ಹಾವೇರಿ: ತಾಲ್ಲೂಕಿನ ನೆಗಳೂರು ಗ್ರಾಮದಲ್ಲಿ ಸೋಮವಾರ ಈದ್ ಮಿಲಾದ್ ಆಚರಿಸಿದ ಮುಸ್ಲಿಮರು, ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಿಂದೂ ಮುಖಂಡರು, ಮುಸ್ಲಿಂ ಮುಖಂಡರಿಗೆ ಪ್ರವಾದಿ ಮಹಮದ್ ಜನ್ಮ ದಿನೋತ್ಸವದ ಶುಭಾಶಯ ಕೋರಿದರು.
ಗಣೇಶ ಮೂರ್ತಿಯಿದ್ದ ಪೆಂಡಾಲ್‌ಗೆ ಬಂದ ಮುಸ್ಲಿಂ ಮುಖಂಡರನ್ನು ಸ್ವಾಗತಿಸಿದ ಗ್ರಾಮಸ್ಥರು, ಅವರ ಸಮ್ಮುಖದಲ್ಲಿ ಪೂಜೆ ಮಾಡಿ ಪ್ರಸಾದ ನೀಡಿದರು. ಪ್ರವಾದಿ ಮಹಮದ್‌ರ ಸಂದೇಶವುಳ್ಳ ಹಸಿರು ಧ್ವಜಗಳನ್ನು, ಗಣೇಶ ಮೂರ್ತಿಯ ಅಕ್ಕ–ಪಕ್ಕದಲ್ಲಿ ಕಟ್ಟಲಾಗಿತ್ತು. ಸರ್ವ ಧರ್ಮದ ಗಣೇಶ ಮೂರ್ತಿಯ ದೃಶ್ಯ ನಿರ್ಮಾಣವಾಗಿತ್ತು.
‘ನೆಗಳೂರಿನಲ್ಲಿ ಹಿಂದೂ–ಮುಸ್ಲಿಮರು, ಅಣ್ಣ–ತಮ್ಮಂದಿರಂತೆ ಬಾಳುತ್ತಿದ್ದೇವೆ. ಇಂದು ಪ್ರವಾದಿ ಮಹಮದ್‌ರ ಜನ್ಮದಿನ. ಈ ದಿನವನ್ನೂ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದ್ದೇವೆ’ ಎಂದು ಗ್ರಾಮದ ಮುಸ್ಲಿಂ ಮುಖಂಡರು ಹೇಳಿದರು.
ಗ್ರಾಮದ ಪ್ರಮುಖರಾದ ಗೌಸಸಾಬ್ ಬಲ್ಲಭಾಯಿ, ಬಿ.ಪಿ. ದೊಡ್ಡ ಪಿಂಜಾರ್, ರಜಾಕ್ ಸಾಬ್ ಮುಲ್ಲಾ , ಹುಸೇನ್ ಸಾಬ್ ರಾಟಿಮನಿ , ದಸ್ತಗಿರ್ ಸಾಬ್ ಕಮಗಾಲ, ಹುಸೇನ್ ಸಾಬ್ ತೆಲಗಿ, ಗೌಸಸಾಬ್ ಮುಜಾವರ , ಈರಣ್ಣ ತಂಬೂರಿ, ಮೌನೇಶ್ ಮಾರೆಡ್ಡಿ, ಸಿದ್ದಪ್ಪ ಬಾಲಣ್ಣನವರ, ಬಸನಗೌಡ ಸುಕುಳಿ, ಶಿವಾನಂದ ಸೊಪ್ಪಿನ, ರುದ್ರಗೌಡ ರೊಡ್ಡ ಗೌಡರ , ಬರ್ಮಣ್ಣ ದೊಡ್ಡಿರಪ್ಪನವರ, ಸಂಜಯಗಾಂಧಿ ಸಂಜೀವಣ್ಣನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.