ADVERTISEMENT

ಹಿರೇಕೆರೂರು–ರಾಣೆಬೆನ್ನೂರಿನಲ್ಲಿ ಏರುತಿದೆ ಚುನಾವಣಾ ಕಾವು

ರೈತ ಮುಖಂಡನಿಂದ ಮೊದಲ ನಾಮಪತ್ರ ಸಲ್ಲಿಕೆ * ಸಂಪರ್ಕಕ್ಕೂ ಸಿಗದೆ ಮರೆಗೆ ಸರಿದ ಆರ್.ಶಂಕರ್

ಎಂ.ಸಿ.ಮಂಜುನಾಥ
Published 1 ಡಿಸೆಂಬರ್ 2019, 13:03 IST
Last Updated 1 ಡಿಸೆಂಬರ್ 2019, 13:03 IST
ಹನುಮಂತಪ್ಪ ಕಬ್ಬಾರ್
ಹನುಮಂತಪ್ಪ ಕಬ್ಬಾರ್   

ಹಾವೇರಿ: ‘ಸುಪ್ರೀಂ‌’ ತೀರ್ಮಾನಕ್ಕಾಗಿ ಎದುರು ನೋಡುತ್ತಿದ್ದ ಮತದಾರರು. ತಮ್ಮ ಮುಖಂಡರ ಪರವಾಗಿ ಆದೇಶ ಬರಲೆಂದು ಬಿ.ಸಿ.ಪಾಟೀಲ ಬೆಂಬಲಿಗರಿಂದ ವಿಶೇಷ ಪೂಜೆ. ಸಂಪರ್ಕಕ್ಕೂ ಸಿಗದೆ ಮರೆಗೆ ಸರಿದ ಆರ್.ಶಂಕರ್. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಬಗೆಹರಿಯದ ಗೊಂದಲ. ಈ ಬೆಳವಣಿಗೆಗಳ ನಡುವೆಯೇ ನಾಮಪತ್ರ ಸಲ್ಲಿಸಿದ ರೈತ ಮುಖಂಡ...

ಹಿರೇಕೆರೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಸೋಮವಾರ ಕಂಡು ಬಂದ ಬೆಳವಣಿಗೆಗಳು. ಹಲವು ಗೊಂದಲಗಳ ನಡುವೆಯೂ ಉಪಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ. ರಾಣೆಬೆನ್ನೂರು ಕ್ಷೇತ್ರದ ಚುನಾವಣೆಗೆ ಮಣಕೂರ ಗ್ರಾಮದ ರೈತ ಮುಖಂಡ ಹನುಮಂತಪ್ಪ ಡಿ.ಕಬ್ಬಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ, ಚುನಾವಣಾ ಪ್ರಕ್ರಿಯೆಗೆ ಮುನ್ನುಡಿ ಇಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದ್ದರಿಂದ ಅನರ್ಹ ಶಾಸಕರೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಬಿ.ಸಿ.ಪಾಟೀಲ, ‘ಅನರ್ಹಗೊಂಡ ಶಾಸಕರ ಪೈಕಿ ಕೆಲವರು ದೆಹಲಿಯಲ್ಲಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನಲ್ಲಿದ್ದಾರೆ. ಮಂಗಳವಾರ ಎಲ್ಲರೂ ಕೂತು ಮುಂದಿನ ನಡೆ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿದ್ದಾರೆ.

ADVERTISEMENT

ಮತ್ತೊಂದೆಡೆ ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಲೇ ಇದೆ. ಆಕಾಂಕ್ಷಿಗಳು ಈಗಾಗಲೇ ಫೇಸ್‌ಬುಕ್ ಹಾಗೂ ಟ್ವಿಟರ್‌ ಮೂಲಕವೇ ತಮ್ಮ ನಾಯಕರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ,ಬುಧವಾರದ ‘ಸುಪ್ರೀಂ’ ಆದೇಶ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದೆ.

‘ಕಳೆದ ಸಲ ಕೊನೇ ಕ್ಷಣದಲ್ಲಿ ಟಿಕೆಟ್ ಸಿಕ್ಕರೂ 50 ಸಾವಿರ ಮತಗಳನ್ನು ಪಡೆದಿದ್ದೇನೆ’ ಎಂದು ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಬಸವರಾಜ ಎಸ್.ಕೇಲಗಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘ಸ್ಥಳೀಯ ಕಾರ್ಯಕರ್ತರಿಗೇ ಮಣೆ ನೀಡಬೇಕು’ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದು, ವಿಶ್ವನಾಥ ಎಸ್‌.ಪಾಟೀಲ ಅವರ ಹೆಸರನ್ನು ಪರಿಗಣಿಸುವಂತೆಯೂ ಮನವಿ ಮಾಡಿದ್ದಾರೆ.ಅರುಣಕುಮಾರ ಪೂಜಾರ, ಭಾರತಿ ಮಲ್ಲಿಕಾರ್ಜುನ ಅಳವಂಡಿ ಅವರೂ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

ಕೋಳಿವಾಡ ಪುತ್ರನ ಹೆಸರು: ರಾಣೆಬೆನ್ನೂರು ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ಮಾತುಗಳು ಬಲವಾಗಿದ್ದರೂ, ಕೆಲ ಸ್ಥಳೀಯ ‘ಕೈ’ ಕಾರ್ಯಕರ್ತರ ಬಾಯಲ್ಲಿ ಅವರ ಪುತ್ರ ಪ್ರಕಾಶ್ ಕೋಳಿವಾಡ ಹೆಸರು ಹರಿದು ಬರುತ್ತಿದೆ. ಆದರೂ, ‘ನನ್ನನ್ನು ಬಿಟ್ಟು ಬೇರೆ ಯಾರೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಲ್ಲ’ ಎಂದು ಕೆ.ಬಿ.ಕೋಳಿವಾಡ ಹೇಳುತ್ತಿದ್ದಾರೆ.

‘ಎಲ್ಲಿಂದಲೋ ಬಂದವರಿಗೆ ಮಣೆ ಹಾಕಿ ಜನ 14 ತಿಂಗಳು ಅನುಭವಿಸಿದ್ದಾರೆ. ಈಗಲೂ ಅವರೇ ಎದುರಾಳಿ ಅಭ್ಯರ್ಥಿಯಾಗಿ ಬಂದರೆ ಬಹಳ ಸಂತೋಷದಿಂದ ಸ್ವಾಗತಿಸುತ್ತೇನೆ. ಅವರನ್ನು ಎದುರಿಸುವ ಸಾಮರ್ಥ್ಯವಿದೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರೂ ನನಗೆ ಬೆಂಬಲ ಕೊಟ್ಟಿದ್ದು, ಕ್ಷೇತ್ರವನ್ನು ‘ಕೈ’ವಶ ಮಾಡಿಕೊಳ್ಳಲು ಬದ್ಧನಾಗಿದ್ದೇನೆ’ ಎಂದು ಕೋಳಿವಾಡ ಪ್ರತಿಕ್ರಿಯಿಸಿದರು.

3ನೇ ಸಲ ಅದೃಷ್ಟ ಪರೀಕ್ಷೆ

ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಎರಡು ಸಲ ವಿಧಾನಸಭಾ ಚುನಾವಣೆಗಳನ್ನು ಎದುರಿಸಿರುವ ರೈತ ಮುಖಂಡ ಹನುಮಂತಪ್ಪ ಕಬ್ಬಾರ್, ಮೂರನೇ ಬಾರಿಗೆ ಅದೃಷ್ಟಪರೀಕ್ಷೆಗೆ ನಾಮಪತ್ರ ಸಲ್ಲಿಸಿದ್ದಾರೆ. ಎರಡು ಸಲ ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡಿದ್ದ ಇವರು, ‘ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಅವರಿಗಾಗಿಯೇ ಆರಿಸಿ ಬರುತ್ತೇನೆ’ ಎನ್ನುತ್ತಾರೆ.

ಈಶ್ವರಪ್ಪ ಪುತ್ರನ ಹೆಸರು

‘ರಾಣೆಬೆನ್ನೂರು ಕ್ಷೇತ್ರಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಗ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸದಸ್ಯ ಕಾಂತೇಶ್ ಅವರಿಗೆ ಟಿಕೆಟ್ ನೀಡಬೇಕು’ ಎಂದು ಬಿಜೆಪಿ ಯುವ ಮುಖಂಡ ಸಿದ್ದು ಚಿಕ್ಕಬಿದರಿ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಮೊಗ್ಗ ಜಿ.ಪಂ.ನಲ್ಲಿ ಐತಿಹಾಸಿಕ ಗೆಲವು ಸಾಧಿಸಿರುವ ಕಾಂತೇಶ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸುಕ್ಷೇತ್ರ ದೇವರಗುಡ್ಡ ಮಾಲತೇಶನ ದರ್ಶನಕ್ಕೆ ಬಂದಾಗಲೆಲ್ಲ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅತೃಪ್ತ ಶಾಸಕರು ಸ್ಪರ್ಧಿಸುವಂತಿಲ್ಲ ಎಂದಾದರೆ, ಕ್ಷೇತ್ರದಲ್ಲಿ ಅವರನ್ನೇ ಕಣಕ್ಕಿಳಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.