ADVERTISEMENT

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 2:37 IST
Last Updated 2 ನವೆಂಬರ್ 2021, 2:37 IST
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ   

ಹಾವೇರಿ: ಬಿಜೆಪಿ–ಕಾಂಗ್ರೆಸ್‌ ನಡುವಿನ ತೀವ್ರ ಜಿದ್ದಾಜಿದ್ದಿ ಕಣವಾದ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬೆಳಿಗ್ಗೆ 8ಕ್ಕೆ ಆರಂಭಗೊಂಡಿತು.

ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನರಾದ ಹಿನ್ನೆಲೆಯಲ್ಲಿ ಹಾನಗಲ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ. ಈಗ ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ, ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಸೇರಿದಂತೆ 13 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ.

ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಯಿತು. ಬೆಳಿಗ್ಗೆ 7.45ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭಗೊಂಡಿತು. ನಂತರ ಬೆಳಿಗ್ಗೆ 8 ಗಂಟೆಗೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯ ಶುರುವಾಯಿತು.

ADVERTISEMENT

ಅಂಚೆ ಮತದಾನ ಎಣಿಕೆಗೆ ಒಂದು ಕೊಠಡಿ ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತ ಎಣಿಕೆಗೆ ಎರಡು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಎಣಿಕೆ ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ.

ಶೇ 83.76ರಷ್ಟು ಮತ ಅಕ್ಟೋಬರ್ 30ರಂದು ನಡೆದ ಮತದಾನದಲ್ಲಿ ಒಟ್ಟಾರೆ 2,04,481 ಮತದಾರರ ಪೈಕಿ 1,71,264 ಜನರು ಮತ ಚಲಾಯಿಸಿದ್ದಾರೆ. ಶೇ 83.76ರಷ್ಟು ಮತ ಚಲಾವಣೆಯಾಗಿದೆ. 463 ಅಂಚೆ ಮತ ಚಲಾವಣೆ ಹಾಗೂ 12 ಸೇವಾ ಮತಗಳು ಚಲಾವಣೆಯಾಗಿವೆ. 263 ಮತಗಟ್ಟೆಗಳ ಪೈಕಿ ಗಡಿಯಂಕನಹಳ್ಳಿಯ 140ರ ಮತಗಟ್ಟೆ ಸಂಖ್ಯೆಯಲ್ಲಿ ಅತಿ ಹೆಚ್ಚು ಶೇ 95.11ರಷ್ಟು ಮತದಾನವಾಗಿದೆ ಹಾಗೂ ಹಾನಗಲ್‌ ನಗರದ 103ರ ಮತಗಟ್ಟೆ ಸಂಖ್ಯೆಯಲ್ಲಿ ಶೇ 66.61ರಷ್ಟು ಕಡಿಮೆ ಮತದಾನವಾಗಿದೆ.

ಎರಡು ಎಣಿಕೆ ಕೊಠಡಿ

ಮತ ಎಣಿಕೆಗೆ 2 ಕೊಠಡಿಗಳನ್ನು ಮೀಸಲಿಡಲಾಗಿದೆ. ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್‌ ಎಣಿಕೆ ಸಲುವಾಗಿ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್ ಸೇರಿ ಒಟ್ಟು 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ತಲಾ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಎಣಿಕೆ ಮೇಲ್ವಿಚಾರಕ ಒಬ್ಬರು ಎಣಿಕೆ ಸಹಾಯಕರ ನೇಮಕ ಮಾಡಲಾಗಿದೆ.

ಒಟ್ಟು 14 ಟೇಬಲ್‍ಗಳಲ್ಲಿ 18 ಪೂರ್ಣ ರೌಂಡ್ ಮತ್ತು 19ನೇ ರೌಂಡ್‍ನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಅಂಚೆ ಮತ ಪತ್ರ ಹಾಗೂ ETPBS ಅಂಚೆ ಮತ ಪತ್ರಗಳ ಎಣಿಕೆ ಕಾರ್ಯವು ಚುನಾವಣಾಧಿಕಾರಿಗಳ ಸಮಕ್ಷಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.