ADVERTISEMENT

ಹಾವೇರಿ: ದುಡಿಯುವ ಕೈಗಳಿಗಿಲ್ಲ ಕೆಲಸ– ಬೀದಿಯಲ್ಲಿ ಹೆಣಗಾಟ

* ಸುಭಾಷ ವೃತ್ತದಲ್ಲಿ ನಿತ್ಯವೂ ಕಾರ್ಮಿಕರ ದಂಡು * ಕೂಲಿ ಸಿಕ್ಕರೆ ಖುಷಿ, ಸಿಗದಿದ್ದರೆ ಮನೆ ಕಡೆ ಮುಖ

ಸಂತೋಷ ಜಿಗಳಿಕೊಪ್ಪ
Published 14 ಜೂನ್ 2024, 6:29 IST
Last Updated 14 ಜೂನ್ 2024, 6:29 IST
ನಗರದ ಸುಭಾಷ ವೃತ್ತದ ರಸ್ತೆಯ ಬದಿ ಕೆಲಸಕ್ಕಾಗಿ ಕಾದು ನಿಂತಿದ್ದ ಕಾರ್ಮಿಕರು – ಪ್ರಜಾವಾಣಿ ಚಿತ್ರ – ಮಾಲತೇಶ ಇಚ್ಚಂಗಿ
ನಗರದ ಸುಭಾಷ ವೃತ್ತದ ರಸ್ತೆಯ ಬದಿ ಕೆಲಸಕ್ಕಾಗಿ ಕಾದು ನಿಂತಿದ್ದ ಕಾರ್ಮಿಕರು – ಪ್ರಜಾವಾಣಿ ಚಿತ್ರ – ಮಾಲತೇಶ ಇಚ್ಚಂಗಿ   

ಹಾವೇರಿ: ಹೆಗಲ ಮೇಲೆ ಟವಲು–ಕೈಯಲ್ಲಿ ಬುತ್ತಿಗಂಟು. ದಿನಗೆಲಸದ ನಿರೀಕ್ಷೆಯಲ್ಲಿ ಬೀದಿಯಲ್ಲಿ ಕಾಯುತ್ತ ನಿಲ್ಲುವ ಕಾರ್ಮಿಕರ ದಂಡು. ಕಟ್ಟಡ ನಿರ್ಮಾಣದ ಮೇಸ್ತ್ರಿಯೊಬ್ಬ ಬೈಕ್ ಮೇಲೆ ಸ್ಥಳಕ್ಕೆ ಬರುತ್ತಿದ್ದಂತೆ ಸುತ್ತುವರಿಯುವ ಕಾರ್ಮಿಕರು. ಕೂಲಿ ಹೊಂದಿಸಿಕೊಂಡು ಇಬ್ಬರನ್ನಷ್ಟೇ ಮೇಸ್ತ್ರಿ ಕರೆದೊಯ್ಯುತ್ತಿದ್ದಂತೆ, ಸಪ್ಪೆ ಮುಖ ಮಾಡಿ ಬೇಸರದಿಂದ ಹಿಂದೆ ಸರಿದು ಪುನಃ ಕಾಯುವುದು.

ನಗರದ ಸುಭಾಷ ವೃತ್ತದಲ್ಲಿ ನಿತ್ಯವೂ ಕಾಣಸಿಗುವ ದೃಶ್ಯವಿದು. ದಿನದ ದುಡಿಮೆಯಲ್ಲಿ ಬದುಕು ಕಟ್ಟಿಕೊಳ್ಳಲು ನೂರಾರು ಕಾರ್ಮಿಕರು ನಿತ್ಯವೂ ಸುಭಾಷ್ ವೃತ್ತದಲ್ಲಿ ಜಮಾಯಿಸಿ ಕೆಲಸಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಕೆಲಸ ಸಿಕ್ಕರೆ ಖುಷಿಯಿಂದ ದುಡಿದು ಮನೆಗೆ ಮರಳುತ್ತಾರೆ. ಕೆಲಸ ಇಲ್ಲದಿದ್ದರೆ, ಬಂದ ದಾರಿಗೆ ಸುಂಕವಿಲ್ಲವೆಂದು ಸಪ್ಪೆ ಮುಖದೊಂದಿಗೆ ಮನೆಗೆ ಮರಳುತ್ತಾರೆ.

ಹಾವೇರಿ ಹಾಗೂ ಗದಗ ಜಿಲ್ಲೆಗಳ ಗ್ರಾಮೀಣ ಭಾಗದ ಕಾರ್ಮಿಕರು, ಬಸ್, ರೈಲು, ಟಂಟಂ ಹಾಗೂ ಬೈಕ್‌ಗಳಲ್ಲಿ ನಗರದ ಸುಭಾಷ್ ವೃತ್ತಕ್ಕೆ ಧಾವಿಸಿ ಬರುತ್ತಾರೆ. ಕಟ್ಟಡ ನಿರ್ಮಾಣ, ಉದ್ಯಾನ ಸ್ವಚ್ಛತೆ, ಮಣ್ಣು ಸಾಗಣೆ, ಪಾಯ ತೊಡುವ, ಹಳೇ ಮನೆಗಳ ತೆರವು... ಹೀಗೆ ದಿನಗೂಲಿಯಾಗಿ ದುಡಿದ ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಅನೇಕ ವರ್ಷಗಳಿಂದ ಸುಭಾಷ ವೃತ್ತವು ದಿನಗೂಲಿ ಕಾರ್ಮಿಕರು ನೆರೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಗುಂಪು ಗುಂಪಾಗಿ ನಿಲ್ಲುವ ಕಾರ್ಮಿಕರು, ಅವರಿವರ ಬಳಿ ಕೆಲಸಕ್ಕಾಗಿ ವಿಚಾರಿಸುವ ದೃಶ್ಯಗಳು ಸಾಮಾನ್ಯವಾಗಿವೆ. ಕಾರ್ಮಿಕರ ಪೈಕಿ ಹಲವರು, ಎಸ್ಸೆಸ್ಸೆಲ್ಸಿ, ಐಟಿಐ, ಪಿಯುಸಿ ಮಾಡಿದವರಿದ್ದಾರೆ. ಕೆಲವರು, ಪದವೀಧರರೂ ಇದ್ದಾರೆ.

‘ಹಾವೇರಿ ಜಿಲ್ಲೆ ಸಾಕಷ್ಟು ಹಿಂದುಳಿದಿದೆ. ಗ್ರಾಮಗಳಲ್ಲಿ ಹೆಚ್ಚು ಕೆಲಸ ಸಿಗುತ್ತಿಲ್ಲ. ಕೂಲಿಯೂ ಸಾಲುವುದಿಲ್ಲ. ಅನಿವಾರ್ಯವಾಗಿ ಸುಭಾಷ್ ವೃತ್ತಕ್ಕೆ ಬಂದು ನಿತ್ಯವೂ ಕೆಲಸಕ್ಕಾಗಿ ಹೆಣಗಾಡುತ್ತಿದ್ದೇವೆ’ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಾರೆ.

ವಾರದಲ್ಲಿ ಎರಡು ದಿನ ಕೆಲಸ ಸಿಕ್ಕರೆ ಹೆಚ್ಚು: ‘ನಮಗೆ ಹೊಲ ಇಲ್ಲ. ಹಳ್ಳಿಯಲ್ಲಿ ಅವರಿವರ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ಕಳೆದ ಮಳೆಗಾಲ ಕೈ ಕೊಟ್ಟಿದ್ದರಿಂದ, ಬರಗಾಲ ಬಂತು. ದುಡಿಯಲು ಕೆಲಸ ಸಿಗದಂತಾಯಿತು. ಅಂದಿನಿಂದಲೇ ಹಾವೇರಿಗೆ ಬಂದು ಸುಭಾಷ್‌ ವೃತ್ತದಲ್ಲಿ ನಿಂತು ಕೆಲಸಕ್ಕಾಗಿ ಹುಡುಕಾಡುತ್ತಿದ್ದೇವೆ’ ಎಂದು ಯಲವಿಗಿ ಕಾರ್ಮಿಕ ರಾಮಪ್ಪ ಹೇಳಿದರು.

‘ನಮ್ಮಂಥೆಯೇ ಹಾವೇರಿ ಜಿಲ್ಲೆಯ ಹಲವು ಹಳ್ಳಿಗಳ ಕಾರ್ಮಿಕರು ಇಲ್ಲೀಗೆ ಬರುತ್ತಾರೆ. ಮೇಸ್ತ್ರಿಗಳು, ಗೌಂಡಿಗಳು, ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು, ಕಾರ್ಮಿಕರನ್ನು ಮಾತನಾಡಿಸಿ ಕೂಲಿ ನಿಗದಿಪಡಿಸಿ ಕರೆದೊಯ್ಯುತ್ತಾರೆ. ಇಲ್ಲದಿದ್ದರೆ, ಗುತ್ತಿಗೆ ಹೊಂದಿಸಿಕೊಂಡು ಗುಂಪು ಗುಂಪಾಗಿ ಕಾರ್ಮಿಕರು ಕೆಲಸಕ್ಕೆ ಹೋಗುತ್ತಾರೆ. ಆದರೆ, ಈಗ ಸುಭಾಷ ವೃತ್ತಕ್ಕೆ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ವಾರದಲ್ಲಿ ಎರಡು ದಿನ ಮಾತ್ರ ಕೆಲಸ ಸಿಗುತ್ತಿದೆ. ಉಳಿದಂತೆ ಐದು ದಿನ ವೃತ್ತದಲ್ಲಿಯೇ ಕಾದು, ಊರಿಂದ ತಂದ ಬುತ್ತಿಯನ್ನು ರಸ್ತೆಯಲ್ಲೇ ತಿಂದು ವಾಪಸು ಮನೆಗೆ ಹೋಗುವ ಸ್ಥಿತಿ ಇದೆ’ ಎಂದು ಬೇಸರದಿಂದ ಹೇಳಿದರು.

ಬಂಕಾಪುರದ ಸೋಮಪ್ಪ ಅವರು ‘ಊರಿನಲ್ಲಿ ಬಿತ್ತನೆ ಮುಗಿದಿದ್ದು, ಸದ್ಯ ಕೆಲಸವಿಲ್ಲ. ಕುಟುಂಬ ಸಾಗಿಲು ದುಡಿಯಲೇ ಬೇಕು. ಕೆಲಸ ಹುಡುಕಿಕೊಂಡು ನಿತ್ಯವೂ ಸುಭಾಷ ವೃತ್ತಕ್ಕೆ ಬರುತ್ತೇನೆ. ಕೆಲಸ ಸಿಕ್ಕರೆ ಮಾಡುತ್ತೇನೆ. ಇಲ್ಲದಿದ್ದರೆ, ಬರಿಗೈಲಿ ವಾಪಸು ಹೋಗುತ್ತೇನೆ’ ಎಂದು ತಿಳಿಸಿದರು.

‘ದಿನಕ್ಕೆ ₹500ರಿಂದ ₹600 ಕೂಲಿ ಸಿಗುತ್ತದೆ. ಕೆಲಸ ಹೆಚ್ಚು ಮಾಡಿದರೆ, ಕೆಲವರು ಖುಷಿಯಿಂದ ಹೆಚ್ಚು ಕೂಲಿ ನೀಡುತ್ತಾರೆ. ಕೆಲವರು, ನಿಗದಿತ ಕೂಲಿ ನೀಡಲು ಸತಾಯಿಸುತ್ತಾರೆ. ಕೆಲವರು, ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಘಟನೆಗಳೂ ನಡೆದಿವೆ’ ಎಂದು ಅಳಲು ತೋಡಿಕೊಂಡರು.

ಹುರುಳಿಕುಪ್ಪಿಯ ಕಾರ್ಮಿಕ ಚಂದ್ರು, ‘ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಊರಲ್ಲಿ ಕೆಲಸ ನಡೆಯುತ್ತಿದೆ. ಆದರೆ, ನಮಗೆ ಕಾರ್ಡ್ ಕೊಟ್ಟಿಲ್ಲ. ಸ್ಥಳೀಯ ಮುಖಂಡರು, ತಮ್ಮವರಿಗೆ ಮಾತ್ರ ಕಾರ್ಡ್ ಕೊಟ್ಟಿದ್ದಾರೆ. ಹೀಗಾಗಿ, ಅಲ್ಲಿಯೂ ಕೆಲಸವಿಲ್ಲ’ ಎಂದು ದೂರಿದರು.

ಕೈಗಾರಿಕೆಗಳೂ ಮರೀಚಿಕೆ: ‘ಹಾವೇರಿ ಜಿಲ್ಲೆಯ ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಮುಂಗಾರು ಕೈಕೊಟ್ಟರೆ, ಅನ್ನಕ್ಕೂ ಪರದಾಟ ಶುರುವಾಗುತ್ತದೆ. ಕಳೆದ ಬರಗಾಲದಿಂದ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸುಭಾಷ್ ವೃತ್ತಕ್ಕೆ ಬಂದು ಹೋಗುತ್ತಿರುವುದರಿಂದ ವಾರಕ್ಕೆ ಎರಡು ದಿನವಾದರೂ ಕೆಲಸ ಸಿಕ್ಕು, ಮನೆ ನಡೆಯುತ್ತಿದೆ’ ಎಂದು ಯಲವಿಗಿ ಕಾರ್ಮಿಕ ಮಾಲತೇಶ ಹೇಳಿದರು.

‘ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಇವೆ. ಆದರೆ, ನಮ್ಮ ಹಾವೇರಿಯಲ್ಲಿ ಬೃಹತ್ ಕೈಗಾರಿಕೆಗಳು ಇಲ್ಲ. ಇದರಿಂದಾಗಿ, ಜನಸಂಖ್ಯೆಗೆ ತಕ್ಕಂತೆ ಕೆಲಸಗಳು ಸಿಗುತ್ತಿಲ್ಲ. ನಮ್ಮನ್ನು ಆಳುವ ಜನರೂ ನಮ್ಮ ಗೋಳು ಕೇಳುತ್ತಿಲ್ಲ’ ಎಂದು ಅವರು ದೂರಿದರು.

‘ನಮಗೆ ರಾಜಕೀಯ ಗೊತ್ತಿಲ್ಲ. ಪ್ರತಿಭಟನೆ, ಹೋರಾಟದ ಗೋಜು ಬೇಕಿಲ್ಲ. ದಿನವೂ ಕೆಲಸ ಸಿಕ್ಕರೆ ಅದುವೇ ನೆಮ್ಮದಿ. ಬೆಳಿಗ್ಗೆ ಎದ್ದಕೂಡಲೇ ಕೆಲಸಕ್ಕಾಗಿಯೇ ದೇವರ ಬಳಿ ಬೇಡಿಕೊಂಡು, ಮನೆಯಿಂದ ಹೊರಡುತ್ತೇವೆ’ ಎಂದು ಮಾಲತೇಶ ಹೇಳಿದರು.

ದುಡಿಮೆ ನಂಬಿ ಬದುಕುತ್ತಿದ್ದೇವೆ. ಬಿತ್ತನೆ ಮುಗಿದಿದ್ದರಿಂದ ಸದ್ಯ ಹೊಲಗಳಲ್ಲಿ ಕೆಲಸವಿಲ್ಲ. ಹೀಗಾಗಿ ಹಾವೇರಿಗೆ ನಿತ್ಯವೂ ಬಂದು ಕೆಲಸಕ್ಕಾಗಿ ಬೀದಿಯಲ್ಲಿ ನಿಂತು ಕಾಯುತ್ತಿದ್ದೇವೆ

–ಸಿದ್ದಪ್ಪ ಮಲ್ಲೂರು ನಾಜಿಕ್‌ ಲಕಮಾಪುರ

ಸುಭಾಷ ವೃತ್ತಕ್ಕೆ ಬಂದು ನಿಲ್ಲುತ್ತೇವೆ. ಯಾರಾದರೂ ಕರೆದುಕೊಂಡು ಹೋದರೆ ಕೆಲಸಕ್ಕೆ ಹೋಗುತ್ತೇವೆ. ಇಲ್ಲದಿದ್ದರೆ ಸಂಜೆಯವರೆಗೂ ಕಾದು ಊರಿಗೆ ವಾಪಸು ತೆರಳುತ್ತೇವೆ

–ರಾಜು ಕಲ್ಯಾಳ

‘ಕೆಲಸ ಸಿಗದಿದ್ದರೆ ಬೈಗುಳ’

‘ಹಾವೇರಿಗೆ ಕೆಲಸಕ್ಕೆ ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿ ಬರುತ್ತೇವೆ. ಹಾವೇರಿ ಎಂದರೆ ಕೆಲಸ ಹೆಚ್ಚು ಇರಬಹುದೆಂದು ಪತ್ನಿ ಹಾಗೂ ತಂದೆ–ತಾಯಿ ಅಂದುಕೊಳ್ಳುತ್ತಾರೆ. ಆದರೆ ಇಲ್ಲಿ ಕೆಲಸ ಸಿಗುವುದಿಲ್ಲ. ಬರಿಗೈಲಿ ಮನೆಗೆ ವಾಪಸು ಹೋದಾಗ ಅವರಿಂದ ಬೈಗುಳ ಕೇಳಿಸಿಕೊಳ್ಳಬೇಕು’ ಎಂದು ಕಾರ್ಮಿಕ ಮಾಲತೇಶ ಹೇಳಿದರು.

‘ಊರಲ್ಲೇ ಕೆಲಸ’

‘ಹಾವೇರಿ ಜಿಲ್ಲೆಯ ಹಲವರು ಕೆಲಸಕ್ಕಾಗಿ ದೂರದ ಬೆಂಗಳೂರು ಮಂಗಳೂರು ಉಡುಪಿ ಗೋವಾಗಳಿಗೆ ವಲಸೆ ಹೋಗುತ್ತಿದ್ದಾರೆ. ನಮಗೆ ಊರು ಮಕ್ಕಳು ತಂದೆ–ತಾಯಿ ಬಿಟ್ಟು ಹೋಗಲು ಮನಸ್ಸಿಲ್ಲ. ಹೀಗಾಗಿ ಕಷ್ಟವಾದರೂ ಸಿಕ್ಕ ಕೆಲಸಗಳನ್ನು ಮಾಡುತ್ತ ಇಲ್ಲಿಯೇ ಉಳಿದುಕೊಂಡಿದ್ದೇವೆ’ ಎಂದು ಕಬ್ಬೂರಿನ ಭೀಮಣ್ಣ ಹೇಳಿದರು.

‘ಸ್ಥಳೀಯರು ಪೊಲೀಸರಿಂದ ದೌರ್ಜನ್ಯ’

‘ಸುಭಾಷ ವೃತ್ತಕ್ಕೆ ನಿತ್ಯವೂ 100ರಿಂದ 200 ಕಾರ್ಮಿಕರು ಬರುತ್ತಾರೆ. ಮೇಸ್ತ್ರಿಗಳು ಗೌಂಡಿಗಳು ಗುತ್ತಿಗೆದಾರರು ಕಾರ್ಮಿಕರನ್ನು ಹುಡುಕಿಕೊಂಡು ಇದೇ ವೃತ್ತಕ್ಕೆ ಧಾವಿಸುತ್ತಾರೆ. ಹೀಗಾಗಿ ವೃತ್ತದಲ್ಲಿ ನಿತ್ಯವೂ ಜನಸಂದಣಿ ಇರುತ್ತದೆ. ಇದರಿಂದ ಕಿರಿಕಿರಿ ಆಗುತ್ತಿರುವುದಾಗಿ ಸ್ಥಳೀಯರು ಜಗಳ ಮಾಡುತ್ತಿದ್ದಾರೆ. ಜೊತೆಗೆ ವೃತ್ತದಲ್ಲಿ ನಿಲ್ಲದಂತೆ ಪೊಲೀಸರೂ ಎಚ್ಚರಿಕೆ ನೀಡಿ ದೌರ್ಜನ್ಯ ಎಸಗುತ್ತಿದ್ದಾರೆ. ಲಾಠಿ ಹಿಡಿದು ಕಾರ್ಮಿಕರನ್ನು ಚದುರಿಸುತ್ತಿದ್ದಾರೆ’ ಎಂದು ಕಾರ್ಮಿಕರು ದೂರಿದರು. ‘ಸುಭಾಷ ವೃತ್ತದ ಬದಲು ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಿಲ್ಲುವಂತೆ ಈ ಹಿಂದೆ ಪೊಲೀಸರು ಹೇಳಿದ್ದರು. ಅದರಂತೆ ಕೆಲದಿನ ಮೈದಾನದಲ್ಲಿ ನಿಲ್ಲುತ್ತಿದ್ದೆವು. ಆದರೆ ಒಂದೂ ದಿನವೂ ಕೆಲಸ ಸಿಗಲಿಲ್ಲ. ಹೀಗಾಗಿ ಪುನಃ ಸುಭಾಷ್ ವೃತ್ತಕ್ಕೆ ಬರುತ್ತಿದ್ದೇವೆ’ ಎಂದು ಹೇಳಿದರು. ‘ನಾವು ಯಾವುದೇ ಕಳ್ಳತನ ಮಾಡಲು ಬಂದಿಲ್ಲ. ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಬಂದಿದ್ದೇವೆ. ನಾವು ಬಡವರೆಂಬ ಕಾರಣಕ್ಕೆ ಈ ರೀತಿ ವರ್ತಿಸುತ್ತಿದ್ದಾರೆ. ನಮ್ಮ ಕೂಗು ಕೇಳುವವರೇ ಇಲ್ಲದಂತಾಗಿದೆ’ ಎಂದು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.