ADVERTISEMENT

ಹಾವೇರಿ ಜಿಲ್ಲೆಯಲ್ಲಿ ಹೊಸ 66 ಶಂಕಿತ ಡೆಂಗಿ ಪ್ರಕರಣ

16 ವರ್ಷದೊಳಗಿನ 337 ಮಕ್ಕಳಲ್ಲಿ ಡೆಂಗಿ; ಶಾಲೆಗಳಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:39 IST
Last Updated 10 ಜುಲೈ 2024, 14:39 IST

ಹಾವೇರಿ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದುವರೆಗೂ 501 ಪ್ರಕರಣಗಳು ವರದಿಯಾಗಿವೆ. ಇದರ ನಡುವೆಯೇ ಹೊಸದಾಗಿ ಸರ್ಕಾರಿ ಆಸ್ಪತ್ರೆಗಳ 54 ಹಾಗೂ ಖಾಸಗಿ ಆಸ್ಪತ್ರೆಗಳ 12 ಮಂದಿಯಲ್ಲಿ ಡೆಂಗಿ ಇರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ವಿವಿಧ ಪ್ರದೇಶಗಳ 176 ಮಂದಿ ತೀವ್ರ ಜ್ವರದಿಂದಾಗಿ ಸರ್ಕಾರಿ ಆಸ್ಪತ್ರೆಗಳ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಸರ್ಕಾರಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗಕ್ಕೆ ಭೇಟಿ ನೀಡಿದ್ದ 45 ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಒಳ ಹಾಗೂ ಹೊರ ರೋಗಿಗಳನ್ನು ಒಟ್ಟುಗೂಡಿಸಿ 221 ಮಂದಿಯನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದೆ.

‘ಸರ್ಕಾರಿ ಆಸ್ಪತ್ರೆಗಳಿಂದ 221 ಮಂದಿಗೆ ಪ್ರಾಥಮಿಕ ಕಿಟ್‌ ಬಳಸಿ ಡೆಂಗಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 54 ಮಂದಿಯ ವರದಿ ಪಾಸಿಟಿವ್ ಬಂದಿದೆ. ಖಾಸಗಿ ಆಸ್ಪತ್ರೆಗಳ 12 ಮಂದಿಯ ವರದಿಯೂ ಪಾಸಿಟಿವ್ ಇದೆ. ಹೀಗಾಗಿ, ಎಲ್ಲರನ್ನೂ ಎಲಿಸಾ ಕಿಟ್ ಮೂಲಕ ಪರೀಕ್ಷಿಸಲಾಗಿದೆ. ಇದರ ವರದಿ ಪರಿಶೀಲಿಸಿದ ನಂತರವೇ ಡೆಂಗಿ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರಿ) ಡಾ.ಜಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

16 ವರ್ಷದೊಳಗಿನ 337 ಮಕ್ಕಳಿಗೆ ಡೆಂಗಿ: ಜಿಲ್ಲೆಯಲ್ಲಿ ಹಲವು ದಿನಗಳಿಂದ ತೀವ್ರ ಜ್ವರ, ಮೈ ಕೈ ನೋವು ಹಾಗೂ ಇತರೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪೈಕಿ ಮಕ್ಕಳ ಸಂಖ್ಯೆ ಹೆಚ್ಚಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ವರದಿಯಾಗಿರುವ 501 ಡೆಂಗಿ ಪ್ರಕರಣಗಳ ಪೈಕಿ 1 ವರ್ಷದಿಂದ 16 ವರ್ಷದೊಳಗಿನ 337 ಮಕ್ಕಳಿದ್ದಾರೆ. ಹಾನಗಲ್‌ ತಾಲ್ಲೂಕಿನಲ್ಲಿ 138, ಹಾವೇರಿಯಲ್ಲಿ 41, ಬ್ಯಾಡಗಿಯಲ್ಲಿ 63, ರಾಣೆಬೆನ್ನೂರಿನಲ್ಲಿ 10, ಹಿರೇಕೆರೂರಿನಲ್ಲಿ 52, ರಟ್ಟೀಹಳ್ಳಿಯಲ್ಲಿ 13, ಶಿಗ್ಗಾವಿಯಲ್ಲಿ 17 ಹಾಗೂ ಸವಣೂರಿನಲ್ಲಿ 3 ಮಕ್ಕಳಿದ್ದಾರೆ. ಇದರಲ್ಲಿ ಬಹುತೇಕರು ಗುಣಮುಖರಾಗಿದ್ದು, ಪೋಷಕರಲ್ಲಿ ತಕ್ಕಮಟ್ಟಿಗೆ ಸಮಾಧಾನ ತಂದಿದೆ.

16 ವರ್ಷ ವಯಸ್ಸು ಮೇಲ್ಪಟ್ಟ 164 ಮಂದಿ ಡೆಂಗಿ ಪೀಡಿತರಾಗಿದ್ದರು. ಇದರಲ್ಲಿಯೂ ಬಹುಪಾಲು ಮಂದಿ ಗುಣಮುಖರಾಗಿದ್ದಾರೆ. ಇದರ ನಡುವೆಯೇ ಜ್ವರ, ತೀವ್ರ ಜ್ವರ, ಅತೀಸಾರ, ಟೈಪಾಯಿಡ್ ಹಾಗೂ ಇತರೆ ಆರೋಗ್ಯ ಸಮಸ್ಯೆಗಳ ಪ್ರಕರಣಗಳ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಿದೆ.

‘501 ಡೆಂಗಿ ಪ್ರಕರಣಗಳ ಪೈಕಿ 494 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ಐವರು, ಹಾವೇರಿ ಜಿಲ್ಲಾಸ್ಪತ್ರೆ, ಹುಬ್ಬಳ್ಳಿ ಕಿಮ್ಸ್, ಮಣಿಪಾಲ್ ಹಾಗೂ ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರೆಲ್ಲರೂ ಚೇತರಿಸಿಕೊಳ್ಳುವ ಲಕ್ಷಣಗಳಿವೆ’ ಎಂದು ಜಯಾನಂದ ತಿಳಿಸಿದರು.

ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ: ‘ಶಾಲೆಯಲ್ಲಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಡೆಂಗಿ ಬಾಧಿತರಾಗುತ್ತಿದ್ದಾರೆ. ಶಾಲೆ ಶಿಕ್ಷಕರ ಮೂಲಕ ಡೆಂಗಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಯಾನಂದ ಹೇಳಿದರು.

‘ದಿನವೂ ಶಾಲೆಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ. ಪ್ರತಿ ಶುಕ್ರವಾರ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ನೀರಿನ ಮೂಲಗಳನ್ನು ಶುಚಿಗೊಳಿಸಲಾಗುತ್ತಿದೆ. ಶಾಲೆ ಬಳಿ ನೀರು ನಿಲ್ಲದಂತೆ ನೋಡಿಕೊಳ್ಳಲು ಶಿಕ್ಷಕರಿಗೆ ತಿಳಿಸಲಾಗಿದೆ’ ಎಂದರು.

ಹಿರೇಕೆರೂರಿನಲ್ಲಿ ಕ್ರಮೇಣ ಹೆಚ್ಚಳ: ಮಾನ್ಸೂನ್ ಆರಂಭದಲ್ಲಿ ಹಿರೇಕೆರೂರು ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದ್ದು, ಸದ್ಯ 81 ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.