ADVERTISEMENT

ಹಾವೇರಿ | ದೀಪಾವಳಿ: ಲಕ್ಷ್ಮಿ– ಹಟ್ಟಿ ಲಕ್ಕವ್ವ ಪೂಜೆಗೆ ತಯಾರಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 15:56 IST
Last Updated 31 ಅಕ್ಟೋಬರ್ 2024, 15:56 IST
ಹಾವೇರಿ ಮಾರುಕಟ್ಟೆಯಲ್ಲಿ ದೀಪಾವಳಿ ಪೂಜೆಗೆ ಅಗತ್ಯವಿರುವ ಬಾಳೆ ಕಂಬವನ್ನು ಗ್ರಾಹಕರು ಗುರುವಾರ ಖರೀದಿಸಿದರು
ಹಾವೇರಿ ಮಾರುಕಟ್ಟೆಯಲ್ಲಿ ದೀಪಾವಳಿ ಪೂಜೆಗೆ ಅಗತ್ಯವಿರುವ ಬಾಳೆ ಕಂಬವನ್ನು ಗ್ರಾಹಕರು ಗುರುವಾರ ಖರೀದಿಸಿದರು   

ಹಾವೇರಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಮೊದಲ ದಿನವಾದ ಗುರುವಾರ ಸಂಭ್ರಮ–ಸಡಗರ ಮನೆ ಮಾಡಿತ್ತು. ನೀರು ತುಂಬುವ ಹಬ್ಬವನ್ನು ಆಚರಿಸಿದ ಜನರು, ಗುರುವಾರ ಸ್ನಾನ ಮಾಡಿ ದೇವರಿಗೆ ಪೂಜೆ ನೆರವೇರಿಸಿದರು.

ಶುಕ್ರವಾರ ಹಾಗೂ ಶನಿವಾರ ಹಬ್ಬದ ಆಚರಣೆ ಇರಲಿದೆ. ಲಕ್ಷ್ಮಿ ಪೂಜೆ ಹಾಗೂ ಹಟ್ಟಿ ಲಕ್ಕಮ್ಮ ಪೂಜೆ ಮಾಡಲು ಜನರು ತಯಾರಿ ನಡೆಸುತ್ತಿದ್ದು, ಇದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಗುರುವಾರ ಮಾರುಕಟ್ಟೆಯಲ್ಲಿ ಖರೀದಿಸಿದರು.

ನಗರದ ಗಾಂಧಿ ಸರ್ಕಲ್, ಎಂ.ಜಿ. ರಸ್ತೆ, ಜೆ.ಪಿ. ಸರ್ಕಲ್ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುರುವಾರ ಕಂಡುಬಂದರು. ಹಬ್ಬಕ್ಕೆ ಅಗತ್ಯವಿರುವ ದಿನಸಿ, ಹೂವು–ಹಣ್ಣು ಹಾಗೂ ಇತರೆ ವಸ್ತುಗಳನ್ನು ಖರೀದಿಸಿದರು.

ADVERTISEMENT

ಅಲಂಕಾರಕ್ಕೆ ಬೇಕಾದ ಬಾಳೆ ಕಂಬ, ಮಾವಿನ ತೋರಣ ಹಾಗೂ ಇತರೆ ವಸ್ತುಗಳನ್ನೂ ಖರೀಸಿದರು. ತರಹೇವಾರಿ ಆಕಾಶ ಬುಟ್ಟಿಗಳು, ಹಣತೆಗಳು, ವಿದ್ಯುತ್ ಆಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳನ್ನು ಕುತೂಹಲದಿಂದ ವೀಕ್ಷಿಸಿದ ಜನರು, ತಮ್ಮಿಷ್ಟದ ಆಕಾಶ ಬುಟ್ಟಿಯನ್ನು ಕೊಂಡುಕೊಂಡರು.

ಜಿಲ್ಲೆಯ ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಬ್ಯಾಡಗಿ, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಮಾರುಕಟ್ಟೆಯಲ್ಲೂ ಖರೀದಿ ಜೋರಾಗಿತ್ತು. ದೀಪಾವಳಿ ದೀಪಗಳ ಹಬ್ಬ. ಹಬ್ಬದಂದು ದೀಪಗಳನ್ನು ಹಚ್ಚಲು ಅಗತ್ಯವಿರುವ ಹಣತೆಗಳನ್ನು ಜನರು ಗುರುವಾರ ಖರೀದಿಸಿದರು.

ದೀಪಾವಳಿ ಹಬ್ಬವೆಂದರೆ, ಜಿಲ್ಲೆಯಲ್ಲಿ ಕೊಬ್ಬರು ಹೋರಿ ಸ್ಪರ್ಧೆಯ ಸಂಭ್ರಮವೂ ಜೋರಾಗಿದೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಹೋರಿಗಳನ್ನು ಓಡಿಸುವ ಮೂಲಕ ಹಬ್ಬದ ಆಚರಣೆ ಮಾಡಲಾಗುತ್ತದೆ. ಹೋರಿಗಳ ಅಲಂಕಾರಕ್ಕೆ ಅಗತ್ಯವಿರುವ ವಸ್ತುಗಳನ್ನು ಜನರು ಗುರುವಾರ ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಹಾವೇರಿ ಜಿಲ್ಲೆಯಲ್ಲಿ ಕೊಬ್ಬರಿ ಹೋರಿಗಳನ್ನು ಅಲಂಕರಿಸಲು ಅಗತ್ಯವಿರುವ ಅಲಂಕಾರಿಕ ವಸ್ತುಗಳನ್ನು ಜನರು ಗುರುವಾರ ಖರೀದಿಸಿದರು
ಹಾವೇರಿ ಜಿಲ್ಲೆಯಲ್ಲಿ ಕೊಬ್ಬರಿ ಹೋರಿಗಳನ್ನು ಅಲಂಕರಿಸಲು ಅಗತ್ಯವಿರುವ ಅಲಂಕಾರಿಕ ವಸ್ತುಗಳನ್ನು ಜನರು ಗುರುವಾರ ಖರೀದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.