ADVERTISEMENT

ಹಾವೇರಿ: ಮಿತಿ ಮೀರಿದ ಮೀಟರ್ ಬಡ್ಡಿ ದಂದೆ

ಸಂತೋಷ ಜಿಗಳಿಕೊಪ್ಪ
Published 14 ಅಕ್ಟೋಬರ್ 2024, 5:34 IST
Last Updated 14 ಅಕ್ಟೋಬರ್ 2024, 5:34 IST
   

ಹಾವೇರಿ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮೀಟರ್ ಬಡ್ಡಿ ದಂದೆ ಜೋರಾಗಿ ನಡೆಯುತ್ತಿದೆ. ಕೆಲ ಜನಪ್ರತಿನಿಧಿಗಳು, ಪ್ರಭಾವಿಗಳು ಹಾಗೂ ಅವರ ಬೆಂಬಲಿಗರ ಪಡೆ, ರಾಜಾರೋಷವಾಗಿ ಮೀಟರ್ ಬಡ್ಡಿ ದಂದೆ ನಡೆಸುತ್ತಿದೆ. ಹಣಕಾಸಿನ ತುರ್ತು ಅಗತ್ಯಕ್ಕೆಂದು ಸಾಲ ಪಡೆಯುವ ಬೀದಿಬದಿಯ ವ್ಯಾಪಾರಿಗಳು, ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರು, ದಂದೆಕೋರರ ಸುಳಿಯಲಿ ಸಿಲುಕಿ ನಿತ್ಯವೂ ಕಣ್ಣೀರು ಹಾಕುತ್ತಿದ್ದಾರೆ.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಸವಣೂರು, ಶಿಗ್ಗಾವಿ, ಬ್ಯಾಡಗಿ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಅಕ್ರಮ ಲೇವಾದೇವಿಗಾರರು–ಫೈನಾನ್ಷಿಯರ್‌ಗಳು ಹುಟ್ಟಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೃಷಿಯೇ ಪ್ರಧಾನ ಕಸುಬು. ರೈತರು ಕೃಷಿ ಚಟುವಟಿಕೆಗಳಿಗಾಗಿ ತಮ್ಮ ಗ್ರಾಮ ಹಾಗೂ ಪಟ್ಟಣದಲ್ಲಿರುವ ಅಕ್ರಮ ಲೇವಾದೇವಿಗಾರರು–ಫೈನಾನ್ಷಿಯರ್‌ಗಳ ಕಡೆಗಳಿಂದ ಕೈಗಡ ಸಾಲ ಪಡೆಯುತ್ತಿದ್ದಾರೆ. ಫಸಲು ಬಂದ ಬಳಿಕ, ಬಡ್ಡಿ ಹಾಗೂ ಮೀಟರ್ ಬಡ್ಡಿ ರೂಪದಲ್ಲಿ ಹಣ ವಾಪಸು ಕೊಟ್ಟು ಉಳಿದ ಅಲ್ಪ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಬೀದಿಬದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರು, ದಿನದ ದುಡಿಮೆ ನಂಬಿ ಬದುಕುವವರು ಹಾಗೂ ಸಣ್ಣ–ಪುಟ್ಟ ವ್ಯಾಪಾರ ಮಾಡುತ್ತಿರುವ ಬಹುತೇಕರು, ಮೀಟರ್ ಬಡ್ಡಿ ದಂದೆಯ ಸುಳಿಗೆ ಸಿಲುಕುತ್ತಿದ್ದಾರೆ. ಇಂಥ ಅಮಾಯಕ ಜನರನ್ನೇ ಬಂಡವಾಳ ಮಾಡಿಕೊಂಡಿರುವ ಮೀಟರ್ ಬಡ್ಡಿ ದಂದೆಕೋರರು, ಸಾಲಕ್ಕೆ ಸಮವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆ.

ADVERTISEMENT

ಬಡ್ಡಿ ನೀಡದಿದ್ದರೆ, ಅಂಥವರನ್ನು ಹೆದರಿಸಿ, ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಮಾನಕ್ಕೆ ಅಂಜುವ ಬಡವರು, ದಂದೆಕೋರರು ಕೇಳಿದಷ್ಟು ಬಡ್ಡಿ ಕಟ್ಟುತ್ತಿದ್ದಾರೆ. ಕೆಲವರು, ಬಡ್ಡಿ ಕಟ್ಟಿದರೂ ಇನ್ನು ಕಟ್ಟಬೇಕೆಂದು ದಂದೆಕೋರರು ಬೇಡಿಕೆ ಇರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪಡೆದ ಸಾಲ ಹಾಗೂ ಬಡ್ಡಿ ಎರಡೂ ಬೇಗನೇ ತೀರುತ್ತಿಲ್ಲವೆಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರದಿಂದ ಮಾನ್ಯತೆ ಪಡೆದ ಲೇವಾದೇವಿಗಾರರು ಹಾಗೂ ಫೈನಾನ್ಷಿಯರ್‌ಗಳು ಮಾತ್ರ ಬಡ್ಡಿ ವ್ಯವಹಾರ ಮಾಡಲು ಅವಕಾಶವಿದೆ. ಸರ್ಕಾರ ನಿಗದಿಪಡಿಸಿರುವ ಬಡ್ಡಿ ಮಾತ್ರ ವಿಧಿಸಬಹುದಾಗಿದೆ. ನಿಯಮ ಮೀರಿದರೆ, ಮಾನ್ಯತೆ ರದ್ದು ಮಾಡುವ ಅಧಿಕಾರವೂ ಸರ್ಕಾರಕ್ಕೆ ಇದೆ. ‌

₹ 1 ಸಾವಿರಕ್ಕೆ ವಾರಕ್ಕೆ ₹100 ಬಡ್ಡಿ: ‘ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ. ತರಕಾರಿ ಖರೀದಿ ಮಾಡಲು ನಿತ್ಯವೂ ಹಣ ಬೇಕು. ಹೀಗಾಗಿ, ಸಾಲ ಪಡೆದುಕೊಳ್ಳುತ್ತೇನೆ. ಅದೇ ಹಣದಲ್ಲಿ ತರಕಾರಿ ಖರೀದಿಸಿ ಮಾರಾಟ ಮಾಡಿ ಹಣ ಸಂಪಾದಿಸುತ್ತೇನೆ’ ಎಂದು ಹಾನಗಲ್ ಪಟ್ಟಣದ ವ್ಯಾಪಾರಿ ರಫೀಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮೂರಿನಲ್ಲಿ ವ್ಯಕ್ತಿಯೊಬ್ಬರಿಂದ ಸಾಲ ಪಡೆದುಕೊಂಡು, ಮೀಟರ್ ಬಡ್ಡಿ ಕಟ್ಟುತ್ತಿದ್ದೇನೆ. ಆತ, ₹ 1 ಸಾವಿರಕ್ಕೆ ವಾರಕ್ಕೆ ₹ 100 ಬಡ್ಡಿ ವಿಧಿಸುತ್ತಿದ್ದಾನೆ. ನನಗೂ ವ್ಯಾಪಾರಕ್ಕೆ ಹಣ ಬೇಕು. ಅನಿವಾರ್ಯವಾಗಿ ಮೀಟರ್ ಬಡ್ಡಿ ಪಡೆಯುತ್ತಿದ್ದೇನೆ. ಕೆಲವು ಬಾರಿ ಮೀಟರ್ ಬಡ್ಡಿ ವಿಚಾರವಾಗಿ ಗಲಾಟೆ ಆಗಿದೆ. ಕೆಲ ಹುಡುಗರನ್ನು ಮನೆ ಬಳಿ ಕಳುಹಿಸಿ, ಬೆದರಿಸಿದ್ದರು’ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು: ಗ್ರಾಮೀಣ ಪ್ರದೇಶಗಳಲ್ಲಿ ಈ ದಂದೆ ಹೆಚ್ಚಿದೆ. ಮೀಟರ್ ಬಡ್ಡಿ ನಡೆಸುವವರ ಕಿರುಕುಳದಿಂದ, ಹಲವರು ಮನೆ ಬಿಟ್ಟು ಹೋಗಿದ್ದಾರೆ. ತಡಸ ಗ್ರಾಮದಲ್ಲಿ ಮಹ್ಮದಸಾಹೀದ್ ಮೌಲಾಸಾಬ ಮೀಟಾಯಿಗಾರ (37) ಎಂಬುವವರು ಕಳೆದ ತಿಂಗಳಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಸಾಲ ಪಡೆದುಕೊಂಡಿದ್ದ ಮಹ್ಮದ್‌ಸಾಹೀದ್ ಅವರು, ಬಡ್ಡಿ ಕಟ್ಟಿ ಬೇಸತ್ತಿದ್ದರು. ಎಷ್ಟೇ ಹಣ ನೀಡಿದರೂ ಸಾಲ ತೀರಿಲ್ಲವೆಂದು ಫೈನಾನ್ಷಿ

ಯರ್‌ ಹೇಳಿದ್ದ. ಇದರಿಂದ ಬೇಸತ್ತ ಮಹ್ಮದ್‌ಸಾಹೀದ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಸ್ಥಳೀಯರು ಹೇಳಿದರು.

‘ಮಹ್ಮದ್‌ಸಾಹೀದ್ ಆತ್ಮಹತ್ಯೆ ಸಂಬಂಧ 11 ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಪ್ರಕರಣದ ತನಿಖೆ ಎಲ್ಲಿಗೆ ಬಂದಿದೆ ಎಂಬುದು ಗೊತ್ತಾಗಿಲ್ಲ. ಈ ಘಟನೆ ಬಳಿಕ ಕಡಿಮೆಯಾಗಿದ್ದ ಬಡ್ಡಿ ದಂದೆ, ಈಗ ಪುನಃ ಚಿಗುರುತ್ತಿದೆ. ಕೆಲ ಪ್ರಭಾವಿಗಳು ಹಾಗೂ ಕೆಲ ಜನಪ್ರತಿನಿಧಿಗಳು, ಅಕ್ರಮ ಬಡ್ಡಿ ದಂದೆಗೆ ಸಾಥ್ ನೀಡುತ್ತಿದ್ದಾರೆ. ಇದರಿಂದಲೇ ಅಮಾಯಕರು ಬಡ್ಡಿ ಕಟ್ಟಿ ಕಟ್ಟಿ ಬೇಸತ್ತು ಹೋಗುತ್ತಿದ್ದಾರೆ’ ಎಂದು ದೂರಿದರು.

ಮೀಟರ್ ಬಡ್ಡಿ ದರದಲ್ಲಿ ಸಾಲ ನೀಡುವ ಸಾಕಷ್ಟು ಅಕ್ರಮ ಲೇವಾದೇವಿಗಾರರು ಹಾಗೂ ಕಂಪನಿಗಳು, ಸಾಲಗಾರರಿಂದ ಅಕ್ರಮವಾಗಿ ಬಡ್ಡಿ ವಸೂಲಿ ಮಾಡುತ್ತಿವೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಜಾಹೀರಾತು ನೀಡಿ ಗ್ರಾಹಕರನ್ನು ವಂಚಿಸುವ ಕೆಲಸವೂ ನಡೆಯುತ್ತಿದೆ.

‘ಸಣ್ಣ ವ್ಯಾಪಾರಸ್ಥರು ಬೆಳಿಗ್ಗೆ ಸಾಲ ಪಡೆದು, ಬಡ್ಡಿ ಸಮೇತ ಸಂಜೆಯೇ ಹಣ ಪಾವತಿ ಮಾಡುತ್ತಿದ್ದಾರೆ. ಇಂಥ ವ್ಯಾಪಾರಸ್ಥರಿಂದಲೇ ಮೀಟರ್ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಇದರಿಂದಾಗಿ ದುಡಿದ ಹಣವೆಲ್ಲವೂ ಬಡ್ಡಿಗೆ ಹೋಗುತ್ತಿದೆ’ ಎಂದು ತರಕಾರಿ ವ್ಯಾಪಾರಿ ಶಹಾಬುದ್ದೀನ್‌ ಹೇಳಿದರು.

‘ಮೀಟರ್ ಬಡ್ಡಿ ಸಾಲವನ್ನು ತೀರಿಸಲಾಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮೀಟರ್ ಬಡ್ಡಿ ದಂದೆಕೋರರ ಕಿರುಕುಳ ತಾಳಲಾರದೆ ಕೆಲವರು, ಠಾಣೆ ಮೆಟ್ಟಿಲೇರುತ್ತಿರುವ ಪ್ರಕರಣಗಳು ನಡೆಯುತ್ತಿವೆ’ ಎಂದರು.

ಮಾಹಿತಿ ನೀಡಿದರೆ ಕ್ರಮದ ಭರವಸೆ

‘ಮೀಟರ್ ಬಡ್ಡಿ ದಂದೆಯನ್ನು ಸಹಿಸುವುದಿಲ್ಲ. ದಂದೆಯಲ್ಲಿ ತೊಡಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದರೆ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹಾವೇರಿ ಜಿಲ್ಲಾ ಎಸ್ಪಿ ಅಂಶುಕುಮಾರ್ ತಿಳಿಸಿದರು.

‘ಜಿಲ್ಲೆಯಲ್ಲಿ ಹೆಚ್ಚಾಗಿರುವ ಮೀಟರ್ ಬಡ್ಡಿ ದಂದೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಜನರಿಗೆ ಸಾಲ ಕೊಡುತ್ತಿರುವ ಕೆಲವರು, ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಆಗಾಗ ಮಾಹಿತಿ ಬರುತ್ತಿದೆ. ಇಂಥ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು. ‘ಕೆಲವರು, ಸಾಲಕ್ಕೆ ತಕ್ಕಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇಂಥ ದಂದೆ ಹಾಗೂ ದಂದೆಕೋರರ ಬಗ್ಗೆ ಜನರು ಠಾಣೆಗೆ ದೂರು ನೀಡಬೇಕು. ಅಥವಾ ನನಗೆ ನೇರವಾಗಿ ದೂರು ನೀಡಬಹುದು. ಜನರು ಸಹಕಾರ ನೀಡಿದರೆ, ಮೀಟರ್ ಬಡ್ಡಿ ದಂದೆ ಮಟ್ಟಹಾಕಬಹುದು’ ಎಂದು ಹೇಳಿದರು.

‘ಮುಖಂಡರು– ಪೊಲೀಸರಿಂದ ರಾಜಿ’

‘ಮೀಟರ್ ಬಡ್ಡಿ ದಂದೆ ವಿರುದ್ಧ ಕೆಲ ಸಾಲಗಾರರು, ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಗ್ರಾಮಗಳ ಮುಖಂಡರು, ಪೊಲೀಸರ ಜೊತೆಗೆ ಸೇರಿ ರಾಜಿ ಪಂಚಾಯಿತಿ ಮಾಡುತ್ತಿದ್ದಾರೆ. ಇದರಿಂದಾಗಿ ಬಡ್ಡಿ ದಂದೆಗೆ ಕಾನೂನಿನಲ್ಲಿ ಲಗಾಮು ಬೀಳುತ್ತಿಲ್ಲ’ ಎಂದು ಹಿರೇಕೆರೂರಿನ ನಿವಾಸಿ ಚಂದ್ರಶೇಖರ್ ಹೇಳಿದರು. ‘ಜನಪರ ಎಂದು ಹೇಳಿಕೊಳ್ಳುವ ಮುಖಂಡರು, ಅಕ್ರಮ ಲೇವಾದೇವಿಗಾರರು ಹಾಗೂ ಫೈನಾನ್ಷಿಯರ್‌ಗಳ ಜೊತೆ ಕೈ ಜೋಡಿಸುತ್ತಿದ್ದಾರೆ. ತಮ್ಮ ಹಣವನ್ನೂ ಅವರಿಗೆ ಕೊಟ್ಟು, ತೆರೆಮರೆಯಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ದಂದೆ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ, ತಾವೇ ರಾಜಿ ಪಂಚಾಯಿತಿ ಮಾಡುತ್ತಿದ್ದಾರೆ’ ಎಂದು ದೂರಿದರು.

‘ದಿನದ ಲೆಕ್ಕದಲ್ಲಿ ಬಡ್ಡಿ: ಪೊಲೀಸರ ಕಾರ್ಯಾಚರಣೆ ಅಗತ್ಯ’

‘ಹಾವೇರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಾಲಕ್ಕೆ ದಿನದ ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ₹1,000ಕ್ಕೆ ದಿನಕ್ಕೆ ₹ 50 ಪಡೆಯಲಾಗುತ್ತಿದೆ. ಈ ದಂದೆ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಬೇಕಾದ ಅಗತ್ಯವಿದೆ’ ಎಂದು ಹಾವೇರಿಯ ಹೋಟೆಲ್ ವ್ಯಾಪಾರಿ ನಾರಾಯಣ ಆಗ್ರಹಿಸಿದರು. ‘ನಾನು ಸಹ ಮೊದಲಿಗೆ ಮೀಟರ್ ಬಡ್ಡಿಯಲ್ಲಿ ಹಣ ತೆಗೆದುಕೊಂಡು, ಹೋಟೆಲ್‌ ನಡೆಸುತ್ತಿದ್ದೆ. ಕೆಲ ತಿಂಗಳ ಹಿಂದೆ ದೊಡ್ಡ ಜಗಳವಾಯಿತು. ರಾಜಿ ಮಾಡಿದ ನಂತರ, ಸಾಲಕ್ಕೆ ತಕ್ಕಷ್ಟು ಬಡ್ಡಿ ನೀಡಿ ಕೈ ತೊಳೆದುಕೊಂಡೆ. ಈಗ, ಮೀಟರ್ ಬಡ್ಡಿ ಸಹವಾಸಕ್ಕೆ ಹೋಗುವುದಿಲ್ಲ. ಇದ್ದ ಹಣದಲ್ಲಿಯೇ ವ್ಯಾಪಾರ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ’ ಎಂದರು.

ಪೂರಕ ಮಾಹಿತಿ: ಮುಕ್ತೇಶ್ವರ ಕೂರಗುಂದಮಠ, ಪ್ರಮೀಳಾ ಹುನುಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.