ಹಾನಗಲ್: ‘ವರದಾ ನದಿ ನೀರು ಬಳಸಿಕೊಂಡು ಕೂಸನೂರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಇದರಿಂದ ತಾಲ್ಲೂಕಿನ 30 ಸಾವಿರ ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಸಿಗುತ್ತದೆ’ ಎಂದು ಒತ್ತಾಯಿಸಿ 20 ಗ್ರಾಮಗಳ ರೈತರು ತಾಲ್ಲೂಕಿನ ಕೂಸನೂರ ಗ್ರಾಮದಲ್ಲಿ ಭಾನುವಾರ ಸಂಘಟನಾ ಸಭೆ ಆಯೋಜಿಸಿದ್ದರು.
‘ಕೂಸನೂರು ಏತ ನೀರಾವರಿ ಯೋಜನೆ ಜಾರಿಯಿಂದ 20 ಗ್ರಾಮಗಳ ರೈತರ ಬದುಕು ಹಸನಾಗುತ್ತದೆ. ಕೆರೆ ತುಂಬಿಸುವ ವ್ಯವಸ್ಥೆಯಿಂದ ಅಂತರ್ಜಲವೂ ವೃದ್ಧಿಗೊಂಡು ಬೇಸಿಗೆಯಲ್ಲಿಯೂ ಕೊಳವೆ ಬಾವಿಗಳ ಮೂಲಕ ನೀರಾವರಿ ಸಾಧ್ಯ. ಕೃಷಿಕರ ಬದುಕು ಹಸನು ಮಾಡುವ ದೂರದೃಷ್ಟಿಯ ಈ ಯೋಜನೆ ಸಾಫಲ್ಯಕ್ಕೆ ಎಲ್ಲ ಜನಪ್ರತಿನಿಧಿಗಳೂ ಪಕ್ಷಾತೀತವಾಗಿ ಬೆಂಬಲ ನೀಡಬೇಕು’ ಎಂದು ಗ್ರಾಮಸ್ಥರು ಕೋರಿದರು.
‘ಬಸಾಪುರ ಏತ ನೀರಾವರಿ, ನಮ್ಮ ನೀರಾವರಿ ಬೇಡಿಕೆ ಈಡೇರಿಸಲು ಅಸಮರ್ಥವಾಗಿದೆ. ಕಳೆದ ವರ್ಷ ಕಾರ್ಯಾರಂಭ ಮಾಡದೇ ಸಾವಿರಾರು ಎಕರೆ ಕೃಷಿ ಭೂಮಿ ಬರಡಾಗಿದೆ. ರೈತ ಸಾಲಕ್ಕೆ ಸಿಕ್ಕು ನಲುಗಿದ್ದಾನೆ. ಹೊಸ ಕೂಸನೂರು ಏತ ನೀರಾವರಿ ಯೋಜನೆಯಿಂದ ನೀರು ಪೋಲಾಗದೆ, 20 ಹಳ್ಳಿಗಳ ಕೃಷಿ ಭೂಮಿಗೆ ನೀರು ಸಿಗಲಿದೆ. ಈ ನೀರಾವರಿಗೆ ಸರ್ಕಾರ ಮಂಜೂರಿ ನೀಡಿ ಕಾಮಗಾರಿ ಆರಂಭಿಸಬೇಕು‘ ಎಂದು ಗ್ರಾಮಸ್ಥರು ಒತ್ತಾಯಿಸಿದರು.
‘ಸದ್ಯದ ನೀರಾವರಿ ಯೋಜನೆಗಳು ಶಿಥಿಲಗೊಂಡಿವೆ. ಹಳೆಯ ತಂತ್ರಜ್ಞಾನದ ಈ ಯೋಜನೆಗಳಿಂದ ಕೃಷಿಗೆ ನೀರೊದಗಿಸಲು ಸಾಧ್ಯವಿಲ್ಲ. ಭತ್ತ, ಗೋವಿನಜೋಳ, ಅಡಿಕೆ, ಶುಂಠಿ, ಹತ್ತಿ, ಕಬ್ಬು, ಮೆಣಸಿನಕಾಯಿ, ತರಕಾರಿ ಸೇರಿದಂತೆ ವಿವಿಧ ಕೃಷಿ ತೋಟಗಾರಿಕೆ ಬೆಳೆಗಳ ಕ್ಷೇತ್ರ ಇದಾಗಿದ್ದು, ನೀರು ಕೊಟ್ಟರೆ ಮಾತ್ರ ರೈತರ ಬದುಕು ಉಳಿಯಬಲ್ಲದು’ ಎಂದು ಗ್ರಾಮಸ್ಥರು ಹೇಳಿದರು.
ಮುಖಂಡರಾದ ರಾಜಶೇಖರ ಬೆಟಗೇರಿ, ಬಸವರಾಜ ಹಾದಿಮನಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ನಿಜಲಿಂಗಪ್ಪ ಮುದಿಯಪ್ಪನವರ, ನಿಂಗಪ್ಪ ಕೊಪ್ಪದ, ಈಶ್ವರ ದೇಸಾಯಿ, ಪ್ರಕಾಶ ಬಣಕಾರ, ಡಾ. ಸುನಿಲ ಹಿರೇಮಠ, ಕರಿಯಪ್ಪ ದಿಬ್ಬಣ್ಣನವರ, ಮಲ್ಲೇಶಪ್ಪ ಹಾಲಮ್ಮನವರ, ಸಂಗನಗೌಡ್ರ ಮಲ್ಲನಗೌಡ್ರ, ಅಜ್ಜಪ್ಪ ಶಿರಳ್ಳಿ, ಮಹಾಂತೇಶ ಅಮ್ರದ, ಬಸವರಾಜ ಪೂಜಾರ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.