಾಯ ಮಾಡಿಕೊಂಡು 7 ದಿನಗಳಿಂದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕಾಲು ಬಾವು ಬಂದ ಪರಿಣಾಮ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.