ADVERTISEMENT

ಹಾವೇರಿ | ಬೆಳೆ ವಿಮೆ: ರೈತರ ನಿರಾಸಕ್ತಿ, ತಗ್ಗಿದ ಅರ್ಜಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ : ಹಾನಗಲ್‌ ತಾಲ್ಲೂಕಿನಲ್ಲಿ ಹೆಚ್ಚಿನ ನೋಂದಣಿ

ಸಂತೋಷ ಜಿಗಳಿಕೊಪ್ಪ
Published 14 ಆಗಸ್ಟ್ 2024, 4:52 IST
Last Updated 14 ಆಗಸ್ಟ್ 2024, 4:52 IST
ಮಂಜುನಾಥ ಅಂತರವಳ್ಳಿ
ಮಂಜುನಾಥ ಅಂತರವಳ್ಳಿ   

ಹಾವೇರಿ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪಡೆಯಲು ಜಿಲ್ಲೆಯಲ್ಲಿ 2.51 ಲಕ್ಷ ಅರ್ಜಿಗಳು (ಪ್ರಸ್ತಾವ) ಸಲ್ಲಿಕೆಯಾಗಿದ್ದು, ಕಳೆದ ಮುಂಗಾರಿಗೆ ಹೋಲಿಸಿದರೆ ಪ್ರಸಕ್ತ ಮುಂಗಾರಿನಲ್ಲಿ ಪ್ರಸ್ತಾವಗಳ ಸಂಖ್ಯೆ ಕಡಿಮೆಯಾಗಿದೆ.

ಬೆಳೆ ವಿಮೆ ನಿರ್ಧಾರದಲ್ಲಿ ಅನ್ಯಾಯ, ವಿಮೆ ವಿತರಣೆಯಲ್ಲಿ ತಾರತಮ್ಯ, ವಿಮೆ ಪಾವತಿ ಬಾಕಿ ಹಾಗೂ ಇತರೆ ಕಾರಣಗಳಿಂದಾಗಿ ರೈತರು ಈ ವರ್ಷ ವಿಮೆ ಪಾವತಿ ಮಾಡಲು ನಿರಾಸಕ್ತಿ ತೋರಿದ್ದಾರೆ. ಕೃಷಿ ಇಲಾಖೆ ಇಟ್ಟುಕೊಂಡಿದ್ದ ಗುರಿಗೆ ತಕ್ಕಂತೆ ಈ ವರ್ಷ ವಿಮೆಯ ಅರ್ಜಿಗಳು ಸಲ್ಲಿಕೆಯಾಗಿಲ್ಲ.

ಜಿಲ್ಲೆಯ ಬಹುತೇಕ ರೈತರು ಮುಸುಕಿನ ಜೋಳ, ಶೇಂಗಾ, ಭತ್ತ, ಉದ್ದು, ಈರುಳ್ಳಿ, ರಾಗಿ, ಕೆಂಪು ಮೆಣಸಿನಕಾಯಿ, ಸೋಯಾ ಅವರೆ, ಸೂರ್ಯಕಾಂತಿ, ಟೊಮ್ಯಾಟೊ, ಎಲೆಕೋಸು, ಹತ್ತಿ, ಅಲಸಂದಿ, ತೊಗರಿ ಬೆಳೆ ಬೆಳೆದಿದ್ದಾರೆ. ಹಲವು ರೈತರು, ಈ ವರ್ಷ ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಆದರೆ, ಕೆಲವರು ಬೆಳೆ ವಿಮೆ ಪಾವತಿಗೆ ಆಸಕ್ತಿ ತೋರಿಸಿಲ್ಲವೆಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘2023ರ ಮುಂಗಾರಿನಲ್ಲಿ ರೈತರಿಂದ ಸುಮಾರು 3.25 ಲಕ್ಷ ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು. ಆದರೆ, ಈ ವರ್ಷ ₹ 2.51 ಲಕ್ಷ ಪ್ರಸ್ತಾವಗಳು ಮಾತ್ರ ಸಲ್ಲಿಕೆಯಾಗಿವೆ. ಅಂಕಿ– ಅಂಶ ಗಮನಿಸಿದರೆ, ಈ ವರ್ಷ 74 ಸಾವಿರ ಅರ್ಜಿಗಳು ಕಡಿಮೆಯಾಗಿವೆ’ ಎಂದು ತಿಳಿಸಿದರು.

‘ಜೂನ್ ಅಂತ್ಯ ಹಾಗೂ ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿದೆ. ಬೆಳೆಯೂ ಚೆನ್ನಾಗಿದೆ. ಫಸಲು ಉತ್ತಮ ರೀತಿಯಲ್ಲಿ ಬರಬಹುದೆಂದು ಹಲವು ರೈತರು, ವಿಮೆ ಪಾವತಿ ಮಾಡಿಲ್ಲ’ ಎಂದರು.

‘ಪ್ರತಿಯೊಂದು ಅರ್ಜಿಯನ್ನು ಪ್ರಸ್ತಾವಗಳೆಂದು ಪರಿಗಣಿಸಲಾಗುತ್ತದೆ. ಒಬ್ಬ ರೈತರು, ಹೆಚ್ಚಿನ ಅರ್ಜಿ ಸಲ್ಲಿಸಲು ಅವಕಾಶವಿದೆ. ಎಷ್ಟು ರೈತರು ಅರ್ಜಿ ಸಲ್ಲಿಸಿದ್ದಾರೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾದ ತಾಲ್ಲೂಕುಗಳ ಪೈಕಿ ಹಾನಗಲ್ ಮೊದಲ ಸ್ಥಾನದಲ್ಲಿವೆ. ರಾಣೆಬೆನ್ನೂರು ಎರಡನೇ ಸ್ಥಾನದಲ್ಲಿದೆ. ರಟ್ಟೀಹಳ್ಳಿ ಕೊನೆಯ ಸ್ಥಾನದಲ್ಲಿದೆ’ ಎಂದು ಹೇಳಿದರು. 

ವಿಸ್ತರಣೆಯಾಗದ ಕೊನೆಯ ಅವಧಿ: ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮೆ) ಯೋಜನೆಯ 2024–25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ನಾಲ್ಕು ಪ್ರಮುಖ ಬೆಳೆಗಳನ್ನು ಆಯ್ಕೆ ಮಾಡಲಾಗಿತ್ತು. ವಿಮೆ ಪಾವತಿ ಮಾಡಲು ಜುಲೈ 31ರವರೆಗೆ ಸಮಯ ನಿಗದಿಪಡಿಸಲಾಗಿತ್ತು.

ಜುಲೈ ಕೊನೆಯ ವಾರದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ವಿಮೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿತ್ತು. ಇದರಿಂದಾಗಿ ಹಲವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಕೆಲ ರೈತರು, ದಿನಾಂಕ ವಿಸ್ತರಣೆ ಮಾಡುವಂತೆ ಕೋರಿದ್ದರು. ಆದರೆ, ಜುಲೈ 31ರಂದೇ ಅರ್ಜಿ ಸಲ್ಲಿಕೆ ಮುಕ್ತಾಯ ಮಾಡಲಾಗಿದೆ. ಈ ಕಾರಣಕ್ಕೂ ಹಲವರು ವಿಮೆ ಪಾವತಿಯಿಂದ ವಂಚಿತರಾಗಿದ್ದಾರೆ.

‘ಬೆಳೆಗಳ ವಿಮಾ ಕಂತು ಪಾವತಿ ಮಾಡಲು ಜುಲೈ 31ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಸೇವಾ ಕೇಂದ್ರ, ಕರ್ನಾಟಕ ಒನ್, ಗ್ರಾಮ್ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದರೆ, ಕೊನೆಯ ಘಳಿಗೆಯಲ್ಲಿ ಸರ್ವರ್ ಸಮಸ್ಯೆಯಿಂದ ವಿಮೆ ತುಂಬಲು ಆಗಲಿಲ್ಲ’ ಎಂದು ರೈತ ಶಂಕ್ರಪ್ಪ ಹೇಳಿದರು.

ಪ್ರತಿ ವರ್ಷವೂ ಗೋಳು: ‘ಆರಂಭದಲ್ಲಿ ಬೆಳೆ ವಿಮೆ ಮೇಲೆ ವಿಶ್ವಾಸವಿತ್ತು. ವರ್ಷಗಳು ಕಳೆದಂತೆ, ವಿಮೆ ಪಾವತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿವೆ. ಇದೇ ಕಾರಣಕ್ಕೆ ಈ ವರ್ಷ ವಿಮೆ ತುಂಬಿಲ್ಲ’ ಎಂದು ವರ್ದಿ ಗ್ರಾಮದ ರೈತ ಸುಭಾಷ್ ಹೇಳಿದರು.

ನಾಗನೂರು ರೈತ ಚಂದ್ರಪ್ಪ, ‘ಕಳೆದ ವರ್ಷ ವಿಮೆ ತುಂಬಿದ್ದೆ. ಆದರೆ, ಈ ವರ್ಷ ಅಂದುಕೊಂಡಷ್ಟು ವಿಮೆ ಬಂದಿಲ್ಲ. ಜೊತೆಗೆ, ಪ್ರತಿ ವರ್ಷವೂ ವಿಮೆ ಪಡೆಯಲು ಗೋಳಾಡುತ್ತಿದ್ದೇವೆ. ಹೀಗಾಗಿ, ಈ ವರ್ಷ ವಿಮೆ ಪಾವತಿಸಿಲ್ಲ’ ಎಂದು ಹೇಳಿದರು.

ಇನ್ನೊಬ್ಬ ರೈತ ರಾಮಣ್ಣ, ‘ಗೋವಿನ ಜೋಳಕ್ಕೆ ಕಳೆದ ಬಾರಿ ವಿಮೆ ತುಂಬಿದ್ದೆ. ಸ್ವಲ್ಪ ಹಣ ಬಂದಿತ್ತು. ಈ ಬಾರಿ ಬೆಳೆ ಹಾನಿಯಾದರೆ, ಸ್ವಲ್ಪ ಹಣ ಬರಬಹುದು. ಕೃಷಿ ಚಟುವಟಿಕೆಗೆ ಮಾಡಿರುವ ಸಾಲವನ್ನಾದರೂ ತೀರಿಸಬಹುದೆಂದು ವಿಮೆ ಕಟ್ಟಿದ್ದೇನೆ’ ಎಂದರು.

ಸರ್ವರ್ ಸಮಸ್ಯೆಯಿಂದ ತಪ್ಪಿದ ಅವಕಾಶ ವಿಸ್ತರಣೆಯಾಗದ ಕೊನೆಯ ಅವಧಿ ಪ್ರತಿ ವರ್ಷವೂ ಗೋಳು ಎನ್ನುವ ರೈತರು

ಜುಲೈನಲ್ಲಿ ಉತ್ತಮ ಮಳೆಯಾಗಿದೆ. ಬೆಳೆಯೂ ಚೆನ್ನಾಗಿದೆ. ಬೆಳೆ ಹಾನಿ ಆಗುವುದಿಲ್ಲವೆಂದು ತಿಳಿದು ಹಲವು ರೈತರು ವಿಮೆ ಪಾವತಿದಿಲ್ಲ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ವಿಮೆ ಪಾವತಿ ಪ್ರಮಾಣ ಕಡಿಮೆಯಾಗಿದೆ
-ಮಂಜುನಾಥ ಅಂತರಹಳ್ಳಿ ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಲ್ಲೂಕುವಾರು ರೈತರಿಂದ ಸಲ್ಲಿಕೆಯಾದ ಪ್ರಸ್ತಾವ (ತಾಲ್ಲೂಕು;ರೈತರು ಸಲ್ಲಿಸಿದ ಅರ್ಜಿ)

ಬ್ಯಾಡಗಿ;29734

ಹಾನಗಲ್;46936

ಹಾವೇರಿ;34434

ಹಿರೇಕೆರೂರು;23637

ರಾಣೆಬೆನ್ನೂರು;40313

ರಟ್ಟೀಹಳ್ಳಿ;21346

ಸವಣೂರು;23638

ಶಿಗ್ಗಾವಿ;30982

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.