ಹಾವೇರಿ: ಇಲ್ಲಿಯ ಯತ್ತಿನಹಳ್ಳಿ ಹೊಸ ಬಡಾವಣೆಯ ರಸ್ತೆ ಬದಿಯ ಕಾಲುವೆಯಲ್ಲಿ 10 ಮತಪೆಟ್ಟಿಗೆಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಿ ವ್ಯಾಪಾರಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಗುತ್ತಲ ರಸ್ತೆಯ ವಿಜಯನಗರ ಬಡಾವಣೆಯ ಸಂತೋಷ ಮಾಳಗಿ, ಯತ್ತಿನಹಳ್ಳಿಯ ಗಣೇಶ ಹರಿಜನ, ಕೃಷ್ಣ ಹರಿಜನ ಪುರದ ಓಣಿಯ ಮುತ್ತಪ್ಪ ದೇವಿಹೂಸೂರು ಮತ್ತು ಸುಭಾಷ್ ಸರ್ಕಲ್ ಮಕಾನಗಲ್ಲಿಯ ಮಹಮ್ಮದ್ ಜಾವೀದ್ ಮಕಾನದಾರ ಬಂಧಿತರು. 17 ಮತಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತಪೆಟ್ಟಿಗೆ ಕಳವು ಕುರಿತು ತಹಶೀಲ್ದಾರ್ ಕಚೇರಿ ಅಧಿಕಾರಿ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಬಾರಿ ಕಳವು
‘ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಈ ಆರೋಪಿಗಳಲ್ಲಿ ಬಹುತೇಕರು ಮದ್ಯವ್ಯಸನಿಗಳು. ಗೋದಾಮಿನಲ್ಲಿ ಕಬ್ಬಿಣದ ಪೆಟ್ಟಿಗೆಗಳನ್ನು ಕಳವು ಮಾಡಿ, ಗುಜರಿಗೆ ಮಾರಲು ಸಂಚು ರೂಪಿಸಿದ್ದರು. ಆದರೆ, ಅವು ಮತಪೆಟ್ಟಿಗೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಗೋದಾಮಿನ ಬಾಗಿಲು ಮೀಟಿ ಎರಡು ಬಾರಿ ಒಳಗೆ ನುಗ್ಗಿದ್ದ ಆರೋಪಿಗಳು, 17 ಮತಪೆಟ್ಟಿಗೆಗಳನ್ನು ಕದ್ದು, ಗುಜರಿ ವ್ಯಾಪಾರಿ ಮಹಮ್ಮದ್ ಜಾವೀದ್ ಮಕಾನದಾರ ಬಳಿ ಒಯ್ದಿದ್ದರು. ತಲಾ ಒಂದು ಮತಪೆಟ್ಟಿಗೆಯನ್ನು ₹ 200ಕ್ಕೆ ಮಾರಾಟ ಮಾಡಿ ₹ 3,400 ಪಡೆದಿದ್ದರು. ಅದೇ ಹಣದಲ್ಲಿ ಮದ್ಯ ಕುಡಿದಿದ್ದರು’ ಎಂದು ಅವರು ತಿಳಿಸಿದ್ದಾರೆ.
ಮೂರನೇ ಬಾರಿ ಖರೀದಿಗೆ ನಿರಾಕರಣೆ
‘ಮೂರನೇ ಬಾರಿ ಗೋದಾಮಿನೊಳಗೆ ಈಚೆಗೆ ನುಗ್ಗಿದ್ದ ಆರೋಪಿಗಳು, 10 ಮತಪೆಟ್ಟಿಗೆಗಳನ್ನು ಕದ್ದು ಗುಜರಿ ವ್ಯಾಪಾರಿ ಬಳಿ ಒಯ್ದಿದ್ದರು. ಆದರೆ, ಆತ ಮತಪೆಟ್ಟಿಗೆ ಖರೀದಿಸಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಆರೋಪಿಗಳು, ರಸ್ತೆ ಬದಿಯ ಕಾಲುವೆಯಲ್ಲಿ ಎಸೆದು ಹೋಗಿದ್ದರು. ಶಿಗ್ಗಾವಿ ಉಪಚುನಾವಣೆಯ ಮತದಾನ ನಡೆದ ಮರುದಿನವೇ ಮತಪೆಟ್ಟಿಗೆಗಳು ಪತ್ತೆಯಾಗಿದ್ದವು. ಇನ್‌ಸ್ಪೆಕ್ಟರ್ ಮೋತಿಲಾಲ್ ಪವಾರ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿತು’ ಎಂದು ಅವರು ತಿಳಿಸಿದ್ದಾರೆ.
ಗ್ರಾ.ಪಂ. ಚುನಾವಣೆಗೆ ಬಳಸಿದ್ದ ಮತಪೆಟ್ಟಿಗೆಗಳನ್ನು ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
–ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ ಹಾವೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.