ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಾರ್ಟಿ. ಶೇ 40ರಷ್ಟು ಕಮಿಷನ್ ಆರೋಪ ಬಂದಾಗ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಹಾವನೂರು ಗ್ರಾಮದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸವಣೂರಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಹಣ ಕೊಟ್ಟಿದ್ದು ನಮ್ಮ ಸರ್ಕಾರ. ಶಿಗ್ಗಾವಿ–ಸವಣೂರು ಏತ ನೀರಾವರಿ ಮಾಡಿದ್ದು ನಾನು. ಕನಕದಾಸ ಅರಮನೆ ಅಭಿವೃದ್ಧಿಪಡಿಸಿದ್ದು ನಾನು. ಬಸವರಾಜ ಬೊಮ್ಮಾಯಿ ಅವರ ಕೊಡುಗೆ ಏನು’ ಎಂದು ಪ್ರಶ್ನಿಸಿದರು.
‘ಅಧಿಕಾರ ಬಂದ ಕೂಡಲೇ, ನುಡಿದಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. 2013–2018ರ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದೆ. 14.42 ಲಕ್ಷ ಮನೆ ಕಟ್ಟಿಸಿದ್ದೇನೆ.
ಬೊಮ್ಮಾಯಿ ಅವರು ಒಂದಾದರೂ ಮನೆ ಕಟ್ಟಿಸಿದ್ದಾರಾ? ತೋರಿಸಲಿ’ ಎಂದರು.
‘ಕೋವಿಡ್ ಬಂದಾಗ, ಸತ್ತ ಹೆಣದ ಹೆಸರಿನಲ್ಲಿ ಬಿಜೆಪಿಯವರು ಜನರಿಂದ ಲಂಚ ಪಡೆದರು. ಕರ್ನಾಟಕದ ಇತಿಹಾಸದಲ್ಲಿ ಸತ್ತ ಹೆಣದ ಹೆಸರಿನಲ್ಲಿ ಲಂಚ ಪಡೆದ ನಾಯಕ ಬಸವರಾಜ ಬೊಮ್ಮಾಯಿ’ ಎಂದರು.
‘ಬಸವರಾಜ ಬೊಮ್ಮಾಯಿ ಈಗ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಸತ್ತ ಹೆಣದ ಹೆಸರಿನಲ್ಲಿ ಲಂಚ ಪಡೆದಿದ್ದ ವ್ಯಕ್ತಿಯ ಮಗನನ್ನು ಗೆಲ್ಲಿಸಬೇಕಾ? ಆತನನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕಾದರೆ, ಬೊಮ್ಮಾಯಿ ಮಗನನ್ನು ಸೋಲಿಸಬೇಕು. ಬಿಜೆಪಿಯವರನ್ನು ಯಾರೂ ನಂಬಲ್ಲ. ಬಿಜೆಪಿಯ ಸುಳ್ಳುಗಳಿಗೆ ಪಠಾಣ ಅವರ ಗೆಲುವು ಉತ್ತರವಾಗಬೇಕು’ ಎಂದರು.
‘ಅಜ್ಜ ಮುಖ್ಯಮಂತ್ರಿ. ಅಪ್ಪನೂ ಮುಖ್ಯಮಂತ್ರಿ. ಈಗ ಮಗ ಚುನಾವಣೆಗೆ ನಿಂತಿದ್ದಾರೆ. ನಮ್ಮ ಅಭ್ಯರ್ಥಿ ಪಠಾಣ ಸಾಮಾನ್ಯ ಕಾರ್ಯಕರ್ತ. ಭರತ್ ಬೊಮ್ಮಾಯಿಯನ್ನು ಸೋಲಿಸಿ ಸಾಮಾನ್ಯ ಕಾರ್ಯಕರ್ತನನ್ನ ಗೆಲ್ಲಿಸಬೇಕು’ ಎಂದರು.
‘ಸಿದ್ದರಾಮಯ್ಯ ಹೇಳಿದ್ದು ಹಸಿ ಸುಳ್ಳು: ಚರ್ಚೆಗೆ ಸಿದ್ಧ’
ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಶಿಗ್ಗಾವಿ–ಸವಣೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿ ಸುಳ್ಳು ಹೇಳಿದ್ದಾರೆ. ನಾನು ಮಾಡಿರುವ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕ್ಷೇತ್ರದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ ಅವರು ಮಾಡಿದ ಆರೋಪಗಳಿಗೆ ಸಂಬಂಧಪಟ್ಟಂತೆ ‘ಎಕ್ಸ್’ನಲ್ಲಿ ಪೋಸ್ಟ್ ಪ್ರಕಟಿಸಿರುವ ಬೊಮ್ಮಾಯಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾನು ಖಂಡಿತ ಒಂದು ಮನೆ ಕಟ್ಟಿಲ್ಲ. ನನ್ನ ಕ್ಷೇತ್ರದಲ್ಲಿ ತಲಾ ₹ 5 ಲಕ್ಷ ಮೌಲ್ಯದ 12500 ಮನೆ ಕಟ್ಟಿಸಿದ್ದೇನೆ. ನಿಮ್ಮದೇ ಸರ್ಕಾರದಲ್ಲಿ ದಾಖಲೆ ಇದೆ. ಬೇಕಾದರೆ ನೋಡಿ. ಹಸಿ ಸುಳ್ಳು ಹೇಳುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ’ ಎಂದಿದ್ದಾರೆ. ‘ಕೋವಿಡ್ ಸಂದರ್ಭದಲ್ಲಿ ಜೀವನದ ಹಂಗು ತೊರೆದು ನಮ್ಮ ಸರ್ಕಾರ ಕೆಲಸ ಮಾಡಿದೆ. ಸಕಲ ವ್ಯವಸ್ಥೆ ಮಾಡಿ ಸಾವಿರಾರು ಜನರ ಪ್ರಾಣ ಉಳಿಸಿರುವುದು ಸಾರ್ವಜನಿಕರಿಗೆ ಗೊತ್ತಿರುವ ವಿಚಾರ. ಈ ಯಶಸ್ಸು ಕಂಡು ಅಸೂಯೆಯಿಂದ ರಾಜಕೀಯ ಪ್ರೇರಿತ ಆರೋಪ ಮಾಡುವುದನ್ನು ಬಿಡಿ. ನನ್ನ ಸ್ವಂತ ಮನೆಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಶಿಗ್ಗಾವಿ–ಸವಣೂರು ತಾಲ್ಲೂಕಿನ ಜನರಿಗೆ ಚಿಕಿತ್ಸೆ ಕೊಟ್ಟಿದ್ದನ್ನು ಜನ ಎಂದೂ ಮರೆಯುವುದಿಲ್ಲ’ ಎಂದು ತಿಳಿಸಿದ್ದಾರೆ. ‘ಮುಖ್ಯಮಂತ್ರಿಯಾಗಿ ಜಲಸಂಪನ್ಮೂಲ ಸಚಿವನಾಗಿ ಶಿಗ್ಗಾವಿ ಏತ ನಿರಾವರಿಯನ್ನು 2008ಕ್ಕೆ ಪ್ರಾರಂಭಿಸಿ 2012ರಲ್ಲಿ ಪೂರ್ಣಗೊಳಿಸಿದ್ದೇನೆ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದ್ದರು. ನಿಮ್ಮದೇ ಸರ್ಕಾರ ಸವಣೂರು ಏತ ನೀರಾವರಿ ಪ್ರಾರಂಭ ಮಾಡದೇ ನಿಷ್ಕ್ರಿಯವಾಗಿತ್ತು’ ಎಂದಿದ್ದಾರೆ. ‘ಶಿಕ್ಷಣ ಆರೋಗ್ಯ ರಸ್ತೆ ಗ್ರಾಮೀಣ ಅಭಿವೃದ್ಧಿ ಕೆರೆ ತುಂಬಿಸುವುದು ಮೇಲ್ಸೇತುವೆಗಳ ನಿರ್ಮಾಣ ಎರಡು ಪಾಲಿಟೆಕ್ನಿಕ್ ಎರಡು ಐಟಿಐ ಕಾಲೇಜು ಟೆಕ್ಸ್ ಟೈಲ್ ಪಾರ್ಕ್ ಆಯುರ್ವೇದ ಕಾಲೇಜು ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿಮ್ಮ ಸರ್ಕಾರದ ಬಳಿ ದಾಖಲೆ ಇವೆ. ಇಲ್ಲದಿದ್ದರೆ ಹೇಳಿ ನಿಮಗೆ ದಾಖಲೆ ಕಳುಹಿಸಿ ಕೊಡಲು ಸಿದ್ಧನಿದ್ದೇನೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.