ADVERTISEMENT

ಶಿಲ್ಪಕಲಾ ವೈಭವದ ಹಾನಗಲ್ ನಾಡು

ಮಾರುತಿ ಪೇಟಕರ
Published 19 ನವೆಂಬರ್ 2023, 4:46 IST
Last Updated 19 ನವೆಂಬರ್ 2023, 4:46 IST
ಹಾನಗಲ್ ತಾರಕೇಶ್ವರ ದೇವಸ್ಥಾನದ ಸುಂದರ ಶಿಲ್ಪಕಲಾ ವೈಭವದ ನೋಟ
ಹಾನಗಲ್ ತಾರಕೇಶ್ವರ ದೇವಸ್ಥಾನದ ಸುಂದರ ಶಿಲ್ಪಕಲಾ ವೈಭವದ ನೋಟ   

ಹಾನಗಲ್: ಹಾನಗಲ್ ಐತಿಹಾಸಿಕ ಪ್ರಸಿದ್ಧ ನಾಡು, ಕದಂಬರ ನಾಡು. ಈ ಪರಿಸರದಲ್ಲಿ ಸ್ಥಾಪಿತ ಸುಂದರ ಶಿಲ್ಪಕಲಾ ವೈಭವದ ತಾರಕೇಶ್ವರ ದೇವಸ್ಥಾನ, ಬಿಲ್ಲೇಶ್ವರ ದೇವಸ್ಥಾನ ಮತ್ತು ವೀರಭದ್ರ (ಸಿದ್ಧೇಶ್ವರ) ದೇವಸ್ಥಾನಗಳು ನಮ್ಮ ಪ್ರಾಚೀನ ಶ್ರೀಮಂತಿಕೆಯನ್ನು ಸಾರಿ ಹೇಳುತ್ತಿವೆ.

12ನೇ ಶತಮಾನದಲ್ಲಿ ಹಾನಗಲ್ ಕದಂಬರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಶಾಸನಗಳು ಹೇಳುವ ಕಲಾತ್ಮಕ ಕುಸುರಿಯ ತಾರಕೇಶ್ವರ ದೇವಸ್ಥಾನವು ಪಟ್ಟಣದ ಮದ್ಯಭಾಗದಲ್ಲಿದೆ. ಹೊಯ್ಸಳರ ವೀರ ಬಲ್ಲಾಳನು 1197ರಲ್ಲಿ ಇಲ್ಲಿನ ಆನಿಕೆರೆ ಹತ್ತಿರ ಬೀಡು ಬಿಟ್ಟಿದ್ದನು ಎಂದು ಪ್ರಸ್ತಾಪವಿದೆ. ನಂತರ ಕೆಲಕಾಲ ಹಾನಗಲ್ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು . ಇದೇ ಕಾಲದಲ್ಲಿ ನಿರ್ಮಾಣಗೊಂಡ ತಾರಕೇಶ್ವರ ದೇವಸ್ಥಾನವು ಹೊಯ್ಸಳರ ವಾಸ್ತು ಅಂಶಗಳನ್ನು ಒಳಗೊಂಡಿದೆ.

ಕಪ್ಪು ಮಿಶ್ರಿತ ನೀಲಿ ಛಾಯೆಯ ಕಲ್ಲುಗಳಿಂದ ನಿರ್ಮಿತ ತಾರಕೇಶ್ವರ ದೇವಸ್ಥಾನದಲ್ಲಿ ಸೂಕ್ಷ್ಮ ಕೆತ್ತನೆಯ ಸೊಬಗು ಕಾಣಬಹುದು. ಈ ದೇವಸ್ಥಾನವು ಗರ್ಭಗೃಹ, ಅಂತರಾಳ, ನವರಂಗ, ಮುಖ ಮಂಟಪ, ಮಹಾಮಂಟಪ ಹೊಂದಿದೆ. ತ್ರಿಕೂಟ ಮಾದರಿಯಿಂದ ನಿರ್ಮಾಣಗೊಂಡ ಸಂಕೀರ್ಣ ಮಂದಿರವಾಗಿದೆ ಎಂದು ‘ವಿರಾಟನಗರ ಇತಿಹಾಸ’ ಪುಸ್ತಕದಲ್ಲಿ ಹಾನಗಲ್‌ನ ಲೇಖಕ ವಿ.ಜಿ.ಶಾಂತಪೂರಮಠ ಬಣ್ಣಿಸಿದ್ದಾರೆ.

ADVERTISEMENT

ದೇವಾಲಯದ ಗರ್ಭಗೃಹದಲ್ಲಿ ಕದಂಬರ ಪ್ರಾಚೀನ ಲಕ್ಷಣಗಳುಳ್ಳ ಪಾಣಿಪೀಠದ ಮೇಲೆ ಎತ್ತರವಾದ ಶಿವಲಿಂಗವಿದೆ. ನವರಂಗದ ನಾಲ್ಕು ದೇವಕೋಷ್ಠಕದಲ್ಲಿ ಸೂರ್ಯನ ವಿಗ್ರಹ, ನಾರಾಯಣ ಶಿಲ್ಪ, ಬ್ರಹ್ಮನ ವಿಗ್ರಹ, ತ್ರಿಶೂಲ ಹಿಡಿದ ಷಣ್ಮುಖ ವಿಗ್ರಹಗಳಿವೆ. ಈ ದೇವಸ್ಥಾನಕ್ಕೆ 8 ದ್ವಾರಗಳಿವೆ.

ಸಿದ್ದೇಶ್ವರ ದೇವಸ್ಥಾನ

ಈಗಿನ ತೋಟಗಾರಿಕೆ ಇಲಾಖೆಯ ಅಧಿನದಲ್ಲಿರುವ ಫಾರ್ಮ್‌ನಲ್ಲಿ ಪ್ರಾಚೀನ ಕಲ್ಲಿನ ದೇವಸ್ಥಾನವಿದೆ. ಪೂರ್ವಾಭಿಮುಖವಾಗಿರುವ ಈ ದೇವಸ್ಥಾನ ಮೂಲ ಜಿನ ಮಂದಿರವಾಗಿತ್ತು. ಕಾಲಾನಂತರ ಸಿದ್ಧೇಶ್ವರ ದೇವಸ್ಥಾನ ಎಂದು ನಾಮಕರಣವಾಗಿದೆ. ಈಗೀಗ ಈ ದೇವಸ್ಥಾನಕ್ಕೆ ವೀರಭದ್ರ ದೇವಾಲಯ ಎನ್ನಲಾಗುತ್ತಿದೆ.

ಇದು ಕಲ್ಯಾಣ ಚಾಲುಕ್ಯರ ಉತ್ತಮ ಮಾದರಿಯ ದೇವಾಲಯ. ಗರ್ಭಗೃಹ, ಅಂತರಾಳ, ಸಭಾ ಮಂಟಪ ಹೊಂದಿ ಉತ್ತಮ ಸ್ಥಿತಿಯಲ್ಲಿದೆ. 12 ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಆದರೆ ಈ ದೇವಾಲಯವನ್ನು ಯಾರು ಮತ್ತು ಯಾವಾಗ ನಿರ್ಮಾಣ ಮಾಡಿದರು ಎನ್ನುವುದಕ್ಕೆ ಸ್ಪಷ್ಟತೆ ಇಲ್ಲ. 12ನೇ ಶತಮಾನದಲ್ಲಿ ಹಾನಗಲ್ ಪರಿಸರದಲ್ಲಿ ಜೈನ ಧರ್ಮ ಪ್ರಮುಖವಾಗಿದ್ದ ಸಮಯದಲ್ಲಿ ಚಾಲುಕ್ಯ ಶೈಲಿಯಲ್ಲಿ ಈ ದೇವಸ್ಥಾನ ನಿರ್ಮಾಣವಾಗಿತ್ತು ಎಂದು ಇತಿಹಾಸಕಾರ ಶಾಂತಪೂರಮಠ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಸುಂದರ ಕಲ್ಲಿನ ಮಂಟಪ 

ತಾರಕೇಶ್ವರ ದೇವಸ್ಥಾನದಿಂದ ಬಿಲ್ಲೇಶ್ವರ ದೇವಸ್ಥಾನ ಸುಮಾರು 1 ಕಿ.ಮೀ ಅಂತರದಲ್ಲಿದೆ. ಹಾನಗಲ್–ಹಾವೇರಿ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಸುಂದರ ಕಲ್ಲಿನ ಮಂಟಪ ಆಕರ್ಷಿಸುತ್ತದೆ. ಈ ದೇವಸ್ಥಾನವು ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿದೆ. ದೇವಸ್ಥಾನದ ಗರ್ಭಗೃಹ ಮಾತ್ರ ಉಳಿದುಕೊಂಡಿದ್ದು ಹಿಂದೆ ಇದು ವಿಶಾಲ ದೇವಸ್ಥಾನವಾಗಿತ್ತು ಎಂದು ಅಂದಾಜಿಸಬಹುದಾಗಿದೆ. ಕಾಲಾಂತರದಲ್ಲಿ ಮೂಲ ದೇವಸ್ಥಾನ ನಾಶವಾಗಿ ಗರ್ಭಗೃಹ ಮಾತ್ರ ಉಳಿದುಕೊಂಡಿದೆ. ಪ್ರಾಚೀನ ಶಾಸನಗಳ ಪ್ರಕಾರ ಈ ದೇವಸ್ಥಾವು 12ನೇ ಶತಮಾಣದಲ್ಲಿ ನಿರ್ಮಾಣಗೊಂಡಿದೆ. ಬಿಲ್ಲು ವಿದ್ಯೆಯಲ್ಲಿ ನೈಪುಣ್ಯ ಹೊಂದಿದ್ದ ಬಿಲ್ಲುಗಾರರು ಬಾಣದಿಂದ ಯುದ್ಧದಲ್ಲಿ ಕಾದಾಡುವ ಬಿಲ್ಲಾಳುಗಳು ತಮ್ಮ ಸಮಾಜ ಸಂಘಟನೆಯ ದೃಷ್ಠಿಯಿಂದ ಬಿಲ್ಲೇಶ್ವರ ದೇವಸ್ಥಾನ ನಿರ್ಮಿಸಿದ್ದರು ಎಂದು ಶಾಸನದಲ್ಲಿ ಉಲ್ಲೇಖಿವಿದೆ. ಬಿಲ್ಲೇಶ್ವರ ಬಿಲ್ಲುಗಾರರ ಆರಾಧ್ಯ ದೈವವಾಗಿ ಪ್ರಸಿದ್ಧನಾಗಿದ್ದನು.

ಹಾನಗಲ್ ಪಟ್ಟಣದ ಹೊರಭಾಗದಲ್ಲಿರುವ ಬಿಲ್ಲೇಶ್ವರ ದೇವಸ್ಥಾನ
ಹಾನಗಲ್ ತೋಟಗಾರಿಕೆ ಇಲಾಖೆ ಫಾರ್ಮ್‌ನಲ್ಲಿರುವ ಪ್ರಾಚೀನ ಸಿದ್ಧೇಶ್ವರ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.