ಹಾವೇರಿ ಜಿಲ್ಲೆಯಲ್ಲಿ ಡೆಂಗಿ, ಜ್ವರ, ಮೈ ಕೈ ನೋವು, ಅತೀಸಾರ, ಟೈಪಾಯಿಡ್ ಹಾಗೂ ಇತರೆ ಅನಾರೋಗ್ಯ ಸಮಸ್ಯೆ ಪ್ರಕರಣ ಹೆಚ್ಚುತ್ತಿವೆ. ಹಾವೇರಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಚಿಕಿತ್ಸೆಗಾಗಿ ಬರುತ್ತಾರೆ. ಆಸ್ಪತ್ರೆಯ ಸೌಲಭ್ಯ, ವೈದ್ಯರ ಕೊರತೆ ಮತ್ತು ಆಸ್ಪತ್ರೆಗಳಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸರಣಿ ಇಲ್ಲಿದೆ.
ಹಾವೇರಿ: ಚೀಟಿ ಮಾಡಿಸಲು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುವ ಜನ. ಔಷಧಿಗಳ ಚೀಟಿ ಬರೆದು ಜನರನ್ನು ಜನೌಷಧಿ ಮಳಿಗೆಗೆ ಕಳುಹಿಸುವ ವೈದ್ಯರು. ಜಾಗದ ಕೊರತೆಯಿಂದ ಇಕ್ಕಟ್ಟಾದ ಸ್ಥಳದಲ್ಲೇ ತಪಾಸಣೆ ನಡೆಸುವ ತಜ್ಞರು. ಸಂದಣಿಯಲ್ಲೇ ಚಿಕಿತ್ಸೆ ಪಡೆವ ಜನ. ವಾರ್ಡ್ ಸಾಲದಿದ್ದರಿಂದ ಕಾರಿಡಾರ್‌ನಲ್ಲಿ ಬೆಡ್ ಮೇಲೆ ಮಲಗಿರುವ ರೋಗಿಗಳು.
ಹಾವೇರಿ ಜಿಲ್ಲಾಸ್ಪತ್ರೆಯ ಸದ್ಯದ ಸ್ಥಿತಿ ಇದು. ಇಲ್ಲಿಯ ನುರಿತ ವೈದ್ಯರ ಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಜಿಲ್ಲೆಯ ನಾನಾ ಪ್ರದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಆಸ್ಪತ್ರೆ ಹಲವು ಸೌಕರ್ಯಗಳಿಂದ ವಂಚಿತವಾಗಿದ್ದು, ಜಾಗದ ಸಮಸ್ಯೆ ಹೆಚ್ಚು ಕಾಡುತ್ತಿದೆ. ಸ್ವಚ್ಛತೆ ಕೊರತೆಯೂ ಎದ್ದು ಕಾಣುತ್ತಿದೆ.
‘ಡೆಂಗಿ ಹರಡದಂತೆ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ’ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆಯ ಜಿಲ್ಲಾ ಆಸ್ಪತ್ರೆಯೇ, ಅಸ್ವಚ್ಛತೆಯ ತಾಣವಾಗಿದೆ. ಹಳೇ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಜಿಲ್ಲಾಸ್ಪತ್ರೆ ಇದ್ದು, ಈ ಕಟ್ಟಡದ ಸುತ್ತಮುತ್ತಲಿನ ಪರಿಸರವೇ ರೋಗ–ರೋಜಿನಗಳಿಗೆ ಆಹ್ವಾನ ನೀಡುತ್ತಿದೆ.
ಜಿಲ್ಲಾಸ್ಪತ್ರೆ ಕಟ್ಟಡದ ಸುತ್ತಲಿನ ಚರಂಡಿಗಳು, ಹೂಳು ತುಂಬಿಕೊಂಡಿವೆ. ದುರ್ನಾತ ಬೀರುತ್ತಿವೆ. ಎಲ್ಲೆಂದರಲ್ಲಿ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಆಸ್ಪತ್ರೆಯೊಳಗೆ ನುಗ್ಗುತ್ತಿವೆ. ನಗರಸಭೆ ಸಿಬ್ಬಂದಿ ಕಾಟಾಚಾರಕ್ಕೆಂದು ಆಗಾಗ ಸ್ವಚ್ಛತೆ ಕೈಗೊಂಡು, ಮಾಯವಾಗುತ್ತಿದ್ದಾರೆ. ಜಿಲ್ಲಾಸ್ಪತ್ರೆಯವರು ಸಿಬ್ಬಂದಿ ಕೊರತೆಯಿಂದಾಗಿ ಆವರಣದ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ.
ಭಾನುವಾರ ರಜೆಯ ಮರುದಿನವಾದ ಸೋಮವಾರ ಹಾಗೂ ಗುರುವಾರ (ವಾರದ ಸಂತೆ ದಿನ) ಸುಮಾರು 2,000 ಜನರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಉಳಿದ ದಿನಗಳಲ್ಲಿ 1,500 ಜನರು ಆಸ್ಪತ್ರೆಗೆ ಬರುತ್ತಿದ್ದಾರೆ.
ಜಾಗದ ಕೊರತೆ: ಎರಡು ಅಂತಸ್ತಿನ ಕಟ್ಟಡದಲ್ಲಿ ಜಿಲ್ಲಾಸ್ಪತ್ರೆ ಇದೆ. ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿಯಲ್ಲಿ ವಿವಿಧ ವಿಭಾಗಗಳಿವೆ. ದಿನ ಕಳೆದಂತೆ ಸೇವೆಗಳು ಹೆಚ್ಚಾಗುತ್ತಿದ್ದು, ಜಾಗದ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಕೆಲ ಸೇವೆಗಳನ್ನು ಬೇರೆ ಕಟ್ಟಡಗಳಿಗೆ ವರ್ಗಾಯಿಸಬೇಕು ಎನ್ನುವ ಒತ್ತಾಯವೂ ಇದೆ.
‘ಆಸ್ಪತ್ರೆಯ ಜಾಗವನ್ನು ಹೇಗೆ ಬಳಕೆ ಮಾಡುತ್ತಿದ್ದೀರಾ? ಇಕ್ಕಟ್ಟಾದ ಜಾಗದಲ್ಲಿ ಕುಳಿತುಕೊಂಡು ವೈದ್ಯರು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಹ ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚನೆ ನೀಡಿದ್ದರು.ಇದಾದ ನಂತರವೂ ಆಸ್ಪತ್ರೆ ವಾತಾವರಣದಲ್ಲಿ ಸುಧಾರಣೆ ಕಂಡುಬಂದಿಲ್ಲ. ಕಾರಿಡಾರ್‌ನಲ್ಲಿ ಬೆಡ್ ಹಾಕಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಜಾಗದ ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿದೆ.
ಡೆಂಗಿ, ಜ್ವರ, ಅತೀಸಾರ, ಟೈಪಾಯಿಡ್, ಅಲರ್ಜಿ, ಗ್ಯಾಸ್ಟ್ರಿಕ್, ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಸೋಂಕು, ಕರುಳು ಬೇನೆ, ರಕ್ತಹೀನತೆ, ರಕ್ತ ಹೆಪ್ಪುಗಟ್ಟುವಿಕೆ, ಕಣ್ಣಿನ ಸೋಂಕು, ಬುದ್ಧಿಮಾಂದ್ಯತೆ ಸೇರಿದಂತೆ ಹಲವು ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಇಕ್ಕಟ್ಟಾದ ಜಾಗದಲ್ಲಿ ತಪಾಸಣೆಗೆ ಹೆಚ್ಚು ಸಮಯ ಹಿಡಿಯುತ್ತಿದ್ದು, ಇದರಿಂದಾಗಿ ಜನರು ಇಡೀ ದಿನ ಆಸ್ಪತ್ರೆಯಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ.
‘ಆಸ್ಪತ್ರೆಯ ಕಟ್ಟಡದ ಜಾಗವನ್ನು ವಿಭಾಗವಾರು ಹಂಚಿಕೆ ಮಾಡಲಾಗಿದೆ. ಡೆಂಗಿ, ಜ್ವರ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಇತ್ತೀಚೆಗೆ ಹೆಚ್ಚಿಗೆ ಬರುತ್ತಿವೆ. ಅವರೆಲ್ಲರಿಗೂ ಒಂದೇ ವಿಭಾಗದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು, ಬೇರೆ ವಿಭಾಗದ ವಾರ್ಡ್‌ಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. 330 ಹಾಸಿಗೆಯ ಆಸ್ಪತ್ರೆಯಲ್ಲಿ ಸದ್ಯ 380 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿಡಾರ್‌ನಲ್ಲೂ ಬೆಡ್ ಹಾಕುವ ಸ್ಥಿತಿ ಬಂದಿದೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.
ಕಟ್ಟಡದ ಒಂದು ಹಾಗೂ ಎರಡನೇ ಮಹಡಿಯಿಂದ ಜನರು ಕಸವನ್ನು ಹೊರಗೆ ಎಸೆಯುತ್ತಿದ್ದಾರೆ. ಇದರಿಂದಾಗಿಯೂ ಕಟ್ಟಡದ ಹೊರ ಭಾಗವೆಲ್ಲ ಗಲೀಜಾಗಿದೆ. ಎಲೆ– ಅಡಿಕೆ ಹಾಗೂ ತಂಬಾಕು ಉತ್ಪನ್ನ ತಿನ್ನುವವರೂ ಎಲ್ಲೆಂದರಲ್ಲಿ ಉಗುಳಿ ಗಲೀಜು ಮಾಡುತ್ತಿದ್ದಾರೆ. ಹುಷಾರಿಲ್ಲದವರನ್ನು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಕರೆತರುವ ಆರೋಗ್ಯವಂತ ಜನರೂ ಅನಾರೋಗ್ಯಕ್ಕೆ ತುತ್ತಾಗುವ ಆತಂಕವೂ ಹೆಚ್ಚಾಗಿದೆ. ಜೊತೆಗೆ, ಆಸ್ಪತ್ರೆಯ ಅಸ್ವಚ್ಛತೆಗೆ ಕೆಲ ಜನರ ವರ್ತನೆಯೂ ಕಾರಣವಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿ ಕಸದ ಬುಟ್ಟಿ ಇರಿಸಲಾಗಿದ್ದು, ಅದರಲ್ಲಿ ಬಹುತೇಕರು ಕಸ ಹಾಕುವುದಿಲ್ಲ. ಬದಲಿಗೆ ಎಲ್ಲೆಂದರಲ್ಲಿ ಎಸೆದು, ಗಲೀಜು ಉಂಟಾಗಲು ಕಾರಣವಾಗುತ್ತಿದ್ದಾರೆ.
ಜನೌಷಧಿ ಮಳಿಗೆಯಲ್ಲಿ ಸಂದಣಿ: ಜಿಲ್ಲಾಸ್ಪತ್ರೆಯಲ್ಲಿ ಕೆಲ ಔಷಧಿಗಳ ಕೊರತೆ ಕಂಡುಬರುತ್ತಿದೆ. ತಪಾಸಣೆ ನಡೆಸುವ ವೈದ್ಯರು, ಚೀಟಿ ಬರೆದುಕೊಂಡು ಜನೌಷಧಿ ಮಳಿಗೆಗೆ ಕಳುಹಿಸುತ್ತಿದ್ದಾರೆ. ಹೀಗಾಗಿ, ಮಳಿಗೆಯಲ್ಲೂ ಜನರು ಸರದಿಯಲ್ಲಿ ನಿಂತು ಔಷಧಿ ಖರೀದಿಸುವ ದೃಶ್ಯಗಳು ನಿತ್ಯವೂ ಕಂಡುಬರುತ್ತಿವೆ.
‘ಬಡವರು ಹಾಗೂ ಮಧ್ಯಮ ವರ್ಗದ ಬಹುಪಾಲು ಜನರು, ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಚೀಟಿ ಮಾಡಿಸುವ ಉದ್ದೇಶದಿಂದ ನಸುಕಿನಲ್ಲೇ ಆಸ್ಪತ್ರೆ ನೋಂದಣಿ ವಿಭಾಗಕ್ಕೆ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಎರಡ್ಮೂರು ಗಂಟೆಗಳ ಬಳಿಕ ಚೀಟಿ ಪಡೆದುಕೊಂಡು ಸಂಬಂಧಪಟ್ಟ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು, ಔಷಧಿಗಾಗಿ ಪುನಃ ಜನೌಷಧಿ ಮಳಿಗೆ ಎದುರು ಸರದಿಯಲ್ಲಿ ನಿಲ್ಲುತ್ತಿದ್ದಾರೆ’ ಎಂದು ಆಲದಕಟ್ಟಿಯ ರಾಮಣ್ಣ ಹೇಳುತ್ತಾರೆ.
‘ಗುಣಮಟ್ಟದ ಚಿಕಿತ್ಸೆ: ಅಂದಾಜಿಗಿಂತ ಹೆಚ್ಚು ಜನ’
‘ಸೌಕರ್ಯಗಳ ಕೊರತೆ ಹೊರತುಪಡಿಸಿದರೆ ಆರೋಗ್ಯ ಸೇವೆಗಳಲ್ಲಿ ಜಿಲ್ಲಾಸ್ಪತ್ರೆ ಮುಂಚೂಣಿಯಲ್ಲಿದೆ. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ ಅವರ ನೇತೃತ್ವದಲ್ಲಿ ಆಸ್ಪತ್ರೆಯು ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. ನುರಿತ ವೈದ್ಯರು ಹಾಗೂ ಶುಶ್ರೂಷಕಿಯರ ಆರೈಕೆ ಕ್ರಮಗಳಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಲಭ್ಯವಿರುವ ಸೌಲಭ್ಯಗಳಲ್ಲಿ ಕೊರತೆ ಕಂಡುಬರುತ್ತಿದೆ’ ಎಂದು ವೈದ್ಯರೊಬ್ಬರು ಹೇಳಿದರು. ‘ಅಂದಾಜಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸ್ಪತ್ರೆಗೆ ಬರುತ್ತಿರುವುದರಿಂದ ಸೌಲಭ್ಯಗಳಲ್ಲಿ ಏರುಪೇರು ಆಗುತ್ತಿದೆ. ಇರುವ ಸೌಲಭ್ಯಗಳನ್ನೇ ಸದ್ಬಳಕೆ ಮಾಡಿಕೊಂಡು ಸೇವೆ ಮುಂದುವರಿಸಲಾಗಿದೆ. ಕೆಲ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಆಗಾಗ ಪ್ರಸ್ತಾವ ಸಲ್ಲಿಸಲಾಗುತ್ತಿದೆ. ಅವುಗಳ ಮಂಜೂರಾತಿ ವಿಳಂಬವಾಗುತ್ತಿದೆ’ ಎಂದರು.
ಜಿಲ್ಲಾಸ್ಪತ್ರೆಯ ಕಾರ್ಯನಿರತ–ಖಾಲಿ ಹುದ್ದೆ (ವಿವರ ಹುದ್ದೆ ಹೆಸರು;ಮಂಜೂರು;ಕಾರ್ಯನಿರತರು;ಖಾಲಿ ಹುದ್ದೆ)
ಜನರಲ್ ಸರ್ಜನ್: 4;3;1
ಒಬಿಜಿ ಸ್ಪೆಷಲಿಸ್ಟ್: 6;5;1
ನೇತ್ರತಜ್ಞರು: 3;1;2
ಸಾಮಾನ್ಯ ವೈದ್ಯಕೀಯ ಅಧಿಕಾರಿ: 20;1;19
ಸಾರ್ವಜನಿಕ ಆರೋಗ್ಯ ಅಧಿಕಾರಿ: 1;0;1
ಶುಶ್ರೂಷಕರು: 101;70;31
ನರ್ಸಿಂಗ್ ಸೂಪರಿಂಟೆಂಡೆಂಡ್: 5;0;5
ಫಾರ್ಮಾಸಿಸ್ಟ್: 6;2;4
ಎಫ್‌ಡಿಎ: 5;0;5
ಶಸ್ತ್ರಚಿಕಿತ್ಸೆ ಟೆಕ್ನಿಷಿಯನ್: 4;0;4
ಲೆಕ್ಕಾಧಿಕಾರಿ: 2;0;2
ಗ್ರೂಪ್ ಡಿ: 37;14;23
ಸ್ಯಾನಿಟರಿ ವರ್ಕರ್: 20;0;20
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿದೆ. ಆದರೆ ಆಸ್ಪತ್ರೆಯ ಆವರಣವೇ ಕಾಯಿಲೆಗಳ ತಾಣವಾಗಿದ್ದು ಸ್ವಚ್ಛತೆಗೆ ಒತ್ತು ನೀಡಬೇಕು.ಪ್ರಕಾಶ ದೇವಗಿರಿ, ನಿವಾಸಿ
ಮಗಳ ಹೆರಿಗೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಿಸಿದ್ದು ಚಿಕಿತ್ಸೆ ಚೆನ್ನಾಗಿದೆ. ಆದರೆ ವೈದ್ಯರ ತಪಾಸಣೆಗೆ ಗಂಟೆಗಟ್ಟಲೇ ಕಾಯಬೇಕು. ಆಗಾಗ ಔಷಧಿಗಳನ್ನು ಹೊರಗಡೆ ಬರೆದುಕೊಡುತ್ತಾರೆ.ಪಾರ್ವತಮ್ಮ ಮನ್ನಂಗಿ, ಹಾವೇರಿ
ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಕಟ್ಟಡದ ಮೂರನೇ ಮಹಡಿ ನಿರ್ಮಾಣ ಆಗುತ್ತಿದ್ದು ಸದ್ಯದಲ್ಲೇ ನಮಗೆ ಹಸ್ತಾಂತರವಾಗಲಿದೆ. ಹೊಸದಾಗಿ 70 ಬೆಡ್‌ಗಳು ಲಭ್ಯವಾಗಲಿವೆಡಾ.ಪಿ.ಆರ್. ಹಾವನೂರ, ಹಾವೇರಿ ಜಿಲ್ಲಾ ಶಸ್ತ್ರ ಚಿಕಿತ್ಸಕ
ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಜಾಗದ ಕೊರತೆಯಿಂದ ಬೆಡ್ ಹಾಕಲು ಸದ್ಯಕ್ಕೆ ಸಮಸ್ಯೆಯಾಗಿದೆ. ಕೆಲ ದಿನಗಳಲ್ಲಿ ಸೂಕ್ತ ವಾರ್ಡ್‌ನಲ್ಲಿಯೇ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು.ಅಕ್ಷಯ್ ಶ್ರೀಧರ, ಹಾವೇರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.