ಹಾವೇರಿ: ‘ಕನ್ನಡ ನಾಡು ಆಧ್ಯಾತ್ಮಿಕ ಸಂಪತ್ತಿನ ಆಗರ. ಇಲ್ಲಿ ಹಲವಾರು ಸಂತ ಮಹಾತ್ಮರು ತಮ್ಮ ಜೀವನವನ್ನೇ ಆತ್ಮಕಲ್ಯಾಣ ಮತ್ತು ಸಮಾಜ ಕಲ್ಯಾಣಕ್ಕೆ ಮುಡಿಪಾಗಿಟ್ಟಿದ್ದಾರೆ. ಅಂತಹ ಮಹಾಮಹಿಮರ ಕೃಪೆಗೆ ಪಾತ್ರನಾದವನು ಜೀವನದಲ್ಲಿ ಉನ್ನತ ಸಾಧನೆ ಮಾಡುತ್ತಾನೆ’ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಾನುಭವದಲ್ಲಿ ರಾಜಯೋಗಿ ಶಿವಬಸವ ಸೇವಾ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಹಾನಗಲ್‌ನ ಕುಮಾರ ಸ್ವಾಮೀಜಿ 156ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸೇವೆಯಲ್ಲಿ ಜನರ ನಿರೀಕ್ಷೆಗಳು ಬಹಳಷ್ಟು ಇರುತ್ತವೆ. ಅಂತಹ ನಿರೀಕ್ಷೆಗಳನ್ನು ಸಾಕಾರಗೊಳಿಸಲು ನಮಗೆ ಒಂದು ಅವಕಾಶ ಸಿಕ್ಕಿರುತ್ತದೆ. ಸಿಕ್ಕಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಜನರ ಪ್ರೀತಿ ವಿಶ್ವಾಸವನ್ನು ಗಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಸಮಾಜೋದ್ಧಾರವೇ ಜೀವನದ ಪರಮ ಗುರಿ ಎಂದು ಬದುಕಿದ ಹಾನಗಲ್ಲ ಕುಮಾರ ಸ್ವಾಮಿಗಳು ಸ್ವಾಮಿ ಪರಂಪರೆಗೆ ಆದರ್ಶವಾಗಿ ಬದುಕಿದವರು. ಅಂತಹವರ ಆದರ್ಶ ಜೀವನ ನಮಗೆಲ್ಲಾ ದಾರಿದೀಪವಾಗಿದೆ. ಅವರ ಹಾದಿಯಲ್ಲಿಯೇ ಬದುಕಿದವರು ಲಿಂ. ಶಿವಲಿಂಗ ಸ್ವಾಮಿಗಳು ಎಂದು ಹೇಳಿದರು.
ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಇಬ್ಬರು ಶಾಸಕರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಹಾನಗಲ್ಲ ಲಿಂ. ಕುಮಾರ ಸ್ವಾಮಿಗಳ ಭಾವಚಿತ್ರದ ಮೆರವಣಿಗೆಯು ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಹುಕ್ಕೇರಿಮಠದ ವರೆಗೆ ಸಕಲ ವಾದ್ಯಗಳೊಂದಿಗೆ ನೇರವೇರಿತು.
ಮೆರವಣಿಗೆಯಲ್ಲಿ ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹರಸೂರು ಬಣ್ಣದಮಠದ ಅಭಿನವ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರವಚನಕಾರ ಶಿವಮೂರ್ತಿಸ್ವಾಮಿ ಹಿರೇಮಠ, ಶಿವಬಸಪ್ಪ ಮುಷ್ಠಿ, ಜಗದೀಶ ತುಪ್ಪದ, ತಮ್ಮಣ್ಣ ಮುದ್ದಿ, ಶಿವಣ್ಣ ಶಿರೂರ, ನಾಗಪ್ಪ ಮುರನಾಳ, ಕಾಂತೇಶ ತಳವಾರ, ಶಿವು ಬೆಳವಿಗಿ, ಶಿವಯೋಗೆಪ್ಪ ಅರಣಿ, ಚಂಪಾ ಹುಣಸಿಕಟ್ಟಿ, ಶಿವಲಿಂಗಯ್ಯ ಮಠಪತಿ, ಸಿಂದಗಿಮಠದ ಸಾಧಕವಟುಗಳು ಭಾಗವಹಿದ್ದರು.
ಶಿವಕುಮಾರ ಹಡಗಲಿ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ನಿರೂಪಿಸಿದರು. ಎಸ್.ಎನ್.ಮಳೆಪ್ಪನವರ ವಂದಿಸಿದರು.
‘ಕನ್ನಡನಾಡಿನ ಮಠಮಾನ್ಯಗಳಲ್ಲಿ ಇಂದು ಅನ್ನ ಅರಿವು ಆಶ್ರಯ ಸಿಗುತ್ತಿದ್ದರೆ ಅದಕ್ಕೆ ಹಾನಗಲ್ಲಿನ ಲಿಂ.ಕುಮಾರ ಸ್ವಾಮಿಗಳ ಕತೃತ್ವ ಶಕ್ತಿಯೇ ಕಾರಣ. ಸಮಾಜದಲ್ಲಿನ ಉತ್ತಮ ವ್ಯಕ್ತಿಗಳನ್ನು ಗೌರವಿಸುವುದು ಶ್ರೇಷ್ಠ ಕಾರ್ಯವೆಂದು ಅವರು ಭಾವಿಸಿದ್ದರು. ಅದಕ್ಕಾಗಿಯೇ ಜನಪ್ರತಿನಿಧಿಗಳನ್ನು ಸನ್ಮಾನಿಸಿ ಅವರು ಹೆಚ್ಚಿನ ಸೇವೆ ಸಲ್ಲಿಸಲು ಶ್ರೀಮಠದ ಸದಾ ಪ್ರೋತ್ಸಾಹಿಸುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ಗೌರಿಮಠದ ಶಿವಯೋಗಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವ್ಯಕ್ತಿಯ ನಿಜವಾದ ಗುಣ ನೋಡಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಮಾತಿದೆ. ಆದರೆ ಲಿಂ. ಕುಮಾರ ಸ್ವಾಮೀಜಿ ಶಿವಯೋಗ ಮಂದಿರ ಸ್ಥಾಪಿಸಿದರೂ ಅಧಿಕಾರ ವಹಿಸದೇ ಬೇರೆಯವರಿಗೆ ಅಧಿಕಾರ ನೀಡಿ ಮಾದರಿಯಾಗಿದ್ದರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.