ADVERTISEMENT

ಹಾವೇರಿ | ನಿಲ್ಲದ ಮಳೆ: ಅಡಿಕೆ ಒಣಗಿಸಲು ಅಲೆದಾಟ

ಅಡಿಕೆ ಹಾಳಾಗುವ ಭೀತಿ; ಕಾಗಿನೆಲೆ– ನರೇಗಲ್‌ನ ಖೇಣಿ ವ್ಯಾಪಾರಿಗಳ ಸಂಕಷ್ಟ

ಸಂತೋಷ ಜಿಗಳಿಕೊಪ್ಪ
Published 25 ಅಕ್ಟೋಬರ್ 2024, 7:16 IST
Last Updated 25 ಅಕ್ಟೋಬರ್ 2024, 7:16 IST
ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಒಣಗಲು ಹಾಕಿರುವ ಅಡಿಕೆಯನ್ನು ಕಾರ್ಮಿಕರು ಸಮಗೊಳಿಸಿದರು - ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಒಣಗಲು ಹಾಕಿರುವ ಅಡಿಕೆಯನ್ನು ಕಾರ್ಮಿಕರು ಸಮಗೊಳಿಸಿದರು - ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ   

ಹಾವೇರಿ: ಜಿಲ್ಲೆಯಾದ್ಯಂತ ಬಿಡುವು ನೀಡುತ್ತಲೇ ಜೋರು ಮಳೆ ಸುರಿಯುತ್ತಿದ್ದು, ಬಿಸಿಲಿಗಿಂತ ಮೋಡ ಕವಿದ ವಾತಾವರಣವೇ ಹೆಚ್ಚಾಗಿದೆ. ನಿರಂತರ ಮಳೆಯಿಂದಾಗಿ ಅಡಿಕೆ ಹಾಳಾಗುತ್ತಿದ್ದು, ಅವುಗಳನ್ನು ಒಣಗಿಸಲು ಖೇಣಿ ವ್ಯಾಪಾರಿಗಳು ಊರಿನಿಂದ ಊರಿಗೆ ಅಲೆದಾಡುತ್ತಿದ್ದಾರೆ.

ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಹಾಗೂ ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಬಹುತೇಕ ಕುಟುಂಬಗಳು, ಅಡಿಕೆ ಖೇಣಿ ನಂಬಿ ಜೀವನ ನಡೆಸುತ್ತಿವೆ. ಪ್ರತಿ ವರ್ಷವೂ ಅಡಿಕೆ ಫಸಲು ಕೈಗೆ ಬಂದ ಸಂದರ್ಭದಲ್ಲಿ, ಖೇಣಿ ವ್ಯಾಪಾರಿಗಳು ರೈತರಿಗೆ ಹಣ ಕೊಟ್ಟು ಟನ್‌ಗಟ್ಟಲೇ ಅಡಿಕೆ ಖರೀದಿಸುತ್ತಿದ್ದಾರೆ.

ರೈತರಿಂದ ಖರೀದಿಸಿದ ಅಡಿಕೆಯನ್ನು ವ್ಯಾಪಾರಿಗಳು ತಮ್ಮೂರಿಗೆ ತಂದು ಖೇಣಿಯಲ್ಲಿ ಸಂಸ್ಕರಣೆ ಮಾಡುತ್ತಿದ್ದಾರೆ. ಸಂಸ್ಕರಣೆ ಮಾಡಿದ ಅಡಿಕೆಯನ್ನು ತಮ್ಮೂರಿನಲ್ಲಿರುವ ಬಯಲು ಜಾಗ ಹಾಗೂ ಮೈದಾನದಲ್ಲಿ ಒಣಗಲು ಹಾಕುತ್ತಿದ್ದಾರೆ. ಒಣಗಿದ ನಂತರವೇ ಅಡಿಕೆಯನ್ನು ಮಾರುಕಟ್ಟೆಗೆ ಸಾಗಿಸಿ ಮಾರುತ್ತಿದ್ದಾರೆ. ಆದರೆ, ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ ಒಣಗಿಸಲು ಸಾಧ್ಯವಾಗದೇ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ADVERTISEMENT

ನಿರಂತರ ಮಳೆಯಿಂದಾಗಿ ತೊಯ್ಯುತ್ತಿರುವ ಅಡಿಕೆ, ಫಂಗಸ್ ಬಂದು ಕ್ರಮೇಣ ಕೊಳೆಯುತ್ತಿದೆ. ಅಡಿಕೆಯನ್ನು ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿರುವ ವ್ಯಾಪಾರಿಗಳು, ಬಿಸಿಲು ಹೆಚ್ಚಿರುವ ಪ್ರದೇಶಕ್ಕೆ ವಲಸೆ ಹೊರಟಿದ್ದಾರೆ. ಸುರಕ್ಷಿತ ಸ್ಥಳಗಳಲ್ಲಿ ಅಡಿಕೆಯನ್ನು ಒಣಗಲು ಹಾಕುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ, ರಾಣೆಬೆನ್ನೂರು ಹಾಗೂ ಧಾರವಾಡ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ–ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಡಿಕೆ ಒಣಗಲು ಹಾಕಿರುವ ದೃಶ್ಯಗಳು ಕಂಡುಬರುತ್ತಿವೆ.

ಮಲೆನಾಡು ಸೆರಗಿನಲ್ಲಿರುವ ಕಾಗಿನೆಲೆ ಹಾಗೂ ನರೇಗಲ್ ಭಾಗದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಡಿಕೆ ಒಣಗಿಸುವ ಜಾಗದಲ್ಲೂ ನೀರು ನಿಂತುಕೊಂಡು ಸಮಸ್ಯೆಯಾಗುತ್ತಿದೆ. ಇದೇ ಕಾರಣಕ್ಕೆ ಕಾಗಿನೆಲೆ ಹಾಗೂ ನರೇಗಲ್ ಗ್ರಾಮಗಳ ಹಲವರು, ವಾಹನಗಳಲ್ಲಿ ಅಡಿಕೆ ತುಂಬಿಕೊಂಡು ಬೇರೆ ಊರಿಗೆ ಹೊರಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಬಯಲು ಜಾಗ ಹಾಗೂ ಮೈದಾನಗಳಲ್ಲಿ ಅಡಿಕೆಯನ್ನು ಒಣಗಲು ಹಾಕುತ್ತಿದ್ದಾರೆ. ದಿನದ 24 ಗಂಟೆಯೂ ಕಾವಲು ಕಾಯುತ್ತಿದ್ದಾರೆ.

‘ಅಡಿಕೆ ಖೇಣಿಯೇ ನಮಗೆ ಜೀವನಾಧಾರ. ರೈತರಿಗೆ ಲಕ್ಷಾಂತರ ರೂಪಾಯಿ ನೀಡಿ ಅಡಿಕೆ ಖರೀದಿಸಿದ್ದೇವೆ. ಖೇಣಿಯಲ್ಲಿ ಅಡಿಕೆ ಸಂಸ್ಕರಣೆ ಮಾಡಿದ್ದೇವೆ. ಊರಿನಲ್ಲಿ ಒಣಗಲು ಹಾಕಿದ್ದ ಅಡಿಕೆ, ಮಳೆ ನೀರಿನಿಂದ ತೊಯ್ದು ಹಾಳಾಗುವ ಹಂತಕ್ಕೆ ತಲುಪಿದೆ. ಈಗ ಅಡಿಕೆಯನ್ನು ಚೆನ್ನಾಗಿ ಒಣಗಿಸಬೇಕು. ಅದಕ್ಕಾಗಿ ಊರು ಬಿಟ್ಟು ಬಂದಿದ್ದೇವೆ’ ಎಂದು ಕಾಗಿನೆಲೆ ಗ್ರಾಮದ ಖೇಣಿ ಕಾರ್ಮಿಕ ಮೊಹಮ್ಮದ್ ಗೌಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಊರಿನಲ್ಲಿ ಶುರುವಾದ ಮಳೆ, ಇದುವರೆಗೂ ಬಿಟ್ಟಿಲ್ಲ. ಬಿಡುವು ನೀಡುತ್ತಲೇ ಜೋರು ಮಳೆ ಸುರಿಯುತ್ತಿದೆ. ಹೀಗಾಗಿ, ಅಡಿಕೆ ಒಣಗಿಸಲು ಸಾಧ್ಯವಾಗುತ್ತಿಲ್ಲ. ಒಣಗಲು ಹಾಕುವ ಅಡಿಕೆ ಸಹ ಮಳೆ ನೀರಿನಿಂದ ತೊಯ್ಯುತ್ತಿದೆ. ಮಳೆ ಕಡಿಮೆಯಾಗದಿದ್ದರಿಂದ, ನಾವೇ ಅಡಿಕೆಯನ್ನು ಸುರಕ್ಷಿತ ಸ್ಥಳಕ್ಕೆ ತಂದು ಒಣಗಲು ಹಾಕಿದ್ದೇವೆ’ ಎಂದರು.

ಅಡಿಕೆ ವ್ಯಾಪಾರಿ ರಜಾಕ್, ‘ಅಡಿಕೆ ಫಸಲು ಬರುವ ಸಮಯವಿದು. ಕಾಗಿನೆಲೆ ಹಾಗೂ ನರೇಗಲ್ ಗ್ರಾಮದಲ್ಲಿರುವ ವ್ಯಾಪಾರಿಗಳು, ಅಡಿಕೆ ಮೇಲೆ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡುತ್ತಾರೆ. ಅಡಿಕೆ ಸಂಸ್ಕರಣೆ ಮಾಡಿ, ಮಾರಿದ ನಂತರವೇ ಅವರಿಗೆ ಹಣ ವಾಪಸು ಬರುತ್ತದೆ. ಸಂಸ್ಕರಣೆ ಹಾಗೂ ಇತರೆ ಖರ್ಚು ಕಳೆದ ನಂತರವೇ ವ್ಯಾಪಾರಿಗಳು ಲಾಭ ಸಿಗುತ್ತದೆ’ ಎಂದರು.

‘ನಿರಂತರ ಮಳೆಯಿಂದಾಗಿ ಅಡಿಕೆ, ಬೂಸ್ ಬರುತ್ತಿದೆ. ಇಂಥ ಅಡಿಕೆ ಕ್ರಮೇಣ ಕೊಳೆಯುತ್ತಿದೆ. ತೂಕವೂ ಕಡಿಮೆಯಾಗುತ್ತದೆ. ಅಡಿಕೆ ಹಾಳಾದರೆ, ಲಕ್ಷಾಂತರ ರೂಪಾಯಿ ನಷ್ಟವಾಗುವ ಭೀತಿ ಶುರುವಾಗಿದೆ’ ಎಂದು ಅಳಲು ತೋಡಿಕೊಂಡರು.

ಖೇಣಿ ನಂಬಿರುವ ಕಾರ್ಮಿಕರು: ಕೆಲಸದ ಕೊರತೆ ಕಾಗಿನೆಲೆ ಹಾಗೂ ನರೇಗಲ್‌ನಲ್ಲಿರುವ ಅಡಿಕೆ ಖೇಣಿ ನಂಬಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಅಡಿಕೆ ಸುಲಿಯುವ ಕೆಲಸದಿಂದ ಹಿಡಿದು ಅಡಿಕೆ ಒಣಗಿಸುವ ಕೆಲಸದಲ್ಲಿ ಕಾರ್ಮಿಕರು ತೊಡಿಗಿಸಿಕೊಂಡಿದ್ದಾರೆ. ಅಡಿಕೆ ಫಸಲು ಇರುವ ಸಮಯದಲ್ಲಿ ಕಾರ್ಮಿಕರು ಕೆಲಸಗಳು ಸಿಗುತ್ತಿವೆ. ಈಗ ಮಳೆ ಹೆಚ್ಚಿರುವುದರಿಂದ ಅಡಿಕೆ ಒಣಗಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಹಲವು ವ್ಯಾಪಾರಿಗಳು ರೈತರಿಂದ ಅಡಿಕೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ರೈತರಿಂದ ಖರೀದಿಸಿರುವ ಅಡಿಕೆಗಳನ್ನು ಮಾತ್ರ ಒಣಗಿಸಿ ಮಾರುಕಟ್ಟೆಗೆ ಸಾಗಿಸಲು ವ್ಯಾಪಾರಿಗಳು ಪ್ರಯತ್ನಿಸುತ್ತಿದ್ದಾರೆ. ಹೊಸ ಅಡಿಕೆ ಖರೀದಿ ಇಲ್ಲದಿದ್ದರಿಂದ ಹಲವು ಕಾರ್ಮಿಕರಿಗೆ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.