ಕೋಣನತಲೆ (ತುಮ್ಮಿನಕಟ್ಟಿ): ಕೃಷಿ ಕಾಯಕದಲ್ಲಿ ವಿಶೇಷ ಆಸಕ್ತಿ ಹಾಗೂ ಅನನ್ಯ ಅನುಭವ ಹೊಂದಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನತಲೆ ಗ್ರಾಮದ ರೈತರು ಸಮಗ್ರ ಕೃಷಿಯಿಂದ ಪ್ರಗತಿ ಸಾಧಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇಲ್ಲಿನ ಕೃಷಿಕರು ಹಲವು ತಳಿಗಳ ಬೀಜೋತ್ಪಾದನೆ ಕೃಷಿಯಲ್ಲಿ ರಾಜ್ಯದ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ, ಬಹುರಾಷ್ಟ್ರೀಯ ಸೀಡ್ಸ್ ಕಂಪನಿಗಳ ಸಹಕಾರ ಪಡೆದು ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ದುಡಿಮೆಯೇ ಇವರ ಮೂಲ ಮಂತ್ರವಾಗಿದೆ. ಶಿಕ್ಷಣ ಹಾಗೂ ಕೃಷಿಗೆ ಪ್ರಥಮ ಪ್ರಾಶಸ್ತ್ಯ ನೀಡಿರುವ ಗ್ರಾಮ ಎಂಬ ಹೆಗ್ಗಳಿಕೆಯಿದೆ.
ಗ್ರಾಮದ ಆರಂಭದಲ್ಲಿ ಬರುವ ಕೋಣನಸರ (ಹಳ್ಳಿ)ದ ತಟದಲ್ಲಿ ಕೋಣನ ‘ರುಂಡ’ ಮಾತ್ರ ಚಿತ್ರಿತವಾಗಿರುವ ಪ್ರಾಚೀನ ಶಿಲೆ ಗ್ರಾಮದ ಐತಿಹಾಸಿಕ ಹಿನ್ನೆಲೆಗೆ ಪುಷ್ಠಿ ನೀಡುತ್ತದೆ. ಆ ಕಾರಣದಿಂದಾಗಿಯೇ ಗ್ರಾಮಕ್ಕೆ ಕೋಣನತಲೆ ಎಂಬ ಹೆಸರು ಬಂದಿರಬಹುದು ಎಂಬುದು ಇಲ್ಲಿನ ಹಿರಿಯರ ಅಭಿಪ್ರಾಯ.
ಕುಮದ್ವತಿ ನದಿ ಪಾತ್ರದಲ್ಲಿರುವ ಈ ಪುಟ್ಟ ಗ್ರಾಮ, ಇಲ್ಲಿಯ ಜನರ ಪ್ರಮುಖ ಉದ್ಯೋಗ ಕೃಷಿ. ಕೃಷಿಗೆ ಅಗತ್ಯ ನೀರು ಪೂರೈಸಲು ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣ ಅನುಕೂಲವಾಗಿದೆ. ಪಂಪ್‌ಸೆಟ್ ಹಾಗೂ ಹನಿ ನೀರಾವರಿ ವ್ಯವಸ್ಥೆಯಿಂದ ಹೆಚ್ಚಿನ ಕೃಷಿಕರು ಬೀಜೋತ್ಪಾದನೆಯಲ್ಲಿ ತೊಡಗಿದ್ದಾರೆ. ಹೈನುಗಾರಿಕೆ ಕೃಷಿಕರ ಬದುಕಿಗೆ ನವಚೈತನ್ಯ ನೀಡಿದೆ.
ಮಹಿಳಾ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳು, ವೀರ ಮಹೇಶ್ವರ ಭಜನಾ ಮಂಡಳಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಜನರ ವ್ಯಾವಹಾರಿಕ ವಹಿವಾಟು ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟಿವೆ.
‘ಪ್ರತಿ ವರ್ಷ ಗ್ರಾಮದ ಆರಾಧ್ಯ ದೈವ ವೀರ ಮಹೇಶ್ವರ ದೇವರ ಜಾತ್ರೆಯು ಅಪಾರ ಭಕ್ತರ ಸಮ್ಮುಖದಲ್ಲಿ 5 ದಿನಗಳ ಕಾಲ ನೆರವೇರುತ್ತದೆ. ಗ್ರಾಮ ದೇವತೆ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ನವರಾತ್ರಿ ಉತ್ಸವದಲ್ಲಿ 9 ದಿನಗಳ ಕಾಲ ದೇವಿ ಪುರಾಣ, ಪ್ರವಚನ ಕಾರ್ಯಕ್ರಮ ನಡೆಯುತ್ತದೆ. ವಿಜಯದಶಮಿ, ಪಂಚಮಿ, ಯುಗಾದಿ ಹಾಗೂ ದಸರಾ ಉತ್ಸವಗಳನ್ನು ಸಡಗರದಿಂದ ಆಚರಿಸಿಕೊಂಡು ಬಂದಿದ್ದೇವೆ’ ಎಂದು ಸಿದ್ಧಪ್ಪ ಬಣಕಾರ, ಮಹೇಶಪ್ಪ ಬಂದಾಳಿ, ಕೆ.ಎಸ್ ಬಾಗೂರ ವಿವರಿಸುತ್ತಾರೆ.
‘ಗ್ರಾಮದಲ್ಲಿ ಪ್ರಗತಿಪರ ರೈತರು ತಮ್ಮ ವಿಚಾರವನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡವುದು. ಆ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಕಾಣಲು ಅಗತ್ಯವಾದ ವ್ಯವಹಾರ ಜ್ಞಾನ ಹಾಗೂ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದು ಬಿ.ಎಸ್. ನಂದಿಹಳ್ಳಿ, ಎಸ್.ವಿ.ಕಡೂರ ತಿಳಿಸುತ್ತಾರೆ.
ಹಲವು ತಳಿಗಳ ಬೀಜೋತ್ಪಾದನೆಗೆ ಆದ್ಯತೆ ಜಾತ್ರೆ, ಉತ್ಸವ ಸಂಭ್ರಮದಿಂದ ಆಚರಣೆ
ಗ್ರಾಮದ ಜನರು ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ಜಾತಿ ಭೇದ ಮರೆತು ಮಾನವೀಯತೆಯ ನೆಲೆಯಲ್ಲಿ ದುಡಿಮೆಯಿಂದ ನೆಮ್ಮದಿ ಬದುಕು ನಡೆಸುತ್ತಿದ್ದಾರೆ.- ಸೋಮಪ್ಪ ಹೊಸಮನಿ ಕೃಷಿಕ
ಗಮನ ಸೆಳೆಯುವ ಸರ್ಕಾರಿ ಶಾಲೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿಶಾಲವಾದ ಮೈದಾನ ಸುಸಜ್ಜಿತ ಕೊಠಡಿಗಳು ಭೋಜನಾಲಯ ಸ್ಮಾರ್ಟ್ ಕ್ಲಾಸ್ ಟಿವಿ 2 ಟ್ಯಾಬ್‌ಗಳು ಟ್ರಾವೆಲ್ ಸ್ಪೀಕರ್ ಕಲಿಕೆಗೆ ಪೂರಕವಾದ ಪಾಠೋಪಕರಣ ಹಾಗೂ ಪೀಠೋಪಕರಣಗಳು ಗಮನ ಸೆಳೆಯುತ್ತವೆ. ಮಕ್ಕಳ ಕಲಿಕೆಯಲ್ಲಿ ಪ್ರಗತಿ ಸಾಧಿಸಲಾಗಿದೆ. ರಾಜ್ಯ ಮಟ್ಟದ ಕೊಕ್ಕೊ ಪಂದ್ಯದಲ್ಲಿ ಶಾಲೆಯ ವಿದ್ಯಾರ್ಥಿನಿ ಶಿಲ್ಪಾ ಚನ್ನಪ್ಪ ಹನಗೋಡಿ ಹಾಗೂ ಸುಮಾ ಸೋಮಪ್ಪ ಕನ್ನಪ್ಪಳವರ ಅವರು ಶಾಲೆಗೆ ಕೀರ್ತಿ ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.