ಹಾವೇರಿ: ‘ಈ ದೀಪಾವಳಿಯಂದು ಭರ್ಜರಿ ಲಾಭ ಪಡೆಯಿರಿ. ನಿಮ್ಮ ಬ್ಯಾಂಕ್ ಖಾತೆಗೆ ₹ 7,250 ಬಹುಮಾನ ಬಂದಿದೆ. ಈ ಬಹುಮಾನದ ಅವಧಿ ಇಂದು ಮಧ್ಯರಾತ್ರಿ ಮುಗಿಯಲಿದೆ. ಬಹುಮಾನ ಪಡೆಯಲು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. ಬಹುಮಾನದ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ’....
ಇಂಥ ಹಲವು ಸಂದೇಶಗಳು, ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿವೆ. ಸಂದೇಶ ನಂಬಿ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುತ್ತಿರುವ ಜನರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವಂಚಕರು ದೋಚುತ್ತಿದ್ದಾರೆ. ಕ್ಷಣಿಕ ನಿರ್ಧಾರದಿಂದ ಹಣ ಕಳೆದುಕೊಳ್ಳುತ್ತಿರುವ ಜನರು, ಸೈಬರ್ ಕ್ರೈಂ ಠಾಣೆಗಳಿಗೆ ದೂರು ನೀಡಿ ಹಣ ವಾಪಸು ಕೊಡಿಸುವಂತೆ ಕಣ್ಣೀರು ಹಾಕುತ್ತಿದ್ದಾರೆ.
ಒನ್ ಟೈಂ ಪಾಸ್ವರ್ಡ್ (ಒಟಿಪಿ), ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ, ಕ್ರೆಡಿಟ್–ಡೆಬಿಟ್ ಕಾರ್ಡ್, ವೈವಾಹಿಕ ಜಾಲತಾಣ ಹಾಗೂ ಇತರೆ ಮಾದರಿಯಲ್ಲಿ ಸೈಬರ್ ಅಪರಾಧ ಎಸಗುತ್ತಿದ್ದ ವಂಚಕರು, ಈಗ ಆ್ಯಪ್ ಮೂಲಕ ನೇರವಾಗಿ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ.
ಮೊಬೈಲ್ ಹಾಗೂ ಕಂಪ್ಯೂಟರ್ ಸ್ಕ್ರಿನ್ ವೀಕ್ಷಣೆಗೆ ಅನುಕೂಲವಾಗುತ್ತಿರುವ ‘ಎನಿಡೆಸ್ಕ್’ ಆ್ಯಪ್ ಮಾದರಿಯಲ್ಲಿ ವಂಚಕರು ತಮ್ಮದೇ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಕೆನರಾ, ಎಸ್ಬಿಐ ಹಾಗೂ ಇತರೆ ಬ್ಯಾಂಕ್ಗಳ ಹೆಸರಿನಲ್ಲಿ ಆ್ಯಪ್ ಲಿಂಕ್ ಹರಿಬಿಡುತ್ತಿದ್ದಾರೆ. ಆ್ಯಪ್ ನಿಜವೆಂದು ನಂಬುತ್ತಿರುವ ಕೆಲವರು, ಇನ್ಸ್ಟಾಲ್ ಮಾಡಿಕೊಂಡು ಹಣ ಕಳೆದುಕೊಳ್ಳುತ್ತಿದ್ದಾರೆ.
ದೀಪಾವಳಿ ಹಬ್ಬದ ಆಚರಣೆಗೆ ಜನರು ತಯಾರಿ ನಡೆಸುತ್ತಿದ್ದಾರೆ. ಬ್ಯಾಂಕ್ಗಳು, ಮಾಲ್ಗಳು ಹಾಗೂ ಹಲವು ಉತ್ಪನ್ನಗಳ ತಯಾರಿಕೆ ಕಂಪನಿಗಳು ನಾನಾ ಆಫರ್ಗಳನ್ನು ಘೋಷಿಸಿವೆ. ಇದನ್ನೇ ನೆಪ ಮಾಡಿಕೊಂಡಿರುವ ವಂಚಕರು, ದೀಪಾವಳಿ ಹೆಸರಿನಲ್ಲಿ ಆಮಿಷಗಳನ್ನು ನೀಡಿ ವಂಚಿಸುತ್ತಿದ್ದಾರೆ.
ಬಹುತೇಕರು ಮೊಬೈಲ್ ಬ್ಯಾಂಕಿಂಗ್ ಸೇವೆ (ಫೋನ್ಪೇ ಪೇಟಿಎಂ ಗೂಗಲ್ ಪೇ ಹಾಗೂ ಇತರೆ) ಬಳಸುತ್ತಿದ್ದಾರೆ. ಇವರೆಲ್ಲರೂ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ಆಮಿಷಕ್ಕೆ ಒಳಗಾಗಬಾರದು.ಶಿವಶಂಕರ ಆರ್. ಗಣಾಚಾರಿ, ಇನ್ಸ್ಪೆಕ್ಟರ್, ಹಾವೇರಿ ಜಿಲ್ಲಾ ಸೆನ್ ಠಾಣೆ
‘ದೀಪಾವಳಿ ಮಾತ್ರವಲ್ಲದೇ, ಕೆನರಾ ಬ್ಯಾಂಕ್ ಹಾಗೂ ಎಸ್ಬಿಐ ಬ್ಯಾಂಕ್ ಬಹುಮಾನದ ಹೆಸರಿನಲ್ಲೂ ಸೈಬರ್ ವಂಚಕರು ಹಣ ದೋಚುತ್ತಿದ್ದಾರೆ. ಮೊಬೈಲ್ಗೆ ಬರುವ ಆ್ಯಪ್ಗಳ ಲಿಂಕ್ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ಹಾವೇರಿ ಜಿಲ್ಲಾ ಸೆನ್ ಠಾಣೆ ಇನ್ಸ್ಪೆಕ್ಟರ್ ಶಿವಶಂಕರ ಆರ್. ಗಣಾಚಾರಿ ‘ಪ್ರಜಾವಾಣಿ’ಗೆ ಕೋರಿದರು.
ವಾಟ್ಸ್ಆ್ಯಪ್ ಗ್ರೂಪ್ ಸಹ ಹ್ಯಾಕ್:
ಇಂದಿನ ಕಾಲದಲ್ಲಿ ಬಹುತೇಕರು ವಾಟ್ಸ್ಆ್ಯಪ್ ಬಳಸುತ್ತಿದ್ದು, ನಾನಾ ಗ್ರೂಪ್ಗಳಲ್ಲಿ ಸದಸ್ಯರಾಗಿದ್ದಾರೆ. ಇಂಥ ಗ್ರೂಪ್ಗಳನ್ನು ಹ್ಯಾಕ್ ಮಾಡುತ್ತಿರುವ ವಂಚಕರು, ಅದರಲ್ಲಿಯೇ ಆ್ಯಪ್ ಲಿಂಕ್ ಪೋಸ್ಟ್ ಹಾಕುತ್ತಿದ್ದಾರೆ.
‘ಕಂಪನಿ ಸಹೋದ್ಯೋಗಿಗಳು ಸೇರಿಕೊಂಡು ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಕೆನರಾ ಬ್ಯಾಂಕ್ನಲ್ಲಿ ನಮ್ಮ ವೇತನದ ಖಾತೆಗಳಿವೆ. ಇತ್ತೀಚೆಗೆ ನಮ್ಮ ಗ್ರೂಪ್ಗೆ ಸಂದೇಶ ಬಂದಿತ್ತು. ‘ಕೆನರಾ ಬ್ಯಾಂಕ್ ರಿವಾರ್ಡ್ ಹಣ ಬಂದಿದೆ. ಆ್ಯಪ್ ಇನ್ಸ್ಟಾಲ್ ಮಾಡಿಕೊಂಡರೆ, ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ’ ಎಂದು ಬರೆಯಲಾಗಿತ್ತು. ಅದನ್ನು ನಂಬಿದ್ದ ಇಬ್ಬರು ಸಹೋದ್ಯೋಗಿಗಳು, ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ವೈಯಕ್ತಿಕ ಮಾಹಿತಿ ಅಪ್ಲೋಡ್ ಮಾಡಿದ್ದರು. ಅದಾದ ಕೆಲ ನಿಮಿಷಗಳಲ್ಲಿ ಅವರ ಖಾತೆಯಿಂದ ಹಣ ಕಡಿತವಾಗಿದೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ರಂಜಿತ್ ತಿಳಿಸಿದರು.
‘ಸಹೋದ್ಯೋಗಿಗಳ ಖಾತೆಯಲ್ಲಿ ₹ 10 ಸಾವಿರಕ್ಕಿಂತ ಕಡಿಮೆ ಹಣವಿತ್ತು. ಅದೆಲ್ಲವೂ ಕಡಿತವಾಗಿದೆ. ಹಣ ಕಳೆದುಕೊಂಡಿದ್ದ ಅವರು, ‘ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಡಿ’ ಎಂಬುದಾಗಿ ಸಂದೇಶ ಕಳುಹಿಸಿದರು. ಅವಾಗಲೇ, ಆ್ಯಪ್ ಮೂಲಕ ನಡೆಯುತ್ತಿರುವ ವಂಚನೆ ಗಮನಕ್ಕೆ ಬಂತು’ ಎಂದು ಹೇಳಿದರು.
ಪ್ರತಿ ನಿತ್ಯ 40ಕ್ಕೂ ಹೆಚ್ಚು ಪ್ರಕರಣ: ಆ್ಯಪ್ ವಂಚನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ನಿತ್ಯವೂ 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಪ್ರಕರಣಗಳು ದಾಖಲಾಗುತ್ತಿದ್ದರೂ ಆರೋಪಿಗಳ ಪತ್ತೆ ಮಾತ್ರ ಸಾಧ್ಯವಾಗುತ್ತಿಲ್ಲ.
‘ರಾಜಸ್ಥಾನ್, ಬಿಹಾರ, ಜಾರ್ಖಂಡ್ ಹಾಗೂ ಇತರೆ ರಾಜ್ಯಗಳಲ್ಲಿರುವ ವಂಚಕರು, ನಾನಾ ರೀತಿಯಲ್ಲಿ ಸೈಬರ್ ಅಪರಾಧ ಎಸಗುತ್ತಿದ್ದಾರೆ. ಆರಂಭದಲ್ಲಿ, ಒಟಿಪಿ ವಂಚನೆ ಮಾಡುತ್ತಿದ್ದರು. ಆದರೆ, ಈಗ ಜನರು ಜಾಗೃತರಾಗಿದ್ದಾರೆ. ಅಪರಿಚಿತರಿಗೆ ಒಟಿಪಿ ನೀಡುವುದು ಕಡಿಮೆ ಮಾಡಿದ್ದಾರೆ. ಇದೇ ಕಾರಣಕ್ಕೆ ಸೈಬರ್ ವಂಚಕರು, ಬೇರೆ ದಾರಿಗಳ ಮೂಲಕ ಜನರಿಂದ ಹಣ ದೋಚುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬೇರೆ ಬೇರೆ ಖಾತೆಗಳಿಗೆ ಹಣ ವರ್ಗ’
‘ಮೊಬೈಲ್ ಆ್ಯಪ್ ಇನ್ಸ್ಟಾಲ್ ಮಾಡಿಸಿ ದೋಚುತ್ತಿರುವ ಹಣವನ್ನು ಆರೋಪಿಗಳು ಒಂದು ಬ್ಯಾಂಕ್ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಮೂರು ಹಂತದ ಖಾತೆಗಳನ್ನು ಪತ್ತೆ ಮಾಡಿದರೂ ಮುಂದಿನ ಹಂತದ ಖಾತೆಗಳ ಮಾಹಿತಿ ಲಭ್ಯವಾಗುತ್ತಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೃತ್ಯ ನಡೆದು ಒಂದು ಗಂಟೆಯೊಳಗೆ ಜನರು ದೂರು ನೀಡಿದರೆ ಅನುಮಾನಾಸ್ಪದ ಖಾತೆಗಳ ವಹಿವಾಟು ಬಂದ್ ಮಾಡಿಸಬಹುದು. ಇದರಿಂದ ಹಣ ವಾಪಸು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಾಹಿತಿ ನೀಡುವುದು ತಡವಾದರೆ ಹಣ ವಾಪಸು ಬರುವುದು ತುಂಬಾ ಕಷ್ಟ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.