ಹಾವೇರಿ: ಪೋಷಕರಿಲ್ಲದ ಮಕ್ಕಳ ಪಾಲನೆ ಹಾಗೂ ಪೋಷಣೆ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಾಯೋಜಕತ್ವ ಯೋಜನೆಯಡಿ ನೆರವು ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. 2024ರ ಆಗಸ್ಟ್‌ನಿಂದ ಸೆಪ್ಟೆಂಬರ್‌ವರೆಗೆ 398 ಮಕ್ಕಳಿಗೆ ಯೋಜನೆಯಡಿ ಸಹಾಯಧನ ಮಂಜೂರು ಮಾಡಲಾಗಿದೆ.
‘ಯೋಜನೆ ಜಾರಿಯಾದ ದಿನದಿಂದಲೂ ಜನರಿಂದ ಸ್ಪಂದನೆ ಸಿಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. ಆಗಸ್ಟ್ ತಿಂಗಳಿನಿಂದ ಜೂನ್‌ವರೆಗಿನ ಮೊದಲ ಹಂತದಲ್ಲಿ 256 ಮಕ್ಕಳಿಗೆ ಹಾಗೂ ಜುಲೈನಿಂದ ಸೆಪ್ಟೆಂಬರ್‌ವರೆಗೆ 142 ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯಡಿ ಹಣ ಪಾವತಿ ಮಾಡಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ‘ಪ್ರಜಾವಾಣಿ’ಗೆ ತಿಳಿಸಿದರು.
ಏಕ ಪೋಷಕ (ತಂದೆ ಅಥವಾ ತಾಯಿ ಮಾತ್ರ), ಅನಾಥ, ಅನಾರೋಗ್ಯ ಪೀಡಿತ ಹಾಗೂ ಅಸಹಾಯಕ ಗುಂಪಿನ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ ಸುಧಾರಣೆ, ಪಾಲನೆ ಹಾಗೂ ಪೋಷಣೆಗಾಗಿ ಪ್ರತಿ ತಿಂಗಳು ₹4ಸಾವಿರ ಪಾವತಿಸಲಾಗುತ್ತಿದೆ.
ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ವಾತ್ಸಲ್ಯ ಯೋಜನೆ ಜಾರಿಗೊಳಿಸಿತ್ತು. 2012ರಲ್ಲಿ ಕೇಂದ್ರ ಸರ್ಕಾರ ‘ಮಿಷನ್ ವಾತ್ಸಲ್ಯ’ ಅಡಿ ಹೊಸ ಮಾರ್ಗಸೂಚಿ ಹೊರಡಿಸಿ, ಪ್ರಾಯೋಜಕತ್ವ ಯೋಜನೆಯಲ್ಲಿ ತನ್ನ ಪಾಲು ಇರುವುದಾಗಿ ತಿಳಿಸಿದೆ. ಇದರಿಂದಾಗಿ, ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಯೋಗವಿದೆ.
ಅರ್ಜಿ ಸಲ್ಲಿಕೆ ನಂತರ ಪರಿಶೀಲನೆ: ‘ತಂದೆ ಅಥವಾ ತಾಯಿ ಇಲ್ಲದ, ಏಕ ಪೋಷಕ ಮಕ್ಕಳು. ಅನಾಥ, ನಿರ್ಗತಿಕ ಮಕ್ಕಳು, ಭಿಕ್ಷೆ ಬೇಡುತ್ತಿರುವ ಮಕ್ಕಳು, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು, ಬಾಲಮಂದಿರಗಳಿಂದ ನಿರ್ಗಮಿತ ಮಕ್ಕಳು, ಜೈಲು ಶಿಕ್ಷೆಗೆ ಗುರಿಯಾದ ಹಾಗೂ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಪ್ರಾಯೋಜಕತ್ವ ಯೋಜನೆಯಡಿ ನೆರವು ಪಡೆಯಲು ಅರ್ಹರು’ ಎಂದು ಸಂಗಳದ ತಿಳಿಸಿದರು.
‘ಅರ್ಹರು ಹಾಗೂ ಅರ್ಹರಲ್ಲದವರು ಎಲ್ಲರೂ ಇತ್ತೀಚಿನ ದಿನಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸ್ವೀಕರಿಸಿದ ಬಳಿಕ, ಮಕ್ಕಳ ಮನೆಯ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಪೋಷಕರು ಇದ್ದಾರೆಯೇ ? ಜೀವನ ನಡೆಸಲು ಮಕ್ಕಳ ಕಷ್ಟವಾಗುತ್ತಿದೆಯಾ ? ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯ್ಕ: ‘ಅರ್ಜಿ ಸಲ್ಲಿಸಿದ ಮಕ್ಕಳ ಬಗ್ಗೆ ವರದಿ ಸಿದ್ಧಪಡಿಸಿ, ಜಿಲ್ಲಾಧಿಕಾರಿ ನೇತೃತ್ವದ ಅನುಮೋದನಾ ಸಮಿತಿಗೆ ಸಲ್ಲಿಸಲಾಯಿತು. ಸಮಿತಿಯಲ್ಲಿ ಚರ್ಚೆ ನಡೆದ ಬಳಿಕವೇ, ಅರ್ಹ ಮಕ್ಕಳನ್ನು ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಎನ್‌ಜಿಒ ಹಾಗೂ ಇತರರು ಸಮಿತಿಯಲ್ಲಿರುತ್ತಾರೆ’ ಎಂದು ತಿಳಿಸಿದರು.’ ಎಂದು ತಿಳಿಸಿದರು.
‘ಅರ್ಹ ಮಕ್ಕಳಿಗೆ ಪ್ರತಿ ತಿಂಗಳು ₹4 ಸಾವಿರದಂತೆ ಮೂರು ವರ್ಷಗಳವರೆಗೆ ಅಥವಾ 18 ವರ್ಷ ವಯಸ್ಸು ತುಂಬುವವರೆಗೆ ಪಾವತಿ ಮಾಡಲಾಗುತ್ತಿದೆ. ಹಣವನ್ನು ಮಕ್ಕಳ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಅರ್ಹ ಮಕ್ಕಳಿಗೆ ಸಂಪೂರ್ಣ ಪ್ರಮಾಣದಲ್ಲಿ ಹಣ ತಲುಪುತ್ತಿದೆ. ಈ ಹಣದಿಂದ ಮಕ್ಕಳು, ತಮ್ಮ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಖರ್ಚುಗಳನ್ನು ನಿಭಾಯಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.
ಅರ್ಜಿ ಸಲ್ಲಿಕೆ ನಂತರ ಪರಿಶೀಲನೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯ್ಕೆ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೂ ನೆರವು
ಮಕ್ಕಳು ಕುಟುಂಬದ ವಾತಾವರಣದಲ್ಲಿ ಬದುಕಬೇಕು. ಶಿಕ್ಷಣ ವೈದ್ಯಕೀಯ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ಸೇವನೆಗೆ ಹಣಕಾಸಿನ ತೊಂದರೆ ಉಂಟಾಗಬಾರದೆಂದು ಪ್ರಾಯೋಜಕತ್ವ ಯೋಜನೆ ಜಾರಿಗೆ ತರಲಾಗಿದೆನ್ನಪೂರ್ಣ ಸಂಗಳದ ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಮಕ್ಕಳಿಗಾಗಿ ಇರುವ ಯೋಜನೆಗಳು
* ವಿಶೇಷ ಪಾಲನಾ; ಪ್ರತಿ ತಿಂಗಳು ₹1000 ನೀಡಲಾಗುತ್ತಿದೆ.
* ಮುಖ್ಯಮಂತ್ರಿ ಬಾಲಸೇವಾ; ಕೋವಿಡ್ ಸಂದರ್ಭದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು ₹3500 ನೀಡಲಾಗುತ್ತಿದೆ. ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಲ್ಯಾಪ್‌ಟಾಪ್ ವಿತರಣೆ
* ಉಪಕಾರ ಯೋಜನೆ: ಬಾಲ ಮಂದಿರದಿಂದ ನಿರ್ಗಮಿತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲೆಂದು ಪ್ರತಿ ತಿಂಗಳು ₹5000 ಪಾವತಿಸಲಾಗುತ್ತಿದೆ.
* ಪಿ.ಎಂ ಫಾರ್ ಕೇರ್: ಕೋವಿಡ್ ಸಂದರ್ಭದಲ್ಲಿ ತಂದೆ–ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.